Child witness, Bombay High Court


 
ಸುದ್ದಿಗಳು

ಬುಡಕಟ್ಟು ಪ್ರದೇಶಗಳಲ್ಲಿ 12ನೇ ವಯಸ್ಸಿಗೆ ವಿವಾಹ, 15ಕ್ಕೂ ಮೊದಲೇ ಗರ್ಭಧಾರಣೆ: ಸಮೀಕ್ಷೆಗೆ ಬಾಂಬೆ ಹೈಕೋರ್ಟ್ ಆದೇಶ

ಮಹಾರಾಷ್ಟ್ರದ ಬುಡಕಟ್ಟು ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಉಂಟಾಗುತ್ತಿರುವ ಸಾವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಬಾಲ್ಯ ವಿವಾಹ ನಡೆಯುತ್ತಿರುವ ಪ್ರದೇಶಗಳನ್ನು ಸಮೀಕ್ಷೆ ನಡೆಸಿ ಗುರುತಿಸಲು ಮಹಾರಾಷ್ಟ್ರದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ದಂಡಾಧಿಕಾರಿಗಳಿಗೆ ಬಾಂಬೆ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ [ಡಾ. ರಾಜೇಂದ್ರ ಬರ್ಮಾ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ.]

ಮಹಾರಾಷ್ಟ್ರದ ಬುಡಕಟ್ಟು ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಉಂಟಾಗುತ್ತಿರುವ ಸಾವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆ) ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠ ನಡೆಸಿತು.

ಬುಡಕಟ್ಟು ಜನಾಂಗಗಳಲ್ಲಿ ಬಾಲ್ಯವಿವಾಹದಿಂದಾಗಿ ಗರ್ಭಿಣಿಯರಾಗುವ ಸಂಖ್ಯೆ ಹೆಚ್ಚುತ್ತಿದ್ದು ಇದು ಅಪೌಷಿಕತೆಗೆ ಕಾರಣವಾಗುತ್ತಿರುವ ವಿಚಾರವನ್ನು ಸಿಜೆ ದತ್ತ ಅವರು ವಿಚಾರಣೆ ವೇಳೆ ಪ್ರಸ್ತಾಪಿಸಿದರು.

"2022ರಲ್ಲಿಯೂ ಹುಡುಗಿಯರು ಚಿಕ್ಕ ವಯಸ್ಸಿಗೇ ಮದುವೆಯಾಗುತ್ತಾರೆ ಎನ್ನುವ ಬಗ್ಗೆ ನನಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದಿದೆ. ಅವರು ಮದುವೆಯಾದಾಗ 12-13 ವರ್ಷ ವಯಸ್ಸಿನವರಾಗಿರುತ್ತಾರೆ ಮತ್ತು ಅವರು 15 ವರ್ಷಕ್ಕಿಂತ ಮುಂಚೆಯೇ ಗರ್ಭಧರಿಸುತ್ತಾರೆ; ಹಾಗಾಗಿಯೇ, ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಹೆಚ್ಚಿದೆ. ಈ ಪದ್ಧತಿ ನಿಲ್ಲಬೇಕು' ಎಂದು ಸಿಜೆ ದತ್ತ ಹೇಳಿದರು.

“18 ವರ್ಷ ಎಂಬುದು ಮದುವೆಯ ಕಾನೂನುಬದ್ಧ ವಯಸ್ಸು ಎಂದು ಅರ್ಥಮಾಡಿಕೊಳ್ಳದ ವಿನಾ ನಾವು ಏನೇ ಮಾಡಿದರೂ ಅದು ಗಟಾರದ ಪಾಲಾಗುತ್ತದೆ. ಹೆಣ್ಣು ಮಕ್ಕಳು ಉಳಿಯಬೇಕಾದರೆ ಜನ ಜಾಗೃತರಾಗಬೇಕು” ಎಂದು ಅವರು ಎಚ್ಚರಿಸಿದರು.