ಬಿಎಸ್‌ವೈ ಕುಟುಂಬ, ಸಚಿವ ಸೋಮಶೇಖರ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧದ ವಿಚಾರಣೆಗೆ ರಾಜ್ಯಪಾಲರು ಅನುಮತಿ ನಿರಾಕರಿಸಿದ್ದನ್ನು ಆಧರಿಸಿ ಜನಪ್ರತಿನಿಧಿಗಳ ನ್ಯಾಯಾಲಯವು ಖಾಸಗಿ ದೂರನ್ನು ವಜಾ ಮಾಡಿತ್ತು. ಹೀಗಾಗಿ, ಅರ್ಜಿದಾರರು ಹೈಕೋರ್ಟ್‌ ಕದತಟ್ಟಿದ್ದರು.
Karnataka HC, B S Yediyurappa, Minister S T Somashekhar and B Y Vijayendra
Karnataka HC, B S Yediyurappa, Minister S T Somashekhar and B Y Vijayendra

ಮುಖ್ಯಮಂತ್ರಿಯಾಗಿದ್ದ ವೇಳೆ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್‌ ಕಂಪೆನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್‌ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ. ಹೀಗಾಗಿ, ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಕ್ರಿಮಿನಲ್‌ ಮನವಿಗೆ ಸಂಬಂಧಿಸಿದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಕಾಯ್ದಿರಿಸಿದೆ.

ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ವಿಸ್ತೃತವಾಗಿ ನಡೆಸಿರುವ ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಕಾಯ್ದಿರಿಸಿದೆ.

ಕಾನೂನಿನ ವಿಚಾರ ಮತ್ತು ಅವುಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಅಮಿಕಸ್‌ ಕ್ಯೂರಿ ವೆಂಕಟೇಶ್‌ ಅರಬಟ್ಟಿ ಮತ್ತು ವಕೀಲ ನಾಗೇಂದ್ರ ನಾಯ್ಕ್‌ ಅವರು ವಾದ ಮಂಡಿಸಿದ್ದಾರೆ. ವೆಂಕಟೇಶ್‌ ಅವರು ಸಲ್ಲಿಸಿರುವ ಲಿಖಿತ ವಾದವನ್ನು ಸ್ವೀಕರಿಸಲಾಗಿದೆ. ಒಂದು ವಾರದಲ್ಲಿ ಉಭಯ ಪಕ್ಷಕಾರರು ಲಿಖಿತ ಹೇಳಿಕೆ ಸಲ್ಲಿಸಬಹುದಾಗಿದೆ. ಆದೇಶ ಕಾಯ್ದಿರಿಸಲಾಗಿದೆ ಎಂದು ನ್ಯಾಯಾಲಯವು ಜೂನ್‌ 21ರ ಆದೇಶದಲ್ಲಿ ಹೇಳಿದೆ. ಯಡಿಯೂರಪ್ಪ ಮತ್ತು ಕುಟುಂಬದ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ವಾದ ಮಂಡಿಸಿದ್ದರು.

ಬಿ ಎಸ್‌ ಯಡಿಯೂರಪ್ಪ, ಪುತ್ರ ಬಿ ವೈ ವಿಜಯೇಂದ್ರ, ಶಶಿಧರ ಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್‌ ಶ್ರೀ, ಚಂದ್ರಕಾಂತ್‌ ರಾಮಲಿಂಗಂ, ಅಂದಿನ ಬಿಡಿಎ ಅಧ್ಯಕ್ಷ ಹಾಗೂ ಹಾಲಿ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌, ಐಎಎಸ್‌ ಅಧಿಕಾರಿ ಡಾ. ಜಿ ಸಿ ಪ್ರಕಾಶ್‌, ಕೆ ರವಿ, ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ‌ ಯಮಕನಮರಡಿ ಅವರು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದಾರೆ.

Also Read
ಭ್ರಷ್ಟಾಚಾರ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಯಡಿಯೂರಪ್ಪ ಮತ್ತು ಸಂಬಂಧಿಕರಿಗೆ 2 ವಾರಗಳ ಕಾಲಾವಕಾಶ ನೀಡಿದ ಹೈಕೋರ್ಟ್

ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 7, 8, 9, 10 ಮತ್ತು 13, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 383, 384, 415, 418, 420, 34 ಮತ್ತು 120ಬಿ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿ ಅಪರಾಧಗಳನ್ನು ಉಲ್ಲೇಖಿಸಿ ಅರ್ಜಿದಾರರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ 2020ರ ನವೆಂಬರ್‌ 11ರಂದು ದೂರು ಸಲ್ಲಿಸಿದ್ದರು. ಎಫ್‌ಐಆರ್‌ ದಾಖಲಿಸುವ ಬದಲಿಗೆ ನವೆಂಬರ್‌ 21ರಂದು ಎಸಿಬಿ ಅಧಿಕಾರಿಗಳು ದೂರಿನಲ್ಲಿನ ವಿಚಾರಗಳಿಗೆ ಸ್ಪಷ್ಟನೆ ಕೇಳಿ ದೂರುದಾರರಿಗೆ ನೋಟಿಸ್‌ ಜಾರಿ ಮಾಡಿದ್ದರು.

ಈ ಮಧ್ಯೆ, ಯಡಿಯೂರಪ್ಪ ಮತ್ತು ಸೋಮಶೇಖರ್‌ ವಿರುದ್ಧದ ತನಿಖೆ ಅನುಮತಿ ಕೋರಿ ಅಬ್ರಹಾಂ ಅವರು ರಾಜ್ಯಪಾಲರು ಮತ್ತು ವಿಧಾನಸಭೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದರು. 2021ರ ಜೂನ್‌ 24ರಂದು ರಾಜ್ಯಪಾಲರು ಅನುಮತಿ ನಿರಾಕರಿಸಿದ್ದರು. ಇದನ್ನು ಆಧರಿಸಿ, 2021ರ ಜುಲೈ 8ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರನ್ನು ವಜಾ ಮಾಡಿತ್ತು. ಹೀಗಾಗಿ, ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com