ಸರ್ಕಾರಿ ನೌಕರ ಮೃತಪಟ್ಟ ಬಳಿಕ ಆತನ ಪತ್ನಿ ಮಗುವನ್ನು ದತ್ತು ಸ್ವೀಕರಿಸಿದ್ದರೆ ಕೌಟುಂಬಿಕ ಪಿಂಚಣಿ ಪಡೆಯುವ ಅರ್ಹತೆ ಆ ಮಗುವಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ಶ್ರೀ ರಾಮ್ ಶ್ರೀಧರ್ ಚಿಮುರ್ಕರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 1972 ರ ನಿಯಮ 54 (14) (ಬಿ) ಅಡಿಯಲ್ಲಿ ಕೌಟುಂಬಿಕ ಪಿಂಚಣಿ ಪಡೆಯಲು ಹಾಗೆ ದತ್ತು ಪಡೆದ ಮಗುವನ್ನು (ಸರ್ಕಾರಿ ನೌಕರ ಮೃತಪಟ್ಟ ಬಳಿಕ ಆತನ ಪತ್ನಿ ದತ್ತು ತೆಗೆದುಕೊಂಡ ಮಗು) 'ಕುಟುಂಬ' ಎಂಬ ವ್ಯಾಖ್ಯಾನದ ವ್ಯಾಪ್ತಿಗೆ ತರಲಾಗದು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಸರ್ಕಾರಿ ನೌಕರ ತನ್ನ ಜೀವಿತಾವಧಿಯಲ್ಲಿ ಕಾನೂನುಬದ್ಧವಾಗಿ ದತ್ತು ಪಡೆದ ಗಂಡು ಅಥವಾ ಹೆಣ್ಣು ಮಕ್ಕಳಿಗೆ ಮಾತ್ರ ಕೌಟುಂಬಿಕ ಪಿಂಚಣಿ ಸೌಲಭ್ಯದ ವ್ಯಾಪ್ತಿ ಸೀಮಿತಗೊಳಿಸಬೇಕು. ಈ ಸೌಲಭ್ಯವನ್ನು ನೌಕರನ ಮರಣಾನಂತರ ಆತನ ಪತ್ನಿ ಪಡೆಯುವ ದತ್ತು ಮಗುವಿಗೆ ವಿಸ್ತರಿಸಬಾರದು ಎಂದು ನ್ಯಾಯಾಲಯ ವಿವರಿಸಿದೆ.
ಮೃತಪಟ್ಟ ನೌಕರನ ಅವಲಂಬಿತರಿಗೆ ಸಹಾಯ ಮಾಡಲು ಕೌಟುಂಬಿಕ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದ್ದು . ಸರ್ಕಾರಿ ನೌಕರನೊಂದಿಗೆ ಅವಲಂಬಿತರು ನೇರ ಸಂಬಂಧ ಹೊಂದಿರಬೇಕೇ ವಿನಾ ದೂರದ ಸಂಬಂಧಿಯಾಗಿರಬಾರದು. ಮರಣದ ವೇಳೆ ಸರ್ಕಾರಿ ನೌಕರನ ಅವಲಂಬಿತರಲ್ಲದ ವ್ಯಕ್ತಿಗಳನ್ನು ಪಿಂಚಣಿ ನಿಯಮಗಳ ಅಡಿಯಲ್ಲಿ ಕುಟುಂಬ ಎಂಬ ವ್ಯಾಖ್ಯಾನದ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಹಿಂದೂ ಕಾನೂನಿನ ಅಡಿಯಲ್ಲಿ ದತ್ತುಪುತ್ರನ ಹಕ್ಕುಗಳು ಮತ್ತು ಕುಟುಂಬ ಪಿಂಚಣಿ ಪಡೆಯುವ ಹಕ್ಕುಗಳ ನಡುವೆ ಪ್ರಮುಖ ವ್ಯತ್ಯಾಸವಿದೆ, ಹೀಗೆ ಮಾಡಿದರೆ ಸಾರ್ವಜನಿಕ ಬೊಕ್ಕಸಕ್ಕೆ ಹೊರೆ ಉಂಟಾಗುತ್ತದೆ. ಸರ್ಕಾರಿ ನೌಕರ ಮೃತಪಟ್ಟ ಬಳಿಕ ಆತನಿಗೆ ಜನಿಸಿದ ಮಗುವಿಗೆ ಕುಟುಂಬ ಪಿಂಚಣಿ ಸೌಲಭ್ಯ ಇದೆ. ಈ ಮಕ್ಕಳು ದತ್ತುಪಡೆದ ಮಕ್ಕಳಿಗಿಂತ ಭಿನ್ನ ಎಂದು ನ್ಯಾಯಾಲಯ ತಿಳಿಸಿದೆ. ಮೃತ ಸರ್ಕಾರಿ ನೌಕರನ ಪತ್ನಿಯ ದತ್ತು ಪುತ್ರನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.