“ಗರ್ಭದಲ್ಲಿರುವ ಮಗುವಿಗೆ ತನ್ನದೇ ಆದ ಬದುಕು ಮತ್ತು ಹಕ್ಕುಗಳಿವೆ. ಗರ್ಭದಲ್ಲಿರುವ ಮಕ್ಕಳ ಹಕ್ಕುಗಳಿಗೆ ಕಾನೂನಿನಲ್ಲಿ ಮಾನ್ಯತೆ ಇದೆ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ. ಅಲ್ಲದೇ, ಮಗು ಜನ್ಮ ತಾಳುವ ಮುನ್ನವೇ ಅದನ್ನು ದತ್ತು ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ
ಹೆಣ್ಣು ಮಗುವೊಂದರ ಪೋಷಣೆಯ ಹಕ್ಕು ನೀಡಲು ಕೋರಿ ದತ್ತು ಪಡೆದ ಪೋಷಕರು (ಇಸ್ಲಾಂ ಧರ್ಮೀಯರು) ಹಾಗೂ ಅದನ್ನು ಬೆಂಬಲಿಸಿ ಮಗುವಿನ ತಂದೆ-ತಾಯಿ (ಹಿಂದೂ ಧರ್ಮೀಯರು) ಸಲ್ಲಿಸಿದ್ದ ಅರ್ಜಿಯನ್ನು ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ವಿಚಾರಣಾಧೀನ ನ್ಯಾಯಾಲಯದ ಆದೇಶ ಸರಿಯಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಇಲ್ಲ ಎಂದು ಮೇಲ್ಮನವಿ ವಜಾಗೊಳಿಸಿದೆ.
“ಗರ್ಭಾವಸ್ಥೆಯಲ್ಲಿದ್ದಾಗಲೇ ಮಗುವನ್ನು ದತ್ತು ಪಡೆಯಲು ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಮಗುವಿನ ದತ್ತು ಪ್ರಕ್ರಿಯೆ ನೋಡಿಕೊಳ್ಳುವುದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜವಾಬ್ದಾರಿಯಾಗಿರುತ್ತದೆ. ಇನ್ನೂ ಹುಟ್ಟದ (ಗರ್ಭದಲ್ಲಿರುವ) ಮಗುವಿಗೂ ಜೀವ ಇರುತ್ತದೆ, ಅದರದೇ ಆದ ಹಕ್ಕುಗಳಿರುತ್ತವೆ. ಇನ್ನೂ ಜನಿಸದ ಮಗುವನ್ನು ಸ್ವಾಭಾವಿಕ ವ್ಯಕ್ತಿ ಎಂದು ಪರಿಗಣಿಸಲಾಗದಿದ್ದರೂ, ಭ್ರೂಣಕ್ಕೆ ಹೃದಯ ಬಡಿತ ಬಂದೊಡನೆಯೇ ಅದೂ ಒಂದು ಜೀವ ಎನಿಸುತ್ತದೆ. ಆ ಮಗುವಿಗೂ ಗೌರವಯುತ ಜೀವನದ ಹಕ್ಕಿದೆ” ಎಂದು ನ್ಯಾಯಾಲಯ ಹೇಳಿದೆ.
“ಮಗುವಿನ ಹೆತ್ತ ತಂದೆ-ತಾಯಿ ಹಿಂದೂ ಧರ್ಮಕ್ಕೆ ಸೇರಿದ್ದಾರೆ. ಅದನ್ನು ದತ್ತು ಪಡೆದಿರುವವರು ಇಸ್ಲಾಂ ಧರ್ಮೀಯರಾಗಿದ್ದಾರೆ. ಆದರೆ, ಮಹಮದೀಯ ಕಾನೂನಿನಲ್ಲಿ ದತ್ತು ಸ್ವೀಕಾರಕ್ಕೆ ಮಾನ್ಯತೆ ಇಲ್ಲ. ಮಗು ಸಾಕಲಾಗದಿದ್ದರೆ ಪಾಲಕರು ಅದನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಬಹುದಿತ್ತು. ಅದು ಸಾಧ್ಯವಾಗದಿದ್ದರೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸುವ ಮೂಲಕ ಮಗುವನ್ನು ನೋಡಿಕೊಳ್ಳಬಹುದಿತ್ತು. ಬಡತನದ ಕಾರಣಕ್ಕೆ ಮಗುವನ್ನು ದತ್ತು ನೀಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು. ಬಡತನ ನಿರ್ಮೂಲನೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಲಾಭ ಪಡೆದು ಮಗುವನ್ನು ಬೆಳೆಸಬಹುದಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಹಾಗೂ ಆತ್ಮಗೌರವವಿದ್ದರೆ ಬ್ಯಾಂಕ್‌ನಿಂದ ಸಾಲ ಪಡೆದು ಜೀವನ ನಡೆಸಬಹುದಿತ್ತು. ಅದನ್ನು ಬಿಟ್ಟು ದತ್ತು ಹೆಸರಿನಲ್ಲಿ ಹೆತ್ತವರೇ ಮಗುವನ್ನು ಮಾರಾಟ ಮಾಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು” ಪೀಠ ಬೇಸರ ವ್ಯಕ್ತಪಡಿಸಿತು.
“ಪ್ರಕರಣದ ವಿಚಾರಣೆಗೆ ಹಾಜರಿದ್ದ ಮಗುವಿನ ತಂದೆ-ತಾಯಿ, ತಾವೇ ಮಗುವನ್ನು ನೋಡಿಕೊಳ್ಳುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಿದ್ದಲ್ಲಿ, ಅವರು ಮಕ್ಕಳ ಕಲ್ಯಾಣ ಸಮಿತಿಗೆ ಮನವಿ ಸಲ್ಲಿಸಬೇಕು. ಆ ಮನವಿಯನ್ನು ಮಕ್ಕಳ ಕಲ್ಯಾಣ ಸಮಿತಿ ಕಾನೂನಿನ ಪ್ರಕಾರ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸಮಿತಿಯು ಮಗುವನ್ನು ಅದರ ಪಾಲಕರಿಗೆ ಹಸ್ತಾಂತರಿಸುವ ತೀರ್ಮಾನಕ್ಕೆ ಬಂದರೆ, ಮಗುವನ್ನು ಬೇರೆ ಯಾರಿಗೂ ಮಾರಾಟ ಮಾಡದಂತೆ ನೋಡಿಕೊಳ್ಳಲು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸರು ಪಾಲಕರ ಚಟುವಟಿಕೆ ಮೇಲೆ ನಿಗಾವಹಿಸಬೇಕು” ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಹಿಂದೂ ಧರ್ಮಕ್ಕೆ ಸೇರಿದ ಉಡುಪಿಯ ದಂಪತಿ ಬಡತನದಿಂದ ಮಗುವನ್ನು ಪೋಷಣೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಕ್ಕಳಿಲ್ಲದ ಇಸ್ಲಾಂ ಧರ್ಮದ ದಂಪತಿಗೆ ಮಗುವನ್ನು ದತ್ತು ನೀಡಲು ನಿರ್ಧರಿಸಿದ್ದರು. ಮಗು ಜನಿಸುವುದಕ್ಕೂ ಮೊದಲೇ 2020ರ ಮಾರ್ಚ್ 21ರಂದು ದತ್ತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮಾರ್ಚ್ 26ರಂದು ಹೆಣ್ಣು ಮಗು ಜನಿಸಿತ್ತು. ದತ್ತು ಪಡೆದ ಮುಸ್ಲಿಂ ದಂಪತಿ ಮಗುವಿನ ಆರೈಕೆ ಮಾಡುತ್ತಿದ್ದರು.
ಈ ಮಧ್ಯೆ, ಮಗುವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಮಕ್ಕಳ ಸಂರಕ್ಷಣೆ ಘಟಕದ ಕಾನೂನು ಅಧಿಕಾರಿ ದೂರು ಸಲ್ಲಿಸಿದ್ದರು. ಬಳಿಕ ಮಗುವನ್ನು ವಶಕ್ಕೆ ಪಡೆದು ಮಕ್ಕಳ ಆರೈಕೆ ಘಟಕಕ್ಕೆ ನೀಡಲಾಗಿತ್ತು. ಈ ನಡುವೆ, ಮಗುವಿನ ಪೋಷಣೆಯ ಹಕ್ಕು ನೀಡುವಂತೆ ದತ್ತು ಪಡೆದ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿ, ಮಗುವಿನ ತಂದೆ-ತಾಯಿ ಸಹ ಮೆಮೊ ಸಲ್ಲಿಸಿದ್ದರು. ಈ ಅರ್ಜಿಯನ್ನು 2022ರ ಮೇ 31ರಂದು ವಿಚಾರಣಾಧೀನ ನ್ಯಾಯಾಲಯವು ವಜಾಗೊಳಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.