ಅಶ್ಲೀಲ ಚಿತ್ರ ಪ್ರಕರಣದಲ್ಲಿ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜಾಮೀನು ನೀಡಲು ಬುಧವಾರ ಮುಂಬೈ ನ್ಯಾಯಾಲಯ ನಿರಾಕರಿಸಿದೆ.
ಕುಂದ್ರಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆಬಾದ್ ಪೊಂಡಾ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಹಿಂದೆಯೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಹೀಗಾಗಿ, ಕುಂದ್ರಾ ಅವರಿಗೂ ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು.
“ಬಹುದಿನಗಳಿಂದ ರಾಜ್ ಕುಂದ್ರಾ ಪೊಲೀಸರ ವಶದಲ್ಲಿದ್ದು, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಜಾಮೀನು ನೀಡಿದ ಬಳಿಕವೂ ತನಿಖೆಗೆ ಇದೇ ರೀತಿಯಲ್ಲಿ ಸಹಕಾರ ನೀಡಲಾಗುವುದು” ಎಂದರು.
“ಹೀನ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೂ ಜಾಮೀನು ನೀಡಲಾಗಿದೆ. ಕುಂದ್ರಾ ವಿರುದ್ಧದ ಆರೋಪಗಳಿಗೆ ಗರಿಷ್ಠ 7 ವರ್ಷಗಳು ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ. ಕುಂದ್ರಾ ಅವರು ಮುಗ್ಧರೋ, ಇಲ್ಲವೋ ಎಂಬುದು ಇಲ್ಲಿ ಪ್ರಶ್ನೆಯಲ್ಲ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದೋ, ಇಲ್ಲವೋ ಎಂಬುದಾಗಿದೆ” ಎಂದು ಪೊಂಡಾ ವಾದಿಸಿದರು.
ಕುಂದ್ರಾ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಸರ್ಕಾರಿ ವಕೀಲರು ತನಿಖೆಯು ಇನ್ನೂ ಪ್ರಗತಿಯಲ್ಲಿದೆ ಎಂದಿದ್ದಾರೆ. ಕುಂದ್ರಾಗೆ ಜಾಮೀನು ನೀಡಿದರೆ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. “ಆರೋಪಿಯು ಶ್ರೀಮಂತ ಮತ್ತು ಪ್ರಭಾವಿಯಾಗಿದ್ದು ಅನಿವಾರ್ಯತೆ ಇರುವ ಮಹಿಳೆಯರನ್ನು ಈ ಪಾತಕ ಕೃತ್ಯಕ್ಕೆ ಬಲವಂತವಾಗಿ ನೂಕಿದ್ದಾರೆ” ಎಂದು ವಾದಿಸಿದರು.
“ಸಂತ್ರಸ್ತೆಯರ ಹೇಳಿಕೆಯನ್ನು ಇನ್ನಷ್ಟೇ ದಾಖಲಿಸಿಕೊಳ್ಳಬೇಕಿದೆ. ಬ್ರಿಟಿಷ್ ಪ್ರಜೆಯಾಗಿರುವ ಕುಂದ್ರಾ ಇಂಗ್ಲೆಂಡ್‌ಗೆ ಪಲಾಯನ ಮಾಡುವ ಸಾಧ್ಯತೆ ಇದೆ” ಎಂದು ಸರ್ಕಾರಿ ವಕೀಲರು ಪೀಠಕ್ಕೆ ವಿವರಿಸಿದರು.
ಆಗ ಪೊಂಡಾ ಅವರು “ಜಾಮೀನು ನೀಡುವಾಗ ಭದ್ರತಾ ಷರತ್ತುಗಳಾದ ಪಾಸ್‌ಪೋರ್ಟ್ ವಶಪಡಿಸಿಕೊಳ್ಳುವುದು ಮತ್ತು ದೇಶ ತೊರೆಯುವಾಗ ನ್ಯಾಯಾಲಯದ ಗಮನಕ್ಕೆ ತರುವಂತೆ ನಿರ್ದೇಶಿಸಬಹುದಾಗಿದೆ. ಕುಂದ್ರಾ ಅವರ ಪಾಸ್‌ಪೋರ್ಟ್ ಅನ್ನು ಅಪರಾಧ ವಿಭಾಗವು ಈಗಾಗಲೇ ವಶಕ್ಕೆ ಪಡೆದಿದೆ” ಎಂದರು.
ಹೇಳಿಕೆ ನೀಡದಂತೆ ಕುಂದ್ರಾ ಯಾರನ್ನು ಬೆದರಿಸಿದ್ದಾರೆ ಎಂಬ ಕುರಿತಂತೆ ಒಂದೇ ಒಂದು ಘಟನೆಯನ್ನು ಪೊಲೀಸರು ಉಲ್ಲೇಖಿಸಿಲ್ಲ ಎಂದು ಪ್ರತ್ಯುತ್ತರ ಅರ್ಜಿಯಲ್ಲಿ ಪೊಂಡಾ ವಿವರಿಸಿದ್ದಾರೆ. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಬಿ ಭಾಜಿಪಲೆ ಅವರು ಕುಂದ್ರಾ ಜಾಮೀನು ಮನವಿಯನ್ನು ವಜಾಗೊಳಿಸಿದರು.
ಬಾಂಬೆ ಹೈಕೋರ್ಟ್‌ನಲ್ಲಿಯೂ ಅರ್ಜಿ
ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಮ್ಮನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದೂ ಸೇರಿದಂತೆ ನೀಡಲಾದ ಎಲ್ಲಾ ಆದೇಶಗಳನ್ನು ರದ್ದುಗೊಳಿಸಬೇಕು ಅಲ್ಲದೆ ತಮ್ಮನ್ನು ಬಂಧಮುಕ್ತಗೊಳಿಸಬೇಕು ಎಂದು ಕುಂದ್ರಾ ಬಾಂಬೆ ಹೈಕೋರ್ಟ್‌ನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ ಮುಂಬೈ ಪೊಲೀಸರಿಂದ ಪ್ರತಿಕ್ರಿಯೆ ಕೋರಿದ್ದು ಜುಲೈ 29ರಂದು (ನಾಳೆ- ಗುರುವಾರ) ಅರ್ಜಿಯನ್ನು ಆಲಿಸಲಿದೆ.