ತಮ್ಮ ಯೂಟ್ಯೂಬ್ ಕಾರ್ಯಕ್ರಮ ‘ದಿ ವಿನೋದ್ ದುವಾ ಶೋ’ನಲ್ಲಿ ಮಾಡಿದ ಕೆಲವು ಆರೊಪಗಳ ಕುರಿತಂತೆ ದಾಖಲಾಗಿದ್ದ ಎಫ್ಐಆರ್ ಪ್ರಶ್ನಿಸಿ ಪತ್ರಕರ್ತ ವಿನೋದ್ ದುವಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಂಗಳವಾರ ಆದೇಶಗಳನ್ನು ಕಾಯ್ದಿರಿಸಿತು.
ಕಾರ್ಯಕ್ರಮದಲ್ಲಿ ದುವಾ ಆಡಿದ ಮಾತುಗಳು ಕೋಮುದ್ವೇಷ, ಶಾಂತಿಭಂಗಕ್ಕೆ ಕಾರಣವಾಗಲಿದ್ದು ಕೋಮು ಸಾಮರಸ್ಯವನ್ನು ಕದಡುವಂತಿವೆ ಎಂದು ಅವರ ವಿರುದ್ಧ ಆರೋಪ ಮಾಡಲಾಗಿತ್ತು. ದುವಾ ವಿರುದ್ಧ ದೇಶದ್ರೋಹ, ಗಲಭೆಗೆ ಪ್ರಚೋದನೆ, ಸರ್ಕಾರಿ ಸಂಸ್ಥೆಗಳ ಆದೇಶ ಪಾಲನೆಯಲ್ಲಿ ಅವಿಧೇಯತೆ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ವಿನೀತ್ ಸರಣ್ ಅವರಿದ್ದ ಪೀಠ ಪ್ರಕರಣವನ್ನು ಮುಂದೂಡಿದೆ. ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರ ಪರವಾಗಿ ಮಹೇಶ್ ಜೇಠ್ಮಲಾನಿ, ಹಾಗೂ ದುವಾ ಅವರ ಪರವಾಗಿ ವಿಕಾಸ್ ಸಿಂಗ್ ವಾದ ಮಂಡಿಸಿದರು.
ಪ್ರಕರಣದ ಎಲ್ಲಾ ಕಡೆಯವರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ಕೋರ್ಟ್ ಮೂರು ದಿನಗಳ ಕಾಲಾವಕಾಶ ನೀಡಿದೆ.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಿಮಾಚಲಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸುವಂತೆ ದುವಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ತಮ್ಮ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿರುವುದು ಅನುಚಿತ ಎಂದು ಅವರು ವಾದಿಸಿದ್ದರು. ಜೂನ್ ತಿಂಗಳಲ್ಲಿ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ದುವಾ ಬಂಧನಕ್ಕೆ ತಡೆಯಾಜ್ಞೆ ವಿಧಿಸಿತ್ತು. ಆದರೆ ಅವರ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು. ಅವರ ವಿರುದ್ಧದ ಎಫ್ಐಆರ್ ಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ಸೂಕ್ತ ನೋಟಿಸ್ ನೀಡಿ ಹಿಮಾಚಲ ಪ್ರದೇಶ ಪೊಲೀಸರು ದುವಾ ಅವರ ದೆಹಲಿ ನಿವಾಸದಲ್ಲಿ ವಿಚಾರಣೆ ನಡೆಸಬಹುದು ಎಂದು ಕೂಡ ಕೋರ್ಟ್ ಹೇಳಿತ್ತು.
ಕಲಾಪದ ಮುಖ್ಯಾಂಶಗಳು
ಒಂದೇ ಒಂದು ಸಂಜ್ಞೇಯ ಅಪಾರಧ ಮಾಡಿದ್ದರೂ ಕೂಡ ಎಫ್ಐಆರ್ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಪುನರುಚ್ಚರಿಸಿದರು. ಕಾರ್ಯಕ್ರಮ ಪರೋಕ್ಷವಾಗಿ ಜನರನ್ನು ಗಲಭೆಗೆ ಪ್ರಚೋದಿಸುವ ಮಾರ್ಗವಾಗಿದೆ. ಅಪರಾಧ ಸಾಬೀತುಪಡಿಸಲು ನಿಜವಾಗಿಯೂ ಗಲಭೆ ಸಂಭವಿಸಬೇಕಾಗಿಲ್ಲ ಎಂದು ಅವರು ಹೇಳಿದರು.
ಅಲ್ಲದೆ ದುವಾ ಅವರು ಸದುದ್ದೇಶದಿಂದ ಮಾತನಾಡಿದ್ದರು ಎಂಬ ಹೇಳಿಕೆಯನ್ನು ಈಗ ಪರಿಗಣಿಸಬೇಕಿಲ್ಲ. ಘಟನೆಯ ವಿವಾದಾತ್ಮಕ ಪ್ರಶ್ನೆಗಳು ಇರುವಾಗ ಎಫ್ಐಆರ್ ರದ್ದುಗೊಳಿಸಲು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಅಥವಾ ಸಂವಿಧಾನದ 32 ನೇ ಪರಿಚ್ಛೇದದಡಿಯಲ್ಲಿ ಅಧಿಕಾರ ಚಲಾಯಿಸಲಾಗದು ಎಂದು ಅವರು ಪ್ರತಿಪಾದಿಸಿದರು.
ಪತ್ರಕರ್ತರ ವಿರುದ್ಧದ ಪ್ರಕರಣಗಳ ನೋಂದಣಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಬೇಕೇ ಎಂಬ ಪ್ರಶ್ನೆಗೆ ರಾಜು ಹೀಗೆ ಉತ್ತರಿಸಿದ್ದಾರೆ:
…ಯಾರು ಬೇಕಾದರೂ ಪತ್ರಕರ್ತರಾಗಬಹುದು. ಯಾವುದೇ ಅರ್ಹತೆಗಳಿಲ್ಲ. ಯಾವುದೇ ಪರಿಣತಿಯ ಅಗತ್ಯ ಇರುವುದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಪತ್ರಕರ್ತನಾಗಬಹುದು. ಎಂಸಿಐ ವೈದ್ಯರಿಗೆ ಹೇಗೆ ನಿಯಂತ್ರಣ ಹೇರುತ್ತದೋ ಅಂತಹ ಯಾವುದೇ ನಿಯಂತ್ರಣ ಇಲ್ಲಿಲ್ಲ. ಇದು (ಪತ್ರಿಕೋದ್ಯಮ) ಒಂದು ವೃತ್ತಿಯಲ್ಲ, ಬದಲಿಗೆ ಒಂದು ಚಟುವಟಿಕೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು
ಪ್ರಾಥಮಿಕ ವಿಚಾರಣೆಯಿಂದ ರಕ್ಷಿಸುವ ಕ್ರಮಕ್ಕೆ ಪತ್ರಕರ್ತ ದುವಾ ಅರ್ಹರೇ ಎಂಬ ಪ್ರಶ್ನೆಗೆ ದೂರುದಾರರ ಪರ ವಾದ ಮಂಡಿಸಿದ ಜೇಠ್ಮಲಾನಿ ಉತ್ತರಿಸಿದ್ದು ಹೀಗೆ:
"ಒಬ್ಬ ಪತ್ರಕರ್ತ ಪ್ರಾಥಮಿಕ ವಿಚಾರಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. (ಆದರೆ) ಅದು ತನಿಖಾ ಸಂಸ್ಥೆಗಳ ವಿವೇಚನೆಗೆ ಬಿಟ್ಟ ಸಂಗತಿ”.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ ‘ಪ್ರಕರಣ ದಾಖಲಾಗಿದೆ ಎಂಬುದನ್ನು ಕೋರ್ಟ್ ಗಣನೆಗೆ ತೆಗೆದುಕೊಂಡರೆ ಪತ್ರಿಕೋದ್ಯಮ ಅಭಿವ್ಯಕ್ತಿಯಂತಹ ದೊಡ್ಡ ವಿಚಾರಗಳನ್ನು ಪರಿಗಣಿಸಬೇಕಿಲ್ಲ ಎಂದರು.
ದುವಾ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ದುವಾ ವಿರುದ್ಧ ಆರೋಪಿಸಲಾಗಿರುವ ಅಪರಾಧದದ ಯಾವುದೇ ಅಂಶಗಳು ಸಾಬೀತಾಗಿಲ್ಲ ಎಂದರು. ಕೋವಿಡ್- 19 ಲಾಕ್‌ಡೌನ್ ವೇಳೆ ದುವಾ ಅವರು ತಮ್ಮ ಯೂಟ್ಯೂಬ್ ಕಾರ್ಯಕ್ರಮದ ಮೂಲಕ ವಲಸೆ ಕಾರ್ಮಿಕರನ್ನು ಪ್ರಚೋದಿಸಿದ್ದಾರೆ ಎಂಬ ವಾದಕ್ಕೆ ಹಿರಿಯ ವಕೀಲ ವಿಕಾಸ್ ಸಿಂಗ್ ಆಕ್ಷೇಪಣೆ ಸಲ್ಲಿಸಿದರು. ಅಲ್ಲದೆ ಮೊದಲನೇ ಹಂತದ ಲಾಕ್ ಡೌನ್ ಸಮಯದ ವಲಸೆ ಕಾರ್ಮಿಕರ ಸ್ಥಿತಿಯನ್ನು ಪರಿಗಣಿಸಬೇಕು ಎಂದು ವಾದಿಸಿದರು.