ಸುದ್ದಿಗಳು

ಅನೂರ್ಜಿತ ಇಲ್ಲವೇ ಅನೂರ್ಜಿತವಾಗಬಹುದಾದ ವಿವಾಹದಿಂದ ಜನಿಸಿದ ಮಗುವಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆ: ಸುಪ್ರೀಂ

ಹಿಂದೂ ಉತ್ತರಾಧಿಕಾರ ಕಾಯಿದೆಯ ಉದ್ದೇಶದಂತೆ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 16(1) ಮತ್ತು (2 ) ಪ್ರಕಾರ ಅಂತಹ ಮಗು ನ್ಯಾಯಸಮ್ಮತ ಸಂಬಂಧಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ

Bar & Bench

ಅನೂರ್ಜಿತ ಇಲ್ಲವೇ ಅನೂರ್ಜಿತವಾಗಬಹುದಾದ ವಿವಾಹದಿಂದ ಜನಿಸಿದ ಮಗುವಿಗೂ ಅವಿಭಕ್ತ ಹಿಂದೂ ಕುಟುಂಬಗಳ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿದ ತೀರ್ಪಿನಲ್ಲಿ ತಿಳಿಸಿದೆ [ರೇವಣಸಿದ್ದಪ್ಪ ಮತ್ತಿತರರು ಹಾಗೂ ಮಲ್ಲಿಕಾರ್ಜುನ್ ಇನ್ನಿತರರ ನಡುವಣ ಪ್ರಕರಣ].

ಹಿಂದೂ ಉತ್ತರಾಧಿಕಾರ ಕಾಯಿದೆಯ  ಉದ್ದೇಶದಂತೆ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 16(1) ಮತ್ತು (2 ) ಪ್ರಕಾರ ಅಂತಹ ಮಗು ನ್ಯಾಯಯುತ ಸಂಬಂಧಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಸಮಾನ ಆಸ್ತಿಯ ಕಾಳಜಿ ಕುರಿತು ಹೇಳುವ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 6, ಆಸ್ತಿ ಭಾಗವಾದರೆ ಅದರಂತೆ ಸಮಾನ ಆಸ್ತಿ ದೊರೆಯಬೇಕು ಎಂಬ ಕಾನೂನು ಪರಿಕಲ್ಪನೆಯನ್ನು ಮಂಡಿಸುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

ಪರಿಣಾಮ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 16(1) ಮತ್ತು (2) ರ ಅಡಿಯಲ್ಲಿ ಅಂತಹ ಮಕ್ಕಳಿಗೆ ಅವರ ಪೋಷಕರ ಆಸ್ತಿಯಲ್ಲಿ ಹಕ್ಕಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಹಿಂದೂ ಉತ್ತರಾಧಿಕಾರ ಕಾಯಿದೆಯ ನಿಯಮಾವಳಿಗಳನ್ನು ಹಿಂದೂ ವಿವಾಹ ಕಾಯಿದೆಯೊಂದಿಗೆ ಸಮೀಕರಿಸಬೇಕು ಎಂದು  ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದರೆ ಹಾಗೆ ಅನೂರ್ಜಿತ ಇಲ್ಲವೇ ಅನೂರ್ಜಿತವಾಗಬಹುದಾದ ವಿವಾಹದಿಂದ ಜನಿಸಿದ ಮಕ್ಕಳಿಗೆ ಕುಟುಂಬದ ಉಳಿದ ಸದಸ್ಯರ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಅಥವಾ ಅವರು ಆಸ್ತಿಯ ಹಕ್ಕನ್ನು ಪಡೆಯುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಅನೂರ್ಜಿತ/ಅನೂರ್ಜಿತವಾಗಬಹುದಾದ ವಿವಾಹದಿಂದ ಜನಿಸಿದ ಮಗು ತನ್ನಷ್ಟಕ್ಕೆ ತಾನೇ ಜಂಟಿ ಉತ್ತರಾಧಿಕಾರಿ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.