ಹದಿಹರೆಯದವರಲ್ಲಿ ಲಿವ್-ಇನ್ ಸಂಬಂಧ ತಡೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಕೇಂದ್ರಕ್ಕೆ ಪಂಜಾಬ್ ಹೈಕೋರ್ಟ್ ಪ್ರಶ್ನೆ

ಲಿವ್ ಇನ್ ಸಂಬಂಧವನ್ನು ಯಾವುದೇ ಶಾಸನಬದ್ಧ ಕಾನೂನು ನಿಯಂತ್ರಿಸುವುದಿಲ್ಲವಾದ್ದರಿಂದ ಜೋಡಿ 18 ವರ್ಷ ತಲುಪಿದ ನಂತರ ಅವರಿಗೆ ರಕ್ಷಣೆ ನೀಡುವುದನ್ನು ಹೊರತುಪಡಿಸಿದರೆ ನ್ಯಾಯಾಲಯಕ್ಕೆ ಬೇರೆ ದಾರಿ ಇಲ್ಲ ಎಂದು ಪೀಠ ತಿಳಿಸಿದೆ.
Justice Amol Rattan Singh with Punjab & Haryana HC

Justice Amol Rattan Singh with Punjab & Haryana HC

Published on

ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶ ಇಲ್ಲದೇ ಇರುವುದನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಇತ್ತೀಚೆಗೆ ಗಮನಿಸಿದೆ. ಇದೇ ವೇಳೆ ನ್ಯಾಯಾಲಯ ಹದಿಹರೆಯದವರ ಸಹ ಜೀವನ ತಡೆಯಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ [ರೋಹಿತ್ ಕುಮಾರ್ ಮತ್ತು ಯುಟಿ ಚಂಡೀಗಢ ರಾಜ್ಯ].

ಜಸ್ಟಿಸ್ ಅಮೋಲ್ ರತ್ತನ್ ಸಿಂಗ್ ಅವರು ಲಿವ್-ಇನ್ ಸಂಬಂಧಗಳಲ್ಲಿ ಜೋಡಿಯ ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾಗ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಮಹಿಳೆಯರ ವಿವಾಹವನ್ನು 21 ವರ್ಷಕ್ಕೆ ಏರಿಕೆ ಮಾಡಿ ಬಾಲ್ಯ ವಿವಾಹ ನಿಷೇಧ ಕಾಯಿಗೆಗೆ ಹೊಸ ತಿದ್ದುಪಡಿ ತರಲು ಮುಂದಾಗಿರುವ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿದರು.

Also Read
ಲಿವ್-ಇನ್ ಜೋಡಿಯಲ್ಲಿ ಒಬ್ಬರಿಗೆ ಮದುವೆಯ ವಯಸ್ಸಾಗಿರದಿದ್ದರೂ ಜೀವನ, ಸ್ವಾತಂತ್ರ್ಯ ರಕ್ಷಿಸಬೇಕು: ಪಂಜಾಬ್ ಹೈಕೋರ್ಟ್‌

ಇದುವರೆಗೂ , ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದಂತೆ ಯಾವುದೇ ಮಸೂದೆಯನ್ನು ಪರಿಚಿಯಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಸಿಂಗ್, 18 ರಿಂದ 21 ವರ್ಷ ವಯಸ್ಸಿನವರು ಲಿವ್-ಇನ್ ಸಂಬಂಧದಲ್ಲಿ ನ್ಯಾಯಾಲಯದಿಂದ ಜೀವ ರಕ್ಷಣೆ ಮತ್ತು ಸ್ವಾತಂತ್ರ್ಯ ಕೋರಿದಾಗ ನ್ಯಾಯಾಲಯಗಳು ಎದುರಿಸುವ ಸಮಸ್ಯೆಯನ್ನು ಎತ್ತಿ ತೋರಿಸಿದರು.

ಅಲ್ಲದೆ ಇಂತಹ ಸಂಬಂಧಗಳನ್ನು ಶಾಸನ ನಿಯಂತ್ರಿಸದೇ ಇರುವುದರಿಂದ ಪಕ್ಷಕಾರರು ವಯಸ್ಕರಾದ ಬಳಿಕ ಅವರಿಗೆ ನ್ಯಾಯಾಲಯ ರಕ್ಷಣೆ ನಿರಾಕರಿಸುವುದು ಸಾಧ್ಯವಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಏನು ಎಂದು ಅದು ಪ್ರಶ್ನಿಸಿತು.

“ಹದಿಹರೆಯದವರಲ್ಲಿ (ತಾಂತ್ರಿಕವಾಗಿ ಮೇಲೆ ಹೇಳಿದ ಕಾಯಿದೆಯ ಪ್ರಕಾರ ವಯಸ್ಕರಾಗಿದ್ದರೂ ವಾಸ್ತವವಾಗಿ ಸಂಪೂರ್ಣ ಪ್ರಬುದ್ಧತೆ ಪಡೆದಿರುವುದಿಲ್ಲ) ಲಿವ್‌ ಇನ್‌ ಸಂಬಂಧಕ್ಕೆ ಮುಂದಾಗಿ ನಂತರ ಅಂತಹ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಟ್ಟ ಅನೇಕ ಉದಾಹರಣೆಗಳಿವೆ. ಇಂತಹ ನಿರ್ಧಾರಗಳು ನಿಸ್ಸಂಶಯವಾಗಿ ಅವರ ಪೋಷಕರು ಮತ್ತು ಕುಟುಂಬಕ್ಕೆ ಆಘಾತ ಉಂಟು ಮಾಡುತ್ತವೆ” ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ. 21ಕ್ಕೆ ನಿಗದಿಪಡಿಸಲಾಗಿದೆ.

Kannada Bar & Bench
kannada.barandbench.com