Chhota Rajan, Bombay High Court 
ಸುದ್ದಿಗಳು

ದೇಶದ ಭದ್ರತೆಗೆ ಛೋಟಾ ರಾಜನ್‌ ಗಂಭೀರ ಅಪಾಯಕಾರಿ: ಬಾಂಬೆ ಹೈಕೋರ್ಟ್‌ಗೆ ಸಿಬಿಐ ವಿವರಣೆ

ಕೈಗಾರಿಕೋದ್ಯಮಿ ಬೈಲೂರು ರಾಘವೇಂದ್ರ ಶೆಟ್ಟಿ ಅವರನ್ನು 2012ರಲ್ಲಿ ಕೊಲೆ ಮಾಡುವುದಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ 2019ರ ಆಗಸ್ಟ್‌ನಲ್ಲಿ ರಾಜನ್‌ಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Bar & Bench

ಭೂಗತ ಪಾತಕಿ ರಾಜೇಂದ್ರ ಸದಾಶಿವ ನಿಕಲ್ಜೆ ಅಲಿಯಾಸ್‌ ಛೋಟಾ ರಾಜನ್‌ ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿರುವುದಕ್ಕೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬುಧವಾರ ತೀವ್ರ ವಿರೋಧ ದಾಖಲಿಸಿದೆ.

ಕೈಗಾರಿಕೋದ್ಯಮಿ ಬೈಲೂರು ರಾಘವೇಂದ್ರ ಶೆಟ್ಟಿ ಅವರನ್ನು 2012ರಲ್ಲಿ ಕೊಲೆ ಮಾಡಲು ಯತ್ನಿಸಿದ್ದ ಆರೋಪದಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಎಂಸಿಒಸಿಎ) ಮತ್ತು ಭಾರತೀಯ ದಂಡ ಸಂಹಿತೆಯಡಿ 2019ರ ಆಗಸ್ಟ್‌ರಲ್ಲಿ ಮುಂಬೈನ ವಿಶೇಷ ನ್ಯಾಯಾಲಯವು ಚೋಟಾ ರಾಜನ್‌ ಅಪರಾಧಿ ಎಂದು ತೀರ್ಪು ನೀಡಿದ್ದ ಪ್ರಕರಣವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಎಂಸಿಒಸಿಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸುವುದರ ಭಾಗವಾಗಿ ರಾಜನ್‌ ಜಾಮೀನು ಮನವಿ ಸಲ್ಲಿಸಿದ್ದಾರೆ. ಎಂಸಿಒಸಿಎ ವಿಶೇಷ ನ್ಯಾಯಾಧೀಶ ಎ ಟಿ ವಾಂಖೆಡೆ ಅವರು ರಾಜನ್‌ಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಐದು ಲಕ್ಷ ರೂಪಾಯಿ ದಂಡ ವಿಧಿಸಿದ್ದರು.

ರಾಜನ್‌ ಅವರನ್ನು ಪ್ರತಿನಿಧಿಸಿರುವ ವಕೀಲ ಸುದೀಪ್‌ ಪಸ್ಬೋಲಾ ಅವರು ತಮ್ಮ ಕಕ್ಷಿದಾರನ ವಿರುದ್ಧ ಯಾವುದೇ ತೆರನಾದ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ ಎಂದು ವಾದಿಸಿದರು.

ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪಿತೂರಿ ಆರೋಪದಲ್ಲಿ ರಾಜನ್‌ ತಪ್ಪಿತಸ್ಥ ಎಂದು ತೀರ್ಪು ನೀಡಲಾಗಿದೆ. ಹೀಗಾಗಿ, ಸಹ-ಆರೋಪಿಗಳಂತೆ ರಾಜನ್‌ ಅವರನ್ನು ಪರಿಗಣಿಸಬೇಕು ಎಂದು ಕೋರಿದರು.

ರಾಜನ್‌ ವಿರುದ್ಧ ಯಾವುದೇ ತೆರನಾದ ಪ್ರತ್ಯಕ್ಷ ಸಾಕ್ಷಿಗಳಿಲ್ಲ. ಇಬ್ಬರು ಸಾಕ್ಷಿದಾರರ ಹೇಳಿಕೆಗಳು ಸಹ ಬೇರೆಯವರ ಹೇಳಿಕೆಕೇಳಿಕೆಗಳನ್ನು ಆಧರಿಸಲಾಗಿದೆ. ಅದೂ ಅವರ ವೈಯಕ್ತಿಕ ತಿಳಿವಳಿಕೆಯ ಅರಿವಿಗೆ ಬಂದಿರುವಂತಹುದಲ್ಲ ಎಂದು ಸಮರ್ಥಿಸಿದರು.

ಸಿಬಿಐ ಪ್ರತಿನಿಧಿಸುತ್ತಿರುವ ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್‌ ಘಾರತ್‌ ಅವರು ರಾಜನ್‌ ಜಾಮೀನು ಮನವಿಗೆ ತೀವ್ರ ವಿರೋಧ ದಾಖಲಿಸಿದ್ದು, ಇತರೆ ಸಾಮಾನ್ಯ ಕ್ರಿಮಿನಲ್‌ಗಳಿಗೆ ಸಮನಾಗಿ ರಾಜನ್‌ ಅವರನ್ನು ಪರಿಗಣಿಸಲಾಗದು. ದೇಶಕ್ಕೆ ರಾಜನ್‌ ಜಡ್‌ಪ್ಲಸ್‌ ಭದ್ರತಾ ಬೆದರಿಕೆಯಾಗಿದ್ದಾರೆ. ಆತನ ವಿರುದ್ಧ 71 ಪ್ರಕರಣಗಳು ಬಾಕಿ ಇವೆ. ಸಿಬಿಐ ಬಳಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ಪೈಕಿ ಒಂದರಲ್ಲಿ ಜೀವಾವಧಿ ಶಿಕ್ಷೆಯಾಗಿದೆ ಎಂದು ವಾದಿಸಿದರು.

ಸಹ ಕೈದಿಗಳಂತೆ ರಾಜನ್‌ ಅವರನ್ನೂ ಸಹ ಸಮಾನವಾಗಿ ಪರಿಗಣಿಸಬೇಕು ಎಂಬ ವಾದಕ್ಕೆ ವಿರುದ್ಧವಾಗಿ ವಾದಿಸಿದ ಘಾರತ್‌, ಜಾಮೀನಿನ ಮೇಲೆ ಹೊರಗಿರುವ ರಾಜನ್‌ ಸಹ ಆರೋಪಿಗಳು 2009ರಿಂದ ಜೈಲಿನಲ್ಲಿದ್ದರು. ಆದರೆ, ರಾಜನ್‌ ಅವರು 2016ರಿಂದ ಮಾತ್ರ ಜೈಲಿನಲ್ಲಿದ್ದಾರೆ. ಇದರ ಜೊತೆಗೆ ರಾಜನ್‌ ವಿರುದ್ಧ ಹಲವು ಪ್ರಕರಣಗಳು ಬಾಕಿ ಇವೆ ಎಂದಿದ್ದಾರೆ.

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೆಸರು ಬದಲಿಸಿ ಪಲಾಯಾನ ಮಾಡುತ್ತಿದ್ದ ರಾಜನ್‌ ಅವರನ್ನು ಬಾಲಿಯಲ್ಲಿ ಬಂಧಿಸಲಾಗಿತ್ತು ಎಂಬುದನ್ನು ಘಾರತ್‌ ಉಲ್ಲೇಖಿಸಿದ್ದಾರೆ. ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ರಾಜನ್‌ ಅವರನ್ನು ನವೆಂಬರ್‌ 2015ರಲ್ಲಿ ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಲಾಗಿತ್ತು ಎಂಬುದನ್ನು ನೆನಪಿಸಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರು ರಾಜನ್‌ ವಿರುದ್ಧದ ಎಫ್‌ಐಆರ್‌ ಪ್ರತಿ, ತಪ್ಪೊಪ್ಪಿಗೆ ಸಾಕ್ಷಿ ಹೇಳಿಕೆ ಹಾಗೂ ರಾಜನ್‌ ವಿರುದ್ಧದ ಬಾಕಿ ಪ್ರಕರಣಗಳ ಪಟ್ಟಿ ಸಲ್ಲಿಸುವಂತೆ ನಿರ್ದೇಶಿಸಿದ್ದು, ಜಾಮೀನು ಮನವಿಯ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು.