Theatre 
ಸುದ್ದಿಗಳು

ಹೊರಗಿನ ಆಹಾರಕ್ಕೆ ಕಡಿವಾಣ ಹಾಕುವ ಹಕ್ಕು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ ಮಾಲೀಕರಿಗೆ ಇದೆ: ಸುಪ್ರೀಂ ಕೋರ್ಟ್

ಪ್ರೇಕ್ಷಕರು ತರುವ ತಮ್ಮದೇ ಆದ ಆಹಾರ- ಪಾನೀಯಗಳನ್ನು ಮಲ್ಟಿಪ್ಲೆಕ್ಸ್‌ಗಳು ಮತ್ತು ಚಲನಚಿತ್ರ ಮಂದಿರಗಳ ಒಳಗೆ ಕೊಂಡೊಯ್ಯುವುದನ್ನು ತಡೆಯಬಾರದು ಎಂದು ಕಾಶ್ಮೀರ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ನ್ಯಾಯಾಲಯ ಬದಿಗೆ ಸರಿಸಿತು.

Bar & Bench

ಪ್ರೇಕ್ಷಕರು ಹೊರಗಿನಿಂದ ಆಹಾರ ಮತ್ತು ಪಾನೀಯಗಳನ್ನು ಚಲನಚಿತ್ರ ಮಂದಿರಕ್ಕೆ ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕು ಸಿನಿಮಾ ಹಾಲ್‌ ಮಾಲೀಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಚಿತ್ರಮಂದಿರವು ಮಾಲೀಕರ ಖಾಸಗಿ ಆಸ್ತಿಯಾಗಿದೆ. ಸಾರ್ವಜನಿಕ ಹಿತಾಸಕ್ತಿ ಅಥವಾ ಸುರಕ್ಷತೆಗೆ ವ್ಯತಿರಿಕ್ತವಾಗಿರದ; ತಾವು ಸೂಕ್ತವೆಂದು ಭಾವಿಸುವಂತಹ ನಿಯಮ ಮತ್ತು ಷರತ್ತುಗಳನ್ನು ಹಾಕುವ ಅಧಿಕಾರ ಮಾಲೀಕರಿಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ಹೇಳಿದೆ.

"ಚಿತ್ರಮಂದಿರದ ಮಾಲೀಕರಿಗೆ ಆಹಾರ ಮತ್ತು ಪಾನೀಯಗಳ ಪ್ರವೇಶವನ್ನು ನಿಯಂತ್ರಿಸುವ ಹಕ್ಕು ಇದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮನರಂಜನೆಗಾಗಿ ಭೇಟಿ ನೀಡುತ್ತಾರೆ. ಅಲ್ಲಿ ಲಭ್ಯವಿರುವುದನ್ನು ಸೇವಿಸಬೇಕೇ, ಬೇಡವೇ ಎಂಬುದು ಸಂಪೂರ್ಣವಾಗಿ ಪ್ರೇಕ್ಷಕರ ಆಯ್ಕೆಗೆ ಸಂಬಂಧಿಸಿದ್ದಾಗಿರುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಚಲನಚಿತ್ರ ಮಂದಿರ ಪ್ರವೇಶಿಸುವ ಪ್ರೇಕ್ಷಕರು ಮಾಲೀಕರ ನಿಯಮಗಳಿಗೆ ಬದ್ಧವಾಗಿರಬೇಕು. ಇದು ಸ್ಪಷ್ಟವಾಗಿ ಚಿತ್ರಮಂದಿರ ಮಾಲೀಕರ ವಾಣಿಜ್ಯಾತ್ಮಕ ನಿರ್ಧಾರದ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಬೇರೆಡೆಯಿಂದ ತಂದ ಆಹಾರ- ಪಾನೀಯಗಳನ್ನು ಮಲ್ಟಿಪ್ಲೆಕ್ಸ್‌ಗಳು ಮತ್ತು ಚಲನಚಿತ್ರ ಮಂದಿರಗಳಿಗೆ ಕೊಂಡೊಯ್ಯುವುದನ್ನು ತಡೆಯಬಾರದು ಎಂದು ಕಾಶ್ಮೀರ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ನ್ಯಾಯಾಲಯ ಬದಿಗೆ ಸರಿಸಿತು.

"ಇಂತಹ ಆದೇಶ ಜಾರಿಗೊಳಿಸುವ  ನ್ಯಾಯವ್ಯಾಪ್ತಿ ಹೈಕೋರ್ಟ್‌ಗೆ ಇಲ್ಲ ಉಚಿತವಾಗಿ ಕುಡಿಯುವ ನೀರು ಒದಗಿಸಲಾಗುವುದು ಎಂದು ಚಿತ್ರ ಮಂದಿರ ಮಾಲೀಕರು ಹೇಳಿದ್ದಾರೆ. ನವಜಾತ ಶಿಶು ಪೋಷಕರರೊಂದಿಗೆ ಬಂದಾಗ ಅದಕ್ಕೆ ಅಗತ್ಯವಿರುವ ಆಹಾರ ನೀಡಲು ತಮ್ಮ ಅಭ್ಯಂತರ ಇಲ್ಲ ಎಂದೂ ತಿಳಿಸಿದ್ದಾರೆ” ಎಂಬುದಾಗಿ ನ್ಯಾಯಾಲಯ ವಿವರಿಸಿತು.

 ಹೈಕೋರ್ಟ್‌ 2018ರಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಚಿತ್ರ ಮಂದಿರ ಮಾಲೀಕರು ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿತು.