[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ಮುಖ್ಯಸ್ಥರ ಗೈರಿನಲ್ಲಿ ತನಿಖೆ ಮುಂದುವರಿಕೆ ಹೇಗೆ? ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಎಸ್‌ಐಟಿ ರಚನೆಯ ಸಿಂಧುತ್ವ ಮತ್ತು ಸರಿಯಾದ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆಯೇ ಎಂಬ ಎರಡು ಪ್ರಶ್ನೆಗಳು ಉದ್ಭವಿಸಿವೆ. ಸಂವಿಧಾನದತ್ತವಾಗಿ 226 ಮತ್ತು 482ನೇ ವಿಧಿಯಡಿ ದೊರೆತಿರುವ ಅಧಿಕಾರ ಬಳಸಿ ಇದನ್ನು ಪರಿಶೀಲಿಸಲಾಗುವುದು ಎಂದ ಪೀಠ.
Ramesh Jarakiholi and Karnataka HC
Ramesh Jarakiholi and Karnataka HC

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿ ಮತ್ತು ಎಸ್‌ಐಟಿ ರಚನೆ ಅಥವಾ ಮಾರ್ಪಾಡಿನ (ಮುಖರ್ಜಿಯವರ ಅನುಪಸ್ಥಿತಿಯಲ್ಲಿ ಎಸ್‌ಐಟಿ ಹೊಣೆಯನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಿಕೊಡುವುದು) ಕುರಿತು ಆದೇಶ ಮಾಡದೆ ತನಿಖೆಯನ್ನು ಹೇಗೆ ಮುಂದುವರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಪ್ರಶ್ನಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು “ಎಸ್‌ಐಟಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ವರದಿ ಸಲ್ಲಿಸುತ್ತದೆ ಎಂಬುದು ಬೇರೆಯ ಮಾತು. ಆದರೆ, ಎಸ್‌ಐಟಿ ಮುಖಸ್ಥರ ಅನುಪಸ್ಥಿತಿಯಲ್ಲಿ ಹೇಗೆ ತನಿಖೆ ಮುಂದುವರಿಸಲಾಗುತ್ತಿದೆ. ಹೀಗೆ ಮಾಡಲಾಗದು. ಸೌಮೇಂದು ಮುಖರ್ಜಿ ರಜೆಯ ಮೇಲೆ ತೆರಳಿದರೆ ಮತ್ತೊಬ್ಬ ಹಿರಿಯ ಅಧಿಕಾರಿಗೆ ತನಿಖೆಯ ಹೊಣೆ ವಹಿಸಬೇಕಿತ್ತು” ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಸೌಮೇಂದು ಮುಖರ್ಜಿ ಅವರು ವೈದ್ಯಕೀಯ ಕಾರಣದ ಹಿನ್ನೆಲೆಯಲ್ಲಿ ಮೇ 1ರಿಂದ ರಜೆಯಲ್ಲಿದ್ದರೆ ಎಸ್‌ಐಟಿಯನ್ನು ಬೆಂಗಳೂರು ಪೊಲೀಸ್‌ ಆಯುಕ್ತರು ಏಕೆ ಪುನಾರಚನೆ ಮಾಡಿಲ್ಲ. ಈ ಕುರಿತು ತನ್ನ ನಿಲುವನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪೀಠ ಹೇಳಿದ್ದು, ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರಿಗೆ ಸೂಚಿಸಿತು.

ಯಾವ ಮನವಿಗಳಲ್ಲಿ ರಮೇಶ ಜಾರಕಿಹೊಳಿ ಅವರನ್ನು ಪ್ರತಿವಾದಿಯಾಗಿಸಲಾಗಿದೆಯೋ ಅವೆಲ್ಲದಕ್ಕೂ ಆಗಸ್ಟ್‌ 3ರ ಒಳಗೆ ಆಕ್ಷೇಪಣೆ ದಾಖಲಿಸುವಂತೆ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರಿಗೆ ಪೀಠವು ಸೂಚಿಸಿತು. ಆಕ್ಷೇಪಣೆಗೆ ಸಂಬಂಧಿಸಿದಂತೆ ಪ್ರತ್ಯುತ್ತರ ದಾಖಲಿಸುವ ಅಗತ್ಯಬಿದ್ದರೆ ಅರ್ಜಿದಾರರರು ಆಗಸ್ಟ್‌ 8ರ ಒಳಗೆ ಅದನ್ನು ದಾಖಲಿಸಬೇಕು ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಿತು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ತನಿಖೆಯು ದುರ್ಬಲವಾಗಿದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.

ಇದಕ್ಕೆ ಆಕ್ಷೇಪಿಸಿದ ಸಂತ್ರಸ್ತೆಯ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ “ತನಿಖೆ ದುರ್ಬಲವಾಗಿದೆಯೇ ಇಲ್ಲವೇ ಎಂಬುದರಾಚೆಗೆ ಸರ್ಕಾರಕ್ಕೆ ಎಸ್‌ಐಟಿ ರಚಿಸುವ ಅಧಿಕಾರವಿದೆಯೇ ಎಂಬ ಪ್ರಶ್ನೆ ಉಳಿಯುತ್ತದೆ. ಸಂತ್ರಸ್ತೆಯ ದೂರು ಸರಿಯಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದರ ಅರ್ಥವೇನು? ಇದರರ್ಥ ಎಸ್‌ಐಟಿ ವರದಿಯು ಪಕ್ಷಪಾತದಿಂದ ಕೂಡಿದೆ ಎಂಬುದಾಗಿದೆ” ಎಂದು ವಾದಿಸಿದರು.

ಜೈಸಿಂಗ್‌ ಅವರ ಪ್ರಶ್ನೆಗಳು ಸರಿಯಾಗಿವೆ ಎಂದಿರುವ ಪೀಠವು ಈ ಪ್ರಶ್ನೆಗಳನ್ನು ಸರಿಯಾದ ಸಂದರ್ಭದಲ್ಲಿ ಪರಿಗಣಿಸುವುದಾಗಿ ಹೇಳಿತು.

ಇದಕ್ಕೆ ಆಕ್ಷೇಪಿಸಿದ ಜಾರಕಿಹೊಳಿ ಪರ ವಕೀಲ ನಾಗೇಶ್‌ ಅವರು “ದೂರುದಾರೆಯ ಆರೋಪಗಳಲ್ಲಿ ಹುರುಳಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದರೆ ಇದು ದುರುದ್ದೇಶದ ಕ್ರಮ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ʼಹೌದು ಇದು ದುರುದ್ದೇಶದ ಕ್ರಮʼ ಎಂದು ಜೈಸಿಂಗ್‌ ಸಮರ್ಥಿಸಿದರು.

ಆಗ ಮಧ್ಯಪ್ರವೇಶಿಸಿದ ಪೀಠವು ಈ ವಿಚಾರವನ್ನು ನಾವು ಸದ್ಯಕ್ಕೆ ಪರಿಗಣಿಸುತ್ತಿಲ್ಲ. “ಎಸ್‌ಐಟಿಯ ರಚನೆಯ ಸಿಂಧುತ್ವ ಮತ್ತು ಸರಿಯಾದ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆಯೇ ಎಂಬ ಎರಡು ಪ್ರಶ್ನೆಗಳು ಉದ್ಭವಿಸಿವೆ. ಸಂವಿಧಾನದತ್ತವಾಗಿ 226 ಮತ್ತು 482ನೇ ವಿಧಿಯ ಅನ್ವಯ ದೊರೆತಿರುವ ಅಧಿಕಾರ ಬಳಸಿ ನ್ಯಾಯಾಲಯವು ಇದನ್ನು ಪರಿಶೀಲಿಸಲಿದೆ” ಎಂದು ಪೀಠವು ಹೇಳಿತು.

ಇದಕ್ಕೆ ಇಂದಿರಾ ಜೈಸಿಂಗ್‌ ಅವರು “ತನಿಖೆಯು ನ್ಯಾಯಯುತವಾಗಿ ನಡೆಯುತ್ತದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ಯಾವ ಕಾರಣಕ್ಕಾಗಿ, ಯಾವ ಮಾನದಂಡಗಳ ಆಧಾರದಲ್ಲಿ ಮತ್ತು ಯಾರು ಎಸ್‌ಐಟಿ ರಚಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಒಂದೊಮ್ಮೆ ನ್ಯಾಯಾಲಯವು ಎಸ್‌ಐಟಿ ರಚಿಸಿದ್ದರೆ ಈ ಪ್ರಶ್ನೆಗಳು ಉದ್ಭವಿಸುತ್ತಿರಲಿಲ್ಲ” ಎಂದರು.

Also Read
[ಜಾರಕಿಹೊಳಿ ಸಿ.ಡಿ ಪ್ರಕರಣ] ಲಿಖಿತ ಆಕ್ಷೇಪಣೆ ಸಲ್ಲಿಸಲು ಜಾರಕಿಹೊಳಿ, ಎಸ್‌ಐಟಿಗೆ ಅಂತಿಮ ಅವಕಾಶ ನೀಡಿದ ಹೈಕೋರ್ಟ್‌

ವಿಚಾರಣೆಯ ಆರಂಭದಲ್ಲಿ ಇಂದಿರಾ ಜೈಸಿಂಗ್‌ ಅವರು “ಎಸ್‌ಐಟಿಯ ಪೂರ್ಣ ವರದಿಯು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ವರದಿಯಾಗಿದೆ. ಎಸ್‌ಐಟಿಯ ಈ ನಡೆಯು ನ್ಯಾಯಾಂಗ ನಿಂದನೆಯಾಗುತ್ತದೆ” ಎಂದು ನ್ಯಾಯಾಲಯದ ಗಮನಸೆಳೆದರು.

ಇದಕ್ಕೆ ಪೀಠವು, “ತನಿಖೆಯ ಬಗ್ಗೆ ಮಾಧ್ಯಮಗಳಿಗೆ ಪೊಲೀಸ್‌ ಅಧಿಕಾರಿಗಳು ಮಾಹಿತಿ ಸೋರಿಕೆ ಮಾಡುವುದು ಸರಿಯಾದ ಕ್ರಮವಲ್ಲ. ಈ ಸಂಬಂಧ ಜುಲೈ 18ರಂದು ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಸರ್ಕಾರವು ಸುತ್ತೋಲೆಯನ್ನೂ ಹೊರಡಿಸಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗಿರುವ ವರದಿಯನ್ನು ನಾವು ಗಮನಿಸಿಲ್ಲ. ಹೀಗಾಗಿ, ಪತ್ರಿಕೆಯ ವರದಿಯೊಂದಿಗೆ ನಿಮ್ಮ ಆಕ್ಷೇಪಣೆಯನ್ನು ಸೇರಿಸಿ ಅರ್ಜಿ ಸಲ್ಲಿಸಿ” ಎಂದು ಪೀಠ ಹೇಳಿತು.

Also Read
ಜಾರಕಿಹೊಳಿ ಸಿ ಡಿ ಪ್ರಕರಣ: ಎಸ್‌ಐಟಿ ಮುಖ್ಯಸ್ಥರ ಸಹಿ ಇರದ ಸ್ಥಿತಿಗತಿ ವರದಿಯನ್ನು ಪುರಸ್ಕರಿಸದ ಹೈಕೋರ್ಟ್

ಯಾವ ಪ್ರಕರಣದ ವಿಚಾರಣೆಗೆ ಎಸ್‌ಐಟಿ ರಚಿಸಲಾಗಿದೆ ಎಂಬ ಪ್ರಶ್ನೆ ಎದುರಾದಾಗ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ರಮೇಶ ಜಾರಕಿಹೊಳಿ ಅವರು ತಮ್ಮ ಅಹವಾಲುಗಳನ್ನು ಒಳಗೊಂಡು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾರ್ಚ್‌ 11ರಂದು ಎಸ್‌ಐಟಿ ರಚಿಸಲಾಗಿದೆಯೇ ವಿನಾ ವಾಸ್ತವದಲ್ಲಿ ದಾಖಲಾಗಿರುವ ಯಾವುದೇ ದೂರುಗಳ ವಿಚಾರಣೆ ನಡೆಸಲು ಎಸ್‌ಐಟಿ ರಚಿಸಲಾಗಿಲ್ಲ. ಆದರೆ, ಬೆಂಗಳೂರು ಪೊಲೀಸ್‌ ಆಯುಕ್ತರು ತಮ್ಮ ಶಾಸನಬದ್ಧ ಅಧಿಕಾರ ಬಳಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳನ್ನು ಎಸ್‌ಐಟಿ ವರ್ಗಾಯಿಸಿದ್ದಾರೆ. ಇದನ್ನು ಆಧರಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ” ಎಂದು ಸಮರ್ಥನೆ ನೀಡಿದರು.

Also Read
[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ರಚನೆ ನ್ಯಾಯಯುತ, ಪಿಐಎಲ್‌ ನಿರ್ವಹಣೆಗೆ ಅರ್ಹವಲ್ಲ- ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಕೆ

ಒಂದು ಹಂತದಲ್ಲಿ ಪೀಠವು “ಎಸ್‌ಐಟಿ ಯಾವುದೇ ಪ್ರಕರಣದ ವಿಚಾರಣೆ ನಡೆಸಬಾರದು ಎಂಬುದು ನಿಮ್ಮ ವಾದವೇ” ಎಂದು ನಾಗೇಶ್‌ ಅವರನ್ನು ಪ್ರಶ್ನಿಸಿತು. ಇದಕ್ಕೆ ನಾಗೇಶ್‌ ಅವರು ಇಲ್ಲ ಎಂದು ಉತ್ತರಿಸಿದರು.

ಜಾರಕಿಹೊಳಿ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯ ಬದಲಿಗೆ ಕೇಂದ್ರೀಯ ತನಿಖಾ ಸಂಸ್ಥೆಗೆ ತನಿಖೆ ವರ್ಗಾಯಿಸುವಂತೆ ಕೋರಿ ಗೀತಾ ಮಿಶ್ರಾ ಎಂಬವರು ವಕೀಲ ಜಿ ಆರ್‌ ಮೋಹನ್‌ ಅವರ ಮೂಲಕ ಸಲ್ಲಿಸಿರುವ ಮನವಿ ಮತ್ತು ಅರ್ಜಿದಾರ ಉಮೇಶ್‌ ಎಂಬವರು ವಕೀಲ ಬಿ ವಿ ಶಂಕರನಾರಾಯಣ ರಾವ್‌ ಅವರ ಮೂಲಕ ಹೊಸದಾಗಿ ಪ್ರಕರಣದ ತನಿಖೆ ನಡೆಸುವಂತೆ ಕೋರಿದ್ದ ಮನವಿಗಳು ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಒಳಪಟ್ಟಿದ್ದವು. ಈಗ, ಪ್ರತ್ಯೇಕ ಪೀಠದ ಮುಂದೆ ಇದ್ದ ಎಸ್‌ಐಟಿ ವಜಾ ಮಾಡಿ, ಮರು ತನಿಖೆಗೆ ಆದೇಶಿಸುವಂತೆ ಕೋರಿದ್ದ ಸಂತ್ರಸ್ತೆಯ ಮನವಿ ಹಾಗೂ ಬೆಂಗಳೂರಿನ ಸದಾಶಿವನಗರದಲ್ಲಿ ಆರೋಪಿ ರಮೇಶ ಜಾರಕಿಹೊಳಿ ದಾಖಲಿಸಿರುವ ದೂರನ್ನು ವಜಾ ಮಾಡುವಂತೆ ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಅವರ ಮೂಲಕ ಸಲ್ಲಿಸಿರುವ ಮನವಿಗಳೂ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠಕ್ಕೆ ವರ್ಗಾವಣೆಯಾಗಿವೆ.

ಜಾರಕಿಹೊಳಿ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಒಟ್ಟಾಗಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ನಡೆಸಬೇಕು ಎಂಬ ಮನವಿಯನ್ನು ಹಿಂದೆ ಸಂತ್ರಸ್ತೆ ಪರ ವಕೀಲ ಇಂದಿರಾ ಜೈಸಿಂಗ್‌ ಮಾಡಿದ್ದರು. ನ್ಯಾಯಾಲಯವು ಈ ಸಂಬಂಧ ಅರ್ಜಿ ಹಾಕುವಂತೆ ಸೂಚಿಸಿತ್ತು. ಅರ್ಜಿ ಹಾಕಲಾಗಿರುವುದರಿಂದ ಎಲ್ಲಾ ಪ್ರಕರಣಗಳು ಈಗ ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ವಿಚಾರಣೆಗೆ ಒಳಪಟ್ಟಿವೆ.

Kannada Bar & Bench
kannada.barandbench.com