ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಾಲಕ್ಕೆ ಭದ್ರತೆಯಾಗಿ ನೀಡಿದ್ದ ರೂ. 5.02 ಕೋಟಿ ಮೌಲ್ಯದ ಚೆಕ್ ಬೌಕ್ಸ್ ಆಗಿದ್ದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಖಾಸಗಿ ದೂರಿನ ವಿಚಾರಣೆಯನ್ನು ಮತ್ತೊಮ್ಮೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ 2ನೇ ಪ್ರಥಮ ದರ್ಜೆ ಕಿರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ (ಜೆಎಂಎಫ್‌ಸಿ) ಆದೇಶಿಸಿದೆ.
ಚಿಕ್ಕೋಡಿಯ ಬೀರೇಶ್ವರ ಕ್ರೆಡಿಟ್ ಕೋ-ಆಪ್‌ರೇಟಿವ್ ಸೊಸೈಟಿ ಸಲ್ಲಿಸಿದ್ದ ಕ್ರಿಮಿನಲ್ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ರಮೇಶ್ ಜಾರಕಿಹೊಳಿ ಅವರು ಬೀರೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಸಾಲ ಪಡೆದಿದ್ದು, ಅದಕ್ಕೆ ಭದ್ರತೆಯಾಗಿ ರೂ.5.02 ಕೋಟಿ ಮೊತ್ತ ಚೆಕ್ ನೀಡಿದ್ದರು. ಈ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ, 2016ರ ಜನವರಿ 28ರಂದು ಸೊಸೈಟಿಯು ಖಾಸಗಿಯಾಗಿ ಕ್ರಿಮಿನಲ್ ದೂರು ದಾಖಲಿಸಿತ್ತು.
ಈ ಪ್ರಕರಣದ ವಿಚಾರಣೆಯನ್ನು 2019ರ ನವೆಂಬರ್ 20ರಂದು ಚಿಕ್ಕೋಡಿಯ 2ನೇ ಜೆಎಂಎಫ್‌ಸಿ ನ್ಯಾಯಾಲಯ ನಡೆಸಿತ್ತು. ಅಂದು ಸೊಸೈಟಿಯ ವಕೀಲರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಇದನ್ನು ಪರಿಗಣಿಸಿ ಅಧೀನ ನ್ಯಾಯಾಲಯವು ಪ್ರಕರಣವನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸೊಸೈಟಿಯು ಹೈಕೋರ್ಟ್ ಮೆಟ್ಟಿಲೇರಿತ್ತು.