Senthil Balaji Facebook
ಸುದ್ದಿಗಳು

ತಮಿಳುನಾಡು ಸಚಿವನಿಗೆ ಮಧ್ಯಂತರ ಜಾಮೀನು ನಿರಾಕರಿಸಿದ ಚೆನ್ನೈ ನ್ಯಾಯಾಲಯ; ಆಸ್ಪತ್ರೆಯಲ್ಲಿಯೇ ವಿಚಾರಣೆಗೆ ಅನುಮತಿ

Bar & Bench

ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಚೆನ್ನೈ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.

ಇದೇ ವೇಳೆ ಪ್ರಸ್ತುತ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಚಿವರನ್ನು ಅಲ್ಲಿಯೇ ಕಸ್ಟಡಿ ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ ಮಾಡಿದ್ದ ಮನವಿಯನ್ನು ಚೆನ್ನೈನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎಸ್ ಅಳ್ಳಿ ಅವರು ಪುರಸ್ಕರಿಸಿದರು.

ಬಾಲಾಜಿ ಅವರು ವೈದ್ಯಕೀಯ ಆರೈಕೆಯಲ್ಲಿ ಕಾವೇರಿ ಆಸ್ಪತ್ರೆಯಲ್ಲಿಯೇ ಇರಲಿದ್ದು ಜಾರಿ ನಿರ್ದೇಶನಾಲಯ ಆಸ್ಪತ್ರೆಯಲ್ಲಿ ಸಚಿವರನ್ನು ವಿಚಾರಣೆಗೊಳಪಡಿಸಬಹುದು ಎಂದು ನ್ಯಾಯಾಧೀಶ ಆಳ್ಳಿ ತಿಳಿಸಿದರು.

ಎಂಟು ದಿನಗಳ ಕಾಲ ಕಸ್ಟಡಿ ವಿಚಾರಣೆಗೆ ಅವಕಾಶ ನೀಡಿರುವ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕ ಜೂನ್ 23 ರಂದು ನ್ಯಾಯಾಲಯದೆದುರು ಬಾಲಾಜಿ ಅವರನ್ನು ಹಾಜರುಪಡಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.

ವೈದ್ಯಕೀಯ ಕಾರಣಗಳಿಗಾಗಿ ಬಾಲಾಜಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸೆಷನ್ಸ್ ನ್ಯಾಯಾಲಯ, ಸಚಿವರು ಈಗಾಗಲೇ ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು ಅವರು ಮಾಡಿದ್ದಾರೆ ಎನ್ನಲಾದ ʼಅಪರಾಧದ ಗಂಭೀರತೆ ಮತ್ತು ಮಹತ್ವʼವನ್ನು ಅರಿತು ಮಧ್ಯಂತರ ವೈದ್ಯಕೀಯ ಜಾಮೀನು ನೀಡುತ್ತಿಲ್ಲ ಎಂದಿದೆ.

ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಬಂಧಿತರಾದ ಸಚಿವರು ಎದೆನೋವು ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಅವರಿಗೆ ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆ ನಡೆಸಲಾಗಿತ್ತು.

ಸಚಿವರನ್ನು ಜೂನ್ 28 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶ ಅಳ್ಳಿ ಅವರು ಜೂನ್ 14ರಂದು ಆದೇಶಿಸುವ ಮುನ್ನ ಅದೇ ದಿನ ಬಾಲಾಜಿ ಅವರ ಆರೋಗ್ಯ ಸ್ಥಿತಿ  ಪರಿಶೀಲಿಸಲು ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಇತ್ತ ಬಾಲಾಜಿ ಅವರ ಪತ್ನಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜೂನ್ 15ರಂದು ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ನೀಡಿದ ಅನುಮತಿ ಮೇರೆಗೆ ಸಚಿವರು ಖಾಸಗಿ ವೈದ್ಯಕೀಯ ಸಂಸ್ಥೆಯಾದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.

ಜಾರಿ ನಿರ್ದೇಶನಾಲಯದ ಪ್ರಶ್ನೆಗಳಿಗೆ ಉತ್ತರಿಸಲು ಬಾಲಾಜಿ ಅವರಿಗೆ ಆಕ್ಷೇಪಣೆ ಇಲ್ಲವಾದರೂ ಅವರು ನ್ಯಾಯಾಂಗ ಬಂಧನದಲ್ಲಿರಲಿ ಎಂದು ಹೈಕೋರ್ಟ್‌ ಹೇಳಿದ್ದರೂ ಜಾರಿ ನಿರ್ದೇಶನಾಲಯದ ಕಸ್ಟಡಿ ವಿಚಾರಣೆಗೆ ಅನುಮತಿ ನೀಡಿರುವ ಪ್ರಧಾನ ಸೆಷನ್ಸ್‌ ನ್ಯಾಯಾಧೀಶರ ಆದೇಶ ʼನ್ಯಾಯಾಂಗ ಅನುಚಿತʼ ಕ್ರಮವಾಗಿದೆ ಎಂದು ಕೆಳ ನ್ಯಾಯಾಲಯದ ಆದೇಶಕ್ಕೆ, ಹಿರಿಯ ವಕೀಲ ಎನ್‌ ಆರ್ ಇಳಂಗೋ ಆಕ್ಷೇಪ ವ್ಯಕ್ತಪಡಿಸಿದ್ದರು. ಬಾಲಾಜಿ ಪತ್ನಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಜೂನ್ 22ರಂದು ಹೈಕೋರ್ಟ್ ನಲ್ಲಿ ನಡೆಸಲಿದೆ.