ಮೋಟಾರು ಅಪಘಾತಗಳಲ್ಲಿ ಗಾಯಗೊಂಡ ಮಕ್ಕಳಿಗೆ ಪರಿಹಾರ ನೀಡುವ ವಿಚಾರ ಬಂದಾಗ ಅವರು ಗಳಿಕೆ ಇಲ್ಲದ ವ್ಯಕ್ತಿಗಳು ಎಂದು ಪರಿಗಣಿಸಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಹಿತೇಶ್ ನಾಗ್ಜಿಭಾಯ್ ಪಟೇಲ್ ಮತ್ತು ಬಾಬಾಭಾಯ್ ನಾಗ್ಜಿಭಾಯ್ ರಬಾರಿ ನಡುವಣ ಪ್ರಕರಣ].
ಭವಿಷ್ಯದಲ್ಲಿ ಆದಾಯ ಗಳಿಸುವ ಸಾಮರ್ಥ್ಯ ಮಗುವಿಗೆ ಇತ್ತು ಎಂಬ ಸಂಗತಿಯನ್ನು ನ್ಯಾಯಮಂಡಳಿಗಳು ನಿರ್ಲಕ್ಷಿಸಬಾರದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಒತ್ತಿ ಹೇಳಿದೆ.
"ಮಕ್ಕಳು ಗಾಯಗೊಂಡ ಅಥವಾ ಮೃತಪಟ್ಟ ಪ್ರಕರಣವನ್ನು ನ್ಯಾಯಮಂಡಳಿ ಅಥವಾ ಮೇಲ್ಮನವಿ ಹಂತದಲ್ಲಿ ಹೈಕೋರ್ಟ್ ಪರಿಗಣಿಸುವಾಗ, ಆದಾಯ ನಷ್ಟ ಉಂಟಾಗಿರುವ ಬಗ್ಗೆ ಪರಿಹಾರ ನೀಡುವುದನ್ನು ಸಂಬಂಧಿತ ರಾಜ್ಯದಲ್ಲಿ ಆ ವೇಳೆಗೆ ಕಾರ್ಮಿಕರಿಗೆ ನೀಡಲಾಗುವ ಕನಿಷ್ಠ ವೇತನದ ಆಧಾರದ ಮೇಲೆಯೇ ನಿರ್ಧರಿಸಬೇಕು” ಎಂದು ಪೀಠ ತಿಳಿಸಿದೆ.
ಆದ್ದರಿಂದ ಅಪಘಾತವೊಂದರಲ್ಲಿ ಶೇ. 90 ರಷ್ಟು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ 8 ವರ್ಷದ ಬಾಲಕ ಹಿತೇಶ್ ಪಟೇಲ್ ಅವರಿಗೆ ನೀಡಲಾಗಿದ್ದ ₹3.9 ಲಕ್ಷ ಪರಿಹಾರವನ್ನು ಅದು ₹35.90 ಲಕ್ಷಕ್ಕೆ ಹೆಚ್ಚಿಸಿತು. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗಳು ಮತ್ತು ಹೈಕೋರ್ಟ್‌ಗಳು ಅಂತಹ ಪ್ರಕರಣಗಳಲ್ಲಿ ಕನಿಷ್ಠ ವೇತನ ಮಾನದಂಡ ಅನ್ವಯಿಸುವಂತೆ ಅದು ಸೂಚಿಸಿತು.
2020ರ ಕಾಜಲ್ ಮತ್ತು ಜಗದೀಶ್ ಚಂದ್ ನಡುವಣ ಪ್ರಕರಣದ ತೀರ್ಪಿನಲ್ಲಿ ಸ್ಪಷ್ಟಪಡಿಸಲಾದ ಅಂಶಗಳನ್ನು ಪಾಲಿಸದ ಗುಜರಾತ್ ಹೈಕೋರ್ಟ್ ಮತ್ತು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗಳೆರಡನ್ನೂ ಪೀಠ ಟೀಕಿಸಿತು.
ಹಿತೇಶ್ ಕುಟುಂಬ 1988ರ ಮೋಟಾರು ವಾಹನ ಕಾಯಿದೆಯ ಸೆಕ್ಷನ್ 166 ರ ಅಡಿಯಲ್ಲಿ ₹10 ಲಕ್ಷ ಪರಿಹಾರ ಕೋರಿ ಮೊಕದ್ದಮೆ ಹೂಡಿತ್ತಾದರೂ ನ್ಯಾಯಮಂಡಳಿ ಕೇವಲ ₹3.9 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಆಗಸ್ಟ್ 2024ರಲ್ಲಿ, ಗುಜರಾತ್ ಹೈಕೋರ್ಟ್ ಮೊತ್ತವನ್ನು ₹8.65 ಲಕ್ಷಕ್ಕೆ ಹೆಚ್ಚಿಸಿತು. ಶೇಕಡಾ 90ರಷ್ಟು ಅಂಗವೈಕಲ್ಯವನ್ನು ಗುರುತಿಸಿ ಕೃತಕ ಅಂಗಕ್ಕೆ ₹2 ಲಕ್ಷ ಮತ್ತು ಸೌಲಭ್ಯಗಳ ನಷ್ಟಕ್ಕೆ ₹5 ಲಕ್ಷ ಸೇರಿದಂತೆ ಹೆಚ್ಚುವರಿ ಮೊತ್ತ ನೀಡಿತು.
ಆದರೂ ಸುಪ್ರೀಂ ಕೋರ್ಟ್ ಭಿನ್ನ ನಿಲುವು ತಳೆದಿದೆ. 2012ರಲ್ಲಿ ಗುಜರಾತ್‌ನಲ್ಲಿ ಕೌಶಲ್ಯಪೂರ್ಣ ಕೆಲಸಗಾರರಿಗೆ ಕನಿಷ್ಠ ವೇತನದ ಆಧಾರದ ಮೇಲೆ ಹಿತೇಶ್ ಅವರ ಕಾಲ್ಪನಿಕ ಆದಾಯವನ್ನು ತಿಂಗಳಿಗೆ ₹6,836 ಎಂದು ನಿಗದಿಪಡಿಸಿತು. ಭವಿಷ್ಯದ ನಿರೀಕ್ಷೆಗಳಿಗೆ ಶೇಕಡ 40ರಷ್ಟು ಸೇರಿಸಿ 18 ಪಟ್ಟು ಹೆಚ್ಚಿಸಿತು.
ಶೇ 90ರಷ್ಟು ಶಾಶ್ವತ ಅಂಗವೈಕಲ್ಯ ಉಂಟಾಗಿರುವುದನ್ನು ಪರಿಗಣಿಸಿ, ಭವಿಷ್ಯದ ಗಳಿಕೆಯ ನಷ್ಟಕ್ಕೆ ₹18.60 ಲಕ್ಷ ಪರಿಹಾರ, ಅನುಭವಿಸಿದ ಸಂಕಟಕ್ಕೆ ₹5 ಲಕ್ಷ, ಮದುವೆ ಸಾಧ್ಯತೆ ಇಲ್ಲದಿರುವುದಕ್ಕೆ ₹3 ಲಕ್ಷ, ಕೃತಕ ಅಂಗದ ವೆಚ್ಚಕ್ಕೆ ₹5 ಲಕ್ಷ, ವಿಶೇಷ ಆಹಾರ ಮತ್ತು ಸಾರಿಗೆಗಾಗಿ ₹1 ಲಕ್ಷ, ವೈದ್ಯಕೀಯ ಮತ್ತು ಭವಿಷ್ಯದ ವೆಚ್ಚಗಳಿಗೆ ₹80,000, ಚಿಕಿತ್ಸೆಯ ಸಮಯದಲ್ಲಿ ಆದಾಯ ನಷ್ಟಕ್ಕೆ ₹50,000 ಮತ್ತು ಸೌಲಭ್ಯಗಳ ನಷ್ಟಕ್ಕೆ ₹2 ಲಕ್ಷ ಸೇರಿದಂತೆ ಪರಿಹಾರ ನೀಡಿತು. ಹೀಗಾಗಿ ಪರಿಹಾರ ಅರ್ಜಿ ಸಲ್ಲಿಸಿದ ದಿನದಿಂದ ಶೇಕಡಾ ಒಂಬತ್ತರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕಾದ ಒಟ್ಟು ಪರಿಹಾರದ ಮೊತ್ತ ₹35.9 ಲಕ್ಷವಾಯಿತು.
ಅಲ್ಲದೆ ಪರಿಹಾರ ಕೋರಿರುವವರು ಆದಾಯ ಪುರಾವೆಗಳನ್ನು ಸಾಬೀತುಪಡಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ, ವಿಮಾ ಕಂಪನಿಗಳು ನ್ಯಾಯಮಂಡಳಿಗಳ ಮುಂದೆ ಸಂಬಂಧಿತ ಕನಿಷ್ಠ ವೇತನ ಮಾಹಿತಿ ಒದಗಿಸಬೇಕು ಎಂದು ಅದು ನಿರ್ದೇಶಿಸಿತು. ದೇಶದ ಎಲ್ಲಾ ಹೈಕೋರ್ಟ್‌ಗಳು ಮತ್ತು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗಳಿಗೆ ಆದೇಶದ ಪ್ರತಿ ಒದಗಿಸುವಂತೆ ರಿಜಿಸ್ಟ್ರಾರ್ ಅವರಿಗೆ ಅದು ಸೂಚಿಸಿತು. ಸೆಪ್ಟೆಂಬರ್ 30 ರೊಳಗೆ ಹಿತೇಶ್ ಪಟೇಲ್ ಅವರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ಜಮಾ ಮಾಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು.