ಮುಹಮ್ಮದ್ ಜುಬೈರ್
ಮುಹಮ್ಮದ್ ಜುಬೈರ್  
ಸುದ್ದಿಗಳು

ಅಪ್ರಾಪ್ತೆಗೆ ಕಿರುಕುಳ ಆರೋಪ: ಛತ್ತೀಸ್‌ಗಡ ಹೈಕೋರ್ಟಿನಿಂದಲೂ ‘ಆಲ್ಟ್ ನ್ಯೂಸ್’ ಜುಬೈರ್ ಗೆ ಮಧ್ಯಂತರ ಪರಿಹಾರ

Bar & Bench

ಅಪ್ರಾಪ್ತ ಬಾಲಕಿಗೆ ಟ್ವೀಟ್ ಮೂಲಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಟ್ನ್ಯೂಸ್ ಸುದ್ದಿಸಂಸ್ಥೆ ಸಹಸಂಸ್ಥಾಪಕ ಮುಹಮ್ಮದ್ ಜುಬೈರ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಛತ್ತೀಸ್‌ಗಡ ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ಹೊರಡಿಸಿದೆ.

ರಾಯ್‌ಪುರದಲ್ಲಿ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಜುಬೈರ್ ಛತ್ತೀಸ್‌ಗಡ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಮಾಹಿತಿ ತಂತ್ರಜ್ಞಾನ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳನ್ನು ಎಫ್‌ಐಆರ್ ಉಲ್ಲೇಖಿಸಿದೆ. ನ್ಯಾಯಮೂರ್ತಿ ಸಂಜಯ್ ಕೆ ಅಗ್ರವಾಲ್ ವಿಚಾರಣೆ ವೇಳೆ ಹೀಗೆ ಅಭಿಪ್ರಾಯಪಟ್ಟಿದ್ದಾರೆ:

“... ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನಿರ್ದೇಶಿಸಲಾಗಿದೆ"
ಛತ್ತೀಸ್‌ಗಡ ಹೈಕೋರ್ಟ್

ಮುಂದಿನ ವಿಚಾರಣೆಯನ್ನು ನವೆಂಬರ್ 5 ಕ್ಕೆ ನಿಗದಿಪಡಿಸಲಾಗಿದೆ.

ರಾಯಪುರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳನ್ನೇ ದೆಹಲಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿಯೂ ಮಾಡಲಾಗಿದೆ. ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಇತ್ತೀಚಿಗೆ ನೀಡಿದ ತೀರ್ಪಿನ ವೇಳೆ ಒಂದೇ ಬಗೆಯ ಆರೋಪ ಇರುವ ಎರಡನೇ ಎಫ್ಐಆರ್ ಗೆ ಅನುಮತಿ ಇಲ್ಲ ಎಂದಿದೆ ಎಂಬುದಾಗಿ ಜುಬೈರ್‌ ಪರ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ನ್ಯಾಯಾಲಯದ ಗಮನ ಸೆಳೆದರು.

ಈ ಹಿಂದೆ ದೆಹಲಿ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ದೆಹಲಿ ಹೈಕೋರ್ಟ್ ನೋಟಿಸ್ ನೀಡಿತ್ತು ಮತ್ತು ಜುಬೇರ್ ಅವರಿಗೆ ಮಧ್ಯಂತರ ರಕ್ಷಣೆ ಒದಗಿಸಿತ್ತು.

ಅರ್ಜಿದಾರರ (ಜುಬೈರ್) ಪರವಾಗಿ ಮಧ್ಯಂತರ ಪರಿಹಾರ ನೀಡಲು ಇದು ತಕ್ಕ ಪ್ರಕರಣ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ, ಪ್ರಕರಣದ ಸಂಗತಿಗಳು ಮತ್ತು ದಾಖಲೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ದೆಹಲಿ ಹೈಕೋರ್ಟ್ ಈಗಾಗಲೇ ಮಧ್ಯಂತರ ಪರಿಹಾರ ನೀಡಿದೆ ಎಂದು ಕೂಡ ಕೋರ್ಟ್ ತಿಳಿಸಿದೆ.

ಜಗದೀಶ್ ಸಿಂಗ್ ಎಂಬುವವರಿಗೆ ಟ್ವಿಟರ್ ಹ್ಯಾಂಡಲ್ @ JSINGH2252 ನಿಂದ ನೀಡಿದ ಪ್ರತಿಕ್ರಿಯೆಯಲ್ಲಿ ಜುಬೈರ್ ಅವರು “ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ವೃತ್ತಿ ಬಗ್ಗೆ ನಿಮ್ಮ ಮುದ್ದಾದ ಮೊಮ್ಮಗಳಿಗೆ ತಿಳಿದಿದೆಯೇ? ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ನಾನು ನಿಮಗೆ ಸೂಚಿಸುತ್ತೇನೆ” ಎಂದು ಹೇಳಿದ್ದರು. ಆಗಸ್ಟ್ ಆರರಂದು ಅವರು ಮಾಡಿದ್ದ ಟ್ವೀಟ್ ನಲ್ಲಿ ಮಗುವಿನ ಚಿತ್ರವನ್ನು ಜುಬೈರ್ ಮಸುಕಾಗಿಸಿದ್ದರು.

ಹಿರಿಯ ವಕೀಲ ಗೊನ್ಸಾಲ್ವೆಸ್ ಅವರಲ್ಲದೆ, ಜುಬೈರ್ ಪರ ವಕೀಲ ಕಿಶೋರ್ ನಾರಾಯಣ್ , ಛತ್ತೀಸ್‌ಗಡ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ರವಿ ಭಗತ್, ಎರಡನೇ ಪ್ರತಿವಾದಿ ಪರವಾಗಿ ವಕೀಲ ಉಮೇಶ್ ಶರ್ಮಾ ಹಾಜರಿದ್ದರು.

ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ನಿಗದಿಗೊಳಿಸುವ ಮೊದಲು ಸೆಪ್ಟೆಂಬರ್ 9 ರಂದು ದೆಹಲಿ ಹೈಕೋರ್ಟ್ ಜುಬೇರ್ ಅವರಿಗೆ ಮಧ್ಯಂತರ ರಕ್ಷಣೆ ನೀಡಿತ್ತು.

ಛತ್ತೀಸ್‌ಗಡ ಹೈಕೋರ್ಟ್ ಆದೇಶವನ್ನು ಇಲ್ಲಿ ಓದಿ:

Muhammed_Zubair_v__State_of_Chhattisgarh.pdf
Preview