Bombay High Court
Bombay High Court 
ಸುದ್ದಿಗಳು

ಮಕ್ಕಳಿಗೆ ಪೋಷಕರು, ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯ ಪಡೆಯುವ ಹಕ್ಕಿದೆ: ಬಾಂಬೆ ಹೈಕೋರ್ಟ್

Bar & Bench

ಅಜ್ಜ ಅಜ್ಜಿಯರನ್ನು ಭೇಟಿಯಾಗಲು ತಮ್ಮ ಮಕ್ಕಳನ್ನು ನಾಲ್ಕು ದಿನಗಳ ಮಟ್ಟಿಗೆ ತಮ್ಮಿಂ ದ ಪ್ರತ್ಯೇಕಗೊಂಡಿರುವ ಗಂಡನ ಸುಪರ್ದಿಗೆ ಒಪ್ಪಿಸಬೇಕು ಎಂದು ಆದೇಶಿಸಿರುವ ಬಾಂಬೆ ಹೈಕೋರ್ಟ್‌ ಮಕ್ಕಳಿಗೆ ಪೋಷಕರು, ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯ ಪಡೆಯುವ ಹಕ್ಕಿದೆ ಎಂದು ತಿಳಿಸಿದೆ.

ಹೆಂಡತಿಯ ಸುಪರ್ದಿಯಲ್ಲಿರುವ ಮಕ್ಕಳನ್ನು ತಾತ್ಕಾಲಿಕವಾಗಿ ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಗಂಡ ಕೋರಿದ್ದ ಅರ್ಜಿಯ ವಿಚಾರಣೆ ನ್ಯಾ. ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.

ನನ್ನ ತಂದೆಗೆ (ಮಕ್ಕಳ ಅಜ್ಜ) ಆರೋಗ್ಯದ ಸಮಸ್ಯೆ ಇದ್ದು ಮೊಮ್ಮಕ್ಕಳನ್ನು ಕಾಣಲು ಬಯಸುತ್ತಿದ್ದಾರೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಮಕ್ಕಳ ಹುಟ್ಟುಹಬ್ಬದ ದಿನ ಅವರನ್ನು ಭೇಟಿಯಾಗಲು ತನ್ನ ಹೆಂಡತಿ ಅವಕಾಶ ಮಾಡಿಕೊಡಲಿಲ್ಲ. ಆದ್ದರಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

“ಪೋಷಣೆ ಮಾಡುತ್ತಿಲ್ಲದ ಪೋಷಕರಾಗಿರುವ ಅರ್ಜಿದಾರ ತಂದೆ ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವ ಮತ್ತು ಮಕ್ಕಳ ಸಾಹಚರ್ಯ ಆನಂದಿಸುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಬೇಕಿಲ್ಲ. ಇದಲ್ಲದೆ ಮಕ್ಕಳಿಗೆ ತಮ್ಮ ಪೋಷಕರು ಹಾಗೆಯೇ, ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯ ಪಡೆಯುವ ಹಕ್ಕಿದೆ. ವೈಯಕ್ತಿ ಬೆಳವಣಿಗೆ ಮತ್ತು ಮಕ್ಕಳ ಒಟ್ಟಾರೆ ಯೋಗಕ್ಷೇಮಕ್ಕೆ ಇದು ಅತ್ಯಗತ್ಯ” ಎಂದು ನ್ಯಾಯಾಲಯ ಹೇಳಿತು.

ಆದ್ದರಿಂದ ನಿಗದಿತ ದಿನದಂದು ತಮ್ಮ ಮಕ್ಕಳನ್ನು ಪುಣೆಯ ಫೀನಿಕ್ಸ್ ಮಾಲ್‌ಗೆ ಕರೆತಂದು ಸಂಜೆಯವರೆಗೆ ಪತಿ ಮತ್ತು ಮಕ್ಕಳೊಂದಿಗೆ ಒಟ್ಟಿಗೆ ಸಮಯ ಕಳೆಯಬೇಕು. ಅಲ್ಲದೆ ಅಲ್ಲಿಂದ ನಾಲ್ಕು ದಿನಗಳ ಕಾಲ ಮಕ್ಕಳನ್ನು ತನ್ನ ಗಂಡನ ಸುಪರ್ದಿಗೆ ಒಪ್ಪಿಸಬೇಕು ಪತ್ನಿಗೆ ಪೀಠ ಆದೇಶಿಸಿತು.

ಜೊತೆಗೆ ತಮ್ಮ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ಶಾಲಿನಿ ಫನ್ಸಾಲ್ಕರ್‌ ಜೋಶಿ ಅವರು ಮಧ್ಯಸ್ಥಿಕೆ ವಹಿಸಬೇಕು. ರಾಜಿ ಸಂಧಾನದ ವರದಿಯನ್ನು ಆರು ತಿಂಗಳೊಳಗೆ ಸಲ್ಲಿಸಬೇಕೆಂದು ಅದು ಸೂಚಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Contempt_petition_order_dated_April_13__2022.pdf
Preview