ಮಕ್ಕಳ ವೈಯಕ್ತಿಕ ಮಾಹಿತಿ ರಕ್ಷಣೆಯ ಗುರಿಯೊಂದಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕರಡು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಾವಳಿ- 2025 ಅನ್ನು ಜನವರಿ 3ರಂದು ಪ್ರಕಟಿಸಿದೆ.
ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ 2023ರ ಭಾಗವಾಗಿ ಈ ಕರಡು ನಿಯಮಾವಳಿಯನ್ನು ರೂಪಿಸಲಾಗಿದೆ. ನಿಯಮಗಳ ಕುರಿತು ಆಕ್ಷೇಪಣೆ ಮತ್ತು ಸಲಹೆಗಳಿದ್ದಲ್ಲಿ ಅವುಗಳನ್ನು ಫೆಬ್ರವರಿ 18ರೊಳಗೆ ಸಲ್ಲಿಸುವಂತೆ ಸರ್ಕಾರ ಕೋರಿದೆ. ನಿಯಮಾವಳಿಯ ಪ್ರಮುಖ ಸಂಗತಿಗಳು ಹೀಗಿವೆ:
ಮಕ್ಕಳ ರಕ್ಷಣಾ ಕ್ರಮಗಳು
ಹೊಸ ನಿಯಮಾವಳಿ ಪ್ರಕಾರ ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಬಳಸಿಕೊಳ್ಳುವ ಮುನ್ನ ಸಾಮಾಜಿಕ ಮಾಧ್ಯಮ ಸೇರಿದಂತೆ ಆನ್‌ಲೈನ್ ಸೇವಾ ಪೂರೈಕೆದಾರರು ಪೋಷಕರ ಸಮ್ಮತಿ ಪಡೆಯಬೇಕಾಗುತ್ತದೆ. ಉದಾಹರಣೆಗೆ, ಮಗು ಆನ್‌ಲೈನ್ ಖಾತೆ ತೆರೆಯಲು ಬಯಸಿದರೆ, ಮಗುವಿನ ದತ್ತಾಂಶವನ್ನು ಪ್ರಕ್ರಿಯೆಗೊಳಿಸುವ ಮೊದಲು ಸುರಕ್ಷಿತ ವಿಧಾನಗಳ ಮೂಲಕ ಪೋಷಕರು ತಮ್ಮ ಸಮ್ಮತಿ ಸೂಚಿಸಬೇಕಾಗುತ್ತದೆ.
ಸರ್ಕಾರದಿಂದ ವೈಯಕ್ತಿಕ ದತ್ತಾಂಶ ಪ್ರಕ್ರಿಯೆ
ಸಬ್ಸಿಡಿ, ಸೌಲಭ್ಯ ಅಥವಾ ಸೇವೆಗಳನ್ನು ಒದಗಿಸುವಾಗ ವೈಯಕ್ತಿಕ ದತ್ತಾಂಶವನ್ನು ಬಳಸಲು ಕರಡು ನಿಯಮಾವಳಿ ಸರ್ಕಾರದ ಅಂಗಗಳಿಗೆ ಅವಕಾಶ ನೀಡುತ್ತವೆ. ಸಾರ್ವಜನಿಕ ವಲಯದ ದತ್ತಾಂಶ ನಿರ್ವಹಣೆಯಲ್ಲಿ ಹೊಣೆಗಾರಿಕೆ ಬಲಪಡಿಸುವ, ಸ್ಥಾಪಿತ ಮಾನದಂಡಗಳು ಮತ್ತು ಸುರಕ್ಷತೆಗಳೊಂದಿಗೆ ಅಂತಹ ಸಂಸ್ಕರಣೆ ಹೊಂದಿಕೆಯಾಗುವುದನ್ನು ಖಾತ್ರಿಪಡಿಸುವ ಗುರಿ ಈ ನಿಬಂಧನೆಯದ್ದಾಗಿದೆ.
ಭದ್ರತಾ ಕ್ರಮಗಳು
ವೈಯಕ್ತಿಕ ದತ್ತಾಂಶಗಳ ಉಲ್ಲಂಘನೆಯಾಗದಂತೆ ರಕ್ಷಿಸಲು ದತ್ತಾಂಶ ನಿರ್ವಹಿಸುವವರು ಎನ್‌ಕ್ರಿಪ್ಷನ್, ಪ್ರಕ್ರಿಯೆಗೆ ಬಳಸುವ ಕಂಪ್ಯೂಟರ್ ಸಂಪನ್ಮೂಲಗಳ ಬಳಕೆ ನಿಯಂತ್ರಣ, ಲಾಗ್ ನಿರ್ವಹಣೆಯಂತಹ ಸೂಕ್ತ ಭದ್ರತಾ ಸುರಕ್ಷತೆಗಳನ್ನು ಅಳವಡಿಸಿಕೊಳ್ಳಬೇಕು.
ದತ್ತಾಂಶ ಉಲ್ಲಂಘಿಸಿದಾಗ ಎಚ್ಚರಿಸುವುದು
ದತ್ತಾಂಶ ಉಲ್ಲಂಘನೆಯಾದರೆ, ದತ್ತಾಂಶ ನಿರ್ವಾಹಕರು ಬಾಧಿತ ವ್ಯಕ್ತಿಗಳಿಗೆ ತ್ವರಿತವಾಗಿ ನೋಟಿಫಿಕೇಷನ್ ನೀಡಬೇಕು. ಉಲ್ಲಂಘನೆಯ ಸ್ವರೂಪ ಮತ್ತು ವ್ಯಾಪ್ತಿ, ಅವರು ಅನುಭವಿಸುವ ಪರಿಣಾಮ, ಅಪಾಯ ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳನ್ನು ವಿವರಿಸಬೇಕು, ಅಲ್ಲದೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಡೆದುಕೊಳ್ಳುವುದಕ್ಕಾಗಿ ನಿರ್ವಾಹಕರು ನಿಯಂತ್ರಕ ಮಂಡಳಿಗೆ ನಿರ್ದಿಷ್ಟ ಗಡುವಿನೊಳಗೆ ಉಲ್ಲಂಘನೆಯ ಮಾಹಿತಿ ನೀಡಬೇಕು.
ದತ್ತಾಂಶ ಇರಿಸಿಕೊಳ್ಳುವಿಕೆ
ವೈಯಕ್ತಿಕ ದತ್ತಾಂಶವನ್ನು ಬಳಸದಿದ್ದರೆ ಅವುಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಅಳಿಸಿಹಾಕಬೇಕು. ಸಂಸ್ಥೆಗಳು ತಮ್ಮ ದತ್ತಾಂಶ ಇರಿಸಿಕೊಳ್ಳುವಿಕೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಅನಗತ್ಯ ದತ್ತಾಂಶವನ್ನು ಅನಿರ್ದಿಷ್ಟಾವಧಿಯವರೆಗೆ ಇರಿಸಿಕೊಳ್ಳದಂತೆ ಎಚ್ಚರವಹಿಸಬೇಕು.