ಸುದ್ದಿಗಳು

ಮಧ್ಯಸ್ಥಿಕೆ ಒಪ್ಪಂದಕ್ಕೆ ಬದ್ಧವಾಗಿರದೇ ಇದ್ದಾಗ ವಸೂಲಾತಿಗಾಗಿ ಹೂಡಲಾದ ಮೊಕದ್ದಮೆ ನಿರ್ವಹಿಸಬಹುದು: ಕರ್ನಾಟಕ ಹೈಕೋರ್ಟ್

Bar & Bench

ಮಧ್ಯಸ್ಥಿಕೆ ಒಪ್ಪಂದಕ್ಕೆ ಬದ್ಧರಾಗದೇ ಇರುವ ಷರತ್ತುಗಳಿದ್ದಾಗ ಸಿವಿಲ್‌ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಸುವುದನ್ನು ಪಕ್ಷಕಕಾರಿಗೆ ಮುಕ್ತವಾಗಿಡುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಪುನರುಚ್ಚರಿಸಿದೆ. [ಮಾಸ್ಟರ್ಸ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮತ್ತು ನಿತೇಶ್ ಎಸ್ಟೇಟ್ಸ್ ಲಿಮಿಟೆಡ್ ನಡುವಣ ಪ್ರಕರಣ ].

ಈಗಾಗಲೇ ನೀಡಿರುವ ತೀರ್ಪುಗಳ ಪ್ರಕಾರ ಮಧ್ಯಸ್ಥಿಕೆಗೆ ಸಂಬಂಧಿಸಿದಂತೆ ಪಕ್ಷಗಳ ಹೊಸ ಒಪ್ಪಿಗೆಗೆ ಅವಕಾಶವನ್ನು ಸೂಚಿಸುವ ಒಪ್ಪಂದಗಳು ಮಧ್ಯಸ್ಥಿಕೆ ಒಪ್ಪಂದಗಳಲ್ಲ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಪುನರುಚ್ಚರಿಸಿದರು.

"... ಮಧ್ಯಸ್ಥಿಕೆ ಒಪ್ಪಂದದಲ್ಲಿ ತೊಡಗಿಕೊಳ್ಳಲು ಪಕ್ಷಕಾರರಿಗೆ ಸಂಪೂರ್ಣವಾಗಿ ಯಾವುದೇ ರೀತಿಯ ಉದ್ದೇಶವಿಲ್ಲದಿದ್ದರೆ ಮತ್ತು ತಮ್ಮ ವ್ಯಾಜ್ಯಗಳನ್ನು ನ್ಯಾಯ ನಿರ್ಣಯಕ್ಕಾಗಿ ಮಧ್ಯಸ್ಥಗಾರರಿಗೆ ಉಲ್ಲೇಖಿಸುವ ಉದ್ದೇಶ ಇಲ್ಲದಿದ್ದರೆ ಮತ್ತು ಅಂತಹ ನ್ಯಾಯಮಂಡಳಿಯ ತೀರ್ಪಿಗೆ ಬದ್ಧರಾಗಲು ಯಾವುದೇ ಇಚ್ಛೆ ಇಲ್ಲದಿದ್ದರೆ ಆಗ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಸ್ತುತ ಪ್ರಕರಣ ವಿಚಾರಣೆಗೆ ತುಂಬಾ ಅರ್ಹವಾಗಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ ಕೆಳ ನ್ಯಾಯಾಲಯ ಪ್ರಸ್ತುತ ಪ್ರಕರಣದಲ್ಲಿ ಮಧ್ಯಸ್ಥಿಕೆಗೆ ಕಕ್ಷಿದಾರರನ್ನು ಸೂಚಿಸಲು ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆಯ ಸೆಕ್ಷನ್ 8 ಅನ್ನು ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಪ್ರತಿವಾದಿ ಕಂಪೆನಿ ಜೊತೆ ಮಾಡಿಕೊಂಡಿದ್ದ ಒಪ್ಪಂದದಂತೆ ವಸೂಲಾತಿಗಾಗಿ ಅರ್ಜಿದಾರ ಕಂಪೆನಿ ಬೆಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಬಳಿಕ ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರಕರಣವನ್ನು ಮಧ್ಯಸ್ಥಿಕೆಗೆ ಶಿಫಾರಸು ಮಾಡಲು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ಮಧ್ಯಸ್ಥಿಕೆಗೆ ಪ್ರಕರಣವನ್ನು ಉಲ್ಲೇಖಿಸಿ ಜಿಲ್ಲಾ ನ್ಯಾಯಾಲಯ ದೂರನ್ನು ಮರಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಈಗಿನ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು. ಪಕ್ಷಕಾರರ ನಡುವಿನ ಒಪ್ಪಂದ ಮಧ್ಯಸ್ಥಿಕೆ ಷರತ್ತಿಗೆ ಬದ್ಧವಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು. ಅಲ್ಲದೆ ಒಪ್ಪಂದದಲ್ಲಿ ʼಮಧ್ಯಸ್ಥಿಕೆದಾರʼ, ʼಮಧ್ಯಸ್ಥಿಕೆʼ ಎಂಬ ಪದಗಳ ಬಳಕೆ ಮಾಡಿರುವುದು ಮಧಸ್ಥಿಕೆ ನ್ಯಾಯಂಂಡಳಿ ನೀಡುವ ತೀರ್ಪಿಗೆ ಬದ್ಧರಾಗಿರಬೇಕು ಎಂಬುದನ್ನು ಸೂಚಿಸುವುದಿಲ್ಲ ಎಂದು ವಾದಿಸಲಾಯಿತು.

ಆದರೆ ಪ್ರತಿವಾದಿಗಳು ಸಿವಿಲ್‌ ಪ್ರಕ್ರಿಯಾ ಸಂಹಿತೆ ಆದೇಶ 43ರ ಅಡಿಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ವಿವಿಧ ಮೇಲ್ಮನವಿಗಳ ವಿಚಾರಣೆ ಇನ್ನೂ ಮುಗಿದಿಲ್ಲವಾದ್ದರಿಂದ ಪ್ರಸ್ತುತ ಮೇಲ್ಮನವಿಯ ವಿಚಾರಣೆ ನಡೆಸಬಾರದು ಎಂದು ವಾದಿಸಿದ್ದರು.

ಅರ್ಜಿದಾರರ ಪರವಾಗಿ ವಕೀಲ ಆದಿತ್ಯ ವಿಕ್ರಂ ಭಟ್‌ ವಾದಿಸಿದ್ದರು. ಪ್ರತಿವಾದಿಗಳನ್ನು ವಕೀಲರಾದ ಚಿನ್ಮಯ್‌ ಜೆ ಮಿರ್ಜಿ ಮತ್ತು ಜೆ ಕಿರಣ್‌ ಪ್ರತಿನಿಧಿಸಿದ್ದರು.