Raman Singh and Chhattisgarh high court
Raman Singh and Chhattisgarh high court 
ಸುದ್ದಿಗಳು

ಕಾಂಗ್ರೆಸ್ ಟೂಲ್‌ಕಿಟ್‌ ಕುರಿತು ಟ್ವೀಟ್: ರಮಣ್‌ ಸಿಂಗ್ ವಿರುದ್ಧದ ಎಫ್ಐಆರ್‌ಗೆ ತಡೆ ನೀಡಿದ ಛತ್ತೀಸ್‌ಗಢ ಹೈಕೋರ್ಟ್

Bar & Bench

ಕಾಂಗ್ರೆಸ್‌ ಸಿದ್ಧಪಡಿಸಿರುವ ಟೂಲ್‌ಕಿಟ್ ಎಂದು ಆರೋಪಿಸಿ ದಾಖಲೆಯೊಂದನ್ನು ಟ್ವೀಟ್‌ ಮಾಡಿದ್ದಕ್ಕಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್ ಹಾಗೂ ಪಕ್ಷದ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ರಾಜ್ಯ ಪೊಲೀಸರು ನಡೆಸುತ್ತಿದ್ದ ತನಿಖೆಗೆ ರಾಜ್ಯ ಹೈಕೋರ್ಟ್‌ ತಡೆ ನೀಡಿದೆ. ಸಿಂಗ್‌ ವಿರುದ್ಧದ ಎಫ್‌ಐಆರ್‌ ದುರುದ್ದೇಶಪೂರಿತವಾಗಿದ್ದು, ರಾಜಕೀಯ ದ್ವೇಷದಿಂದ ಕೂಡಿದೆ ಎಂದು ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅಭಿಪ್ರಾಯಪಟ್ಟರು.

ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿ, ಎಫ್‌ಐಆರ್‌ ಅವಗಾಹನೆ ಮಾಡಿದರೆ ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣ ನಿರೂಪಿಸದರಿರುವುದು ಕಾಣುತ್ತದೆ. ಆದ್ದರಿಂದ, ಮೇ 19 ರಂದು ಸಿಂಗ್ ವಿರುದ್ಧ ದಾಖಲಿಸಲಾದ ಎಫ್ಐಆರ್ ಆಧರಿಸಿ ತನಿಖೆ ಮುಂದುವರಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ರಾಜ್ಯ ಘಟಕದ ಅಧ್ಯಕ್ಷರಾಗಿರುವ ಆಕಾಶ್ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ರಮಣ್ ಸಿಂಗ್‌ ದಾಖಲೆಯೊಂದನ್ನು ಟ್ವೀಟ್‌ ಮಾಡಿ ಇದು ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್‌ ಹಾಳು ಮಾಡಲು ಕಾಂಗ್ರೆಸ್‌ ಪಕ್ಷ ರೂಪಿಸಿರುವ ಟೂಲ್‌ಕಿಟ್‌ ಎಂದು ಈ ಹಿಂದೆ ಆರೋಪಿಸಿದ್ದರು. ಇದನ್ನು ನಿರಾಕರಿಸಿದ್ದ ಕಾಂಗ್ರೆಸ್‌ ತನಗೆ ಕಳಂಕ ತರುವ ಉದ್ದೇಶದಿಂದ ದಾಖಲೆಯನ್ನು ನಕಲು ಮಾಡಲಾಗಿದೆ ಎಂದಿತ್ತು.

ಶರ್ಮಾ ದೂರನ್ನು ಆಧರಿಸಿ ಛತ್ತೀಸ್‌ಗಢದ ಪೊಲೀಸರು ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ 504 (ಶಾಂತಿ ಭಂಗ ತರುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 505 (ಸಾರ್ವಜನಿಕ ಕೆಡುಕಿಗೆ ಕಾರಣವಾಗುವ ಹೇಳಿಕೆಗಳು), 469 (ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಹೇಳಿಕೆ) ಮತ್ತು 188ರ (ಸಾರ್ವಜನಿಕ ಅಧಿಕಾರಿ ವಿಧಿಸಿದ ಆದೇಶಕ್ಕೆ ಅವಿಧೇಯತೆ ತೋರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಟ್ವೀಟ್‌ನಿಂದ ಸಾರ್ವಜನಿಕ ಶಾಂತಿ ಅಥವಾ ನೆಮ್ಮದಿಗೆ ಭಂಗ ಬಾರದ ಕಾರಣ ಕಾರಣ ಸೆಕ್ಷನ್ 504 ಮತ್ತು 505ರ ಅಡಿ ಪ್ರಕರಣ ದಾಖಲಿಸಲಾಗದು ಎಂದು ನ್ಯಾಯಾಲಯ ಹೇಳಿದೆ. ಅದೇ ರೀತಿ ವಿವಿಧ ಕಾರಣಗಳನ್ನು ನೀಡಿ ನ್ಯಾಯಾಲಯ ಉಳಿದ ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಿಸಿರುವುದಕ್ಕೆ ಮುಂದಿನ ವಿಚಾರಣೆಯವರೆಗೆ ತಡೆ ನೀಡಿತು.

ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ವಕೀಲರಾದ ರವಿ ಶರ್ಮಾ, ವಿವೇಕ್ ಶರ್ಮಾ, ಗ್ಯಾರಿ ಮುಖೋಪಾಧ್ಯಾಯ, ಅಪೂರ್ವ್ ಕುರೂಪ್ ಮತ್ತು ಅವೇಶ್ ಕುಮಾರ್ ಸಿಂಗ್ ಅವರು ಅರ್ಜಿದಾರರನ್ನು ಪ್ರತಿನಿಧಿಸಿದರು. ಹಿರಿಯ ವಕೀಲ ಡಾ.ಅಭಿಷೇಕ್‌ ಮನು ಸಿಂಘ್ವಿ , ಅಡ್ವೊಕೇಟ್ ಜನರಲ್ ಸತೀಶ್ ಚಂದ್ರ ವರ್ಮಾ ಮತ್ತು ವಕೀಲ ಸುಮೀತ್ ಸೋಧಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದರು. ನಾಲ್ಕು ವಾರಗಳ ಬಳಿಕ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.