ಮುಂದಿನ ಆದೇಶದವರೆಗೆ ಕನ್ನಡ ಕಲಿಕೆ ಕಡ್ಡಾಯ ಬೇಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಪ್ರಸಕ್ತ ಸಾಲಿನಲ್ಲಿ 4 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅವರಿಗೆ ಕನ್ನಡ ಕಡ್ಡಾಯ ಮಾಡಿರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಪೀಠಕ್ಕೆ ವಿವರಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ.
Kannada, NEP-2020 and Karnataka HC
Kannada, NEP-2020 and Karnataka HC

ಪದವಿ ಹಂತದಲ್ಲಿ ಕನ್ನಡ ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಬಯಸದ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಮುಂದಿನ ಆದೇಶದವರೆಗೆ ಕನ್ನಡ ಕಲಿಕೆ ಕಡ್ಡಾಯ ಮಾಡದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಮತ್ತು ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅರ್ಜಿದಾರರ ಪರ ವಕೀಲರ ವಾದವನ್ನು ನಾವು ಪರಿಗಣಿಸಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಆಧರಿಸಿ ಪದವಿ ಶಿಕ್ಷಣದ ಸಂದರ್ಭದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಯನ್ನೂ ಪರಿಗಣಿಸಬೇಕು ಎಂಬ ನಿಲುವನ್ನು ಮೇಲ್ನೋಟ ನಾವು ಹೊಂದಿದ್ದೇವೆ. ಈ ಹಂತದಲ್ಲಿ ರಾಜ್ಯ ಸರ್ಕಾರವು ಭಾಷೆಯನ್ನು ಕಡ್ಡಾಯಗೊಳಿಸಬಾರದು. ತಮ್ಮ ಇಚ್ಛೆಯ ಅನುಸಾರ ಕನ್ನಡವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಅಧ್ಯಯನ ಮುಂದುವರಿಸಬಹುದಾಗಿದೆ. ಕನ್ನಡವನ್ನು ಆಯ್ಕೆ ಮಾಡಿಕೊಳ್ಳಲು ಬಯಸದ ವಿದ್ಯಾರ್ಥಿಗಳನ್ನು ಕನ್ನಡ ಅಧ್ಯಯನ ಮಾಡುವಂತೆ ಮುಂದಿನ ಆದೇಶದವರೆಗೆ ಒತ್ತಾಯ ಮಾಡಬಾರದು” ಎಂದು ಪೀಠ ಹೇಳಿದೆ.

ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಕಳೆದ ವಿಚಾರಣೆಯ ಸಂದರ್ಭದಲ್ಲಿ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್ ಅವರು “ಎನ್‌ಇಪಿ ಜಾರಿಯನ್ನು ಇಟ್ಟುಕೊಂಡು ಯಾವುದೇ ರಾಜ್ಯದಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವುದು ಸಂಕೀರ್ಣ ಸಮಸ್ಯೆಗಳಿಗೆ ನಾಂದಿ ಹಾಡಲಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿ ಭಾರತ ಸರ್ಕಾರವು ನಿರ್ಧಾರ ಕೈಗೊಳ್ಳಬೇಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಗಿಲ್ಲವಾದ್ದರಿಂದ ಕೇಂದ್ರ ಸರ್ಕಾರದ ನಿಲುವು ತಿಳಿಸುವ ಸ್ಥಿತಿಯಲ್ಲಿ ಇಲ್ಲ. ಈ ವಿಚಾರವಾಗಿ ವಿಸ್ತೃತವಾದ ಪ್ರಮಾಣ ಪತ್ರ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

Also Read
[ಕನ್ನಡ ಕಡ್ಡಾಯ] ಮುಂದಿನ ವಿಚಾರಣೆಯವರೆಗೆ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗದಿರಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಪ್ರಸಕ್ತ ಸಾಲಿನಲ್ಲಿ 4 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅವರಿಗೆ ಕನ್ನಡ ಕಡ್ಡಾಯ ಮಾಡಿರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ವಿದ್ಯಾರ್ಥಿಗಳಾದ ಶಿವಕುಮಾರ್‌ ಕೆ ಜಿ ಮತ್ತಿತರರು ಸಲ್ಲಿಸಿರುವ ಮನವಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಮನವಿ ಸಲ್ಲಿಸಿರುವ ವಿದ್ಯಾರ್ಥಿಗಳು 12ನೇ ತರಗತಿವರೆಗೆ ಕನ್ನಡ ಕಲಿತಿದ್ದಾರೆ. ಹೀಗಾಗಿ, ಅವರ ಮನವಿ ನಿರ್ವಹಣೆಗೆ ಅರ್ಹವಾಗಿಲ್ಲ. ನ್ಯಾಯಾಲಯ ಏನೇ ಆದೇಶ ಮಾಡಿದರೂ ಪೀಠದ ಮುಂದೆ ಇರುವ ಅರ್ಜಿದಾರರಿಗೆ ಸೀಮಿತವಾಗಿ ಆದೇಶ ಮಾಡಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಪೀಠವು “ನೀವು (ಎಜಿ ನಾವದಗಿ) ವಿಚಾರವನ್ನು ರಾಜಕೀಯಗೊಳಿಸಬೇಡಿ. ನಾವು ಎಲ್ಲಾ ವಿದ್ಯಾರ್ಥಿಗಳಿಗೂ ಇದನ್ನು ಸ್ಪಷ್ಟಪಡಿಸಿದ್ದೇವೆ” ಎಂದು ಹೇಳಿದ್ದು, ವಿದ್ಯಾರ್ಥಿಗಳ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ಶ್ರೀಧರ್‌ ಪ್ರಭು ಮನವಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಅನುಮತಿಸಿದೆ. ಅಲ್ಲದೇ, ಕೇಂದ್ರ ಸರ್ಕಾರಕ್ಕೂ ಅಫಿಡವಿಟ್‌ ಸಲ್ಲಿಕೆಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಸಂಸ್ಕೃತ ಭಾರತಿ ಟ್ರಸ್ಟ್‌ ಪರವಾಗಿ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಹಾಜರಿದ್ದರು.

Kannada Bar & Bench
kannada.barandbench.com