<div class="paragraphs"><p>Chief Justice Ritu Raj Awasthi and Justices Krishna Dixit and JM Khazi </p></div>

Chief Justice Ritu Raj Awasthi and Justices Krishna Dixit and JM Khazi

 
ಸುದ್ದಿಗಳು

ಹಿಜಾಬ್‌ ನಿಷೇಧ ಪ್ರಕರಣದ ವಿಚಾರಣೆ: ಸಿಜೆ ಅವಸ್ಥಿ ನೇತೃತ್ವದಲ್ಲಿ ತ್ರಿಸದಸ್ಯ ಪೀಠ ರಚನೆ, ನಾಳೆ ಮಧ್ಯಾಹ್ನ ವಿಚಾರಣೆ

Bar & Bench

ಹಿಜಾಬ್ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರನ್ನು ಒಳಗೊಂಡು ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠವನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ ರಚಿಸಿದ್ದು, ಮಧ್ಯಾಹ್ನ 2.30ಕ್ಕೆ ತ್ರಿಸದಸ್ಯ ಪೀಠವು ಮನವಿಗಳ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ತ್ರಿಸದಸ್ಯ ಪೀಠದ ಇನ್ನಿಬ್ಬರು ಸದಸ್ಯರಾಗಿದ್ದಾರೆ. ಹಿಜಾಬ್‌ ವಿಚಾರವು ಇಸ್ಲಾಮ್‌ ಧಾರ್ಮಿಕ ವೈಯಕ್ತಿಕ ಕಾನೂನಿನ (ಷರಿಯತ್‌) ಹಾಗೂ ಧಾರ್ಮಿಕ ಆಚರಣೆಗಳ ಜಿಜ್ಞಾಸೆಯನ್ನು ಒಳಗೊಳ್ಳುವುದರಿಂದ ಕಾನೂನು ಮತ್ತು ಧರ್ಮಸೂಕ್ಷ್ಮದ ವಿಚಾರಗಳ ಬಗ್ಗೆ ಸಮರ್ಥವಾಗಿ ಬೆಳಕು ಚೆಲ್ಲುವ ರೀತಿಯಲ್ಲಿ ಪೀಠ ರಚಿಸಲಾಗಿದೆ ಎನ್ನುವ ಭಾವನೆ ವ್ಯಕ್ತವಾಗಿದೆ.

ಇಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ದೀಕ್ಷಿತ್‌ ಅವರು “ಈ ಪ್ರಕರಣವನ್ನು ವಿಸ್ತೃತ ಪೀಠ ಪರಿಗಣಿಸುವ ಅಗತ್ಯವಿದೆ ಎಂದು ನನಗೆ ಅನಿಸುತ್ತಿದೆ. ನೆರೆಯ ಹೈಕೋರ್ಟ್‌ನ ತೀರ್ಪುಗಳಿಂದ ಹೊರಬಂದಿರುವ ವಿಚಾರಗಳನ್ನು ಪರಿಗಣಿಸಬೇಕಿದೆ” ಎಂದು ಹೇಳಿದ್ದರು. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ತಮ್ಮ ನೇತೃತ್ವದಲ್ಲಿ ತ್ರಿಸದಸ್ಯ ಪೀಠ ರಚಿಸಿದ್ದಾರೆ.

“ಪಕ್ಷಕಾರರು ಎತ್ತಿರುವ ವಿಚಾರಗಳು ಬಹುಮುಖ್ಯವಾದ ಸಾಂವಿಧಾನಿಕ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿವೆ. ವೈಯಕ್ತಿಕ ಕಾನೂನಿನ ಕೆಲವು ವಿಚಾರಗಳ ಹಿನ್ನೆಲೆಯಲ್ಲಿ ಮೂರು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಅರ್ಧ ಡಜನ್‌ಗೂ ಹೆಚ್ಚು ತೀರ್ಪುಗಳನ್ನೂ ಉಲ್ಲೇಖಿಸಲಾಗಿದೆ. ನಿನ್ನೆ ಪಕ್ಷಕಾರರು ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ಕಟತೆಯಿಂದ ವಾದಿಸಿದ್ದು, ಇದರಿಂದ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳಿಗೆ ಅನುಕೂಲವಾಗಿದೆ” ಎಂದು ನ್ಯಾ. ದೀಕ್ಷಿತ್‌ ಅವರು ಆದೇಶದಲ್ಲಿ ಹೇಳಿದ್ದರು.

“ಪ್ರಶ್ನೆಗಳ ಪ್ರಾಮುಖ್ಯತೆಯ ಚರ್ಚೆಯ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇರಿಸಲಾಗುವುದು ಅವರು ಈ ಪ್ರಕರಣವನ್ನು ನಿರ್ಧರಿಸಲು ವಿಸ್ತೃತ ಪೀಠದ ರಚನೆಯ ಅಗತ್ಯತೆಯನ್ನು ತೀರ್ಮಾನಿಸಲಿದ್ದಾರೆ” ಎಂದು ನ್ಯಾ. ದೀಕ್ಷಿತ್‌ ಹೇಳಿದ್ದರು.

ವಕೀಲರಾದ ಮೊಹಮ್ಮದ್‌ ತಾಹೀರ್‌, ಶತಭಿಷ್‌ ಶಿವಣ್ಣ, ಮೊಹಮ್ಮದ್‌ ನಿಯಾಜ್‌ ಎಸ್‌, ನವೀದ್‌ ಅಹ್ಮದ್‌ ಮತ್ತು ಸಿರಾಜುದ್ದೀನ್‌ ಅಹ್ಮದ್‌ ಅವರ ಮೂಲಕ ಸಲ್ಲಿಸಲಾಗಿರುವ ಪ್ರತ್ಯೇಕ ಮನವಿಗಳನ್ನು ಒಟ್ಟುಗೂಡಿಸಿ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ.