ಪರಿಶಿಷ್ಟ ಜಾತಿಗಳಲ್ಲಿ ಉತ್ತಮ ಸ್ಥಾನದಲ್ಲಿರುವವರು ಮೀಸಲಾತಿ ಸೌಲಭ್ಯ ಪಡೆಯದಂತೆ ಕೆನೆಪದರ ತತ್ವ ಅನ್ವಯಿಸುವ ಬಗ್ಗೆ ತಾವು ಆಗಸ್ಟ್ 2024ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ನ್ಯಾಯಾಂಗ ತೀರ್ಪುಗಳು ಮರುಪರಿಶೀಲನೆಗೆ ಮುಕ್ತವಾಗಿರಬೇಕು ಎಂದು ಅವರು ಹೇಳಿದರು. ಗೋವಾ ಹೈಕೋರ್ಟ್ ವಕೀಲರ ಸಂಘ ಶುಕ್ರವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತೀರ್ಪನ್ನು ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಗೋವಾ ವಿಧಾನಸಭೆ ಸದಸ್ಯರಾಗಿದ್ದ ನ್ಯಾಯಮೂರ್ತಿ ನೆಲ್ಸನ್ ಜೆ ರೆಬೆಲ್ಲೊ ಟೀಕಿಸಿದ್ದರು. ಆದರೆ, ನನ್ನ ಕಾರಣಕ್ಕಿದ್ದ ಪ್ರಮುಖ ಸಮರ್ಥನೆಯೆಂದರೆ ಮೀಸಲಾತಿ ಪಡೆದ ಮೊದಲ ತಲೆಮಾರಿನ ವ್ಯಕ್ತಿ ಐಎಎಸ್ ಅಧಿಕಾರಿಯಾದಂತೆಯೇ ಅವನ ಎರಡು ಹಾಗೂ ಮೂರನೇ ತಲೆಮಾರಿನ ವ್ಯಕ್ತಿಗಳು ಮೀಸಲಾತಿಯಡಿ ಐಎಎಸ್ ಅಧಿಕಾರಿಗಳಾಗುತ್ತಾರೆ. ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಸಮಾನತೆಯ ತತ್ವವು ನಿಜವಾದ ಸಾಮಾಜಿಕ ವ್ಯತ್ಯಾಸಗಳನ್ನು ಗುರುತಿಸಬೇಕಿದೆ ಎಂದರು.
ದೆಹಲಿ ಅಥವಾ ಮುಂಬೈನ ಅತ್ಯುತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಪರಿಶಿಷ್ಟ ಜಾತಿಯ ಮಕ್ಕಳು ಮತ್ತು ಹಳ್ಳಿಗಳ ಪರಿಶಿಷ್ಟ ಜಾತಿಯ ಮಕ್ಕಳ ಸಮಾನತೆಯಲ್ಲಿ ವ್ಯತ್ಯಾಸವಿದೆ ಅದೃಶ್ಟವಶಾತ್ ನನ್ನ ತೀರ್ಪನ್ನು ಪೀಠದ ಮೂವರು ನ್ಯಾಯಮೂರ್ತಿಗಳೂ ಬೆಂಬಲಿಸಿದರು ಎಂದರು.
ಅಸಮಾನರನ್ನು ಅಸಮಾನವಾಗಿ ನಡೆಸಿಕೊಳ್ಳುವುದರಿಂದ ಅವರು ಸಮಾನರಾಗುತ್ತಾರೆ ಎಂದೇ ಹೇಳಿಕೊಂಡು ಬರಲಾಗುತ್ತಿದೆ.ಸಿಜೆಐ ಬಿ.ಆರ್. ಗವಾಯಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರಕ್ಕೆ ಸೇರಿದವರನ್ನು ಗುರುತಿಸಿ ಅವರನ್ನು ಮೀಸಲಾತಿ ಸವಲತ್ತಿನಿಂದ ಹೊರಗಿಡುವಂತೆ ಆಗಸ್ಟ್ 1, 2024ರಲ್ಲಿ ಸಿಜೆಐ ಗವಾಯಿ ಅವರಿದ್ದ ಏಳು ನ್ಯಾಯಮೂರ್ತಿಗಳ ಪೀಠ ಕರೆ ನೀಡಿತ್ತು. ಪ್ರಸ್ತುತ ಕೆನೆಪದರದ ತತ್ವ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಾತ್ರ ಅನ್ವಯಿಸುತ್ತಿದೆಯೇ ವಿನಾ ಎಸ್‌ಸಿ/ಎಸ್‌ಟಿಗಳಿಗೆ ಅಲ್ಲ.
ಸಹಮತದ ತೀರ್ಪು ಬರೆದಿದ್ದ ನ್ಯಾ. ಬಿ ಆರ್ ಗವಾಯಿ ಅವರು ಮೀಸಲಾತಿಯ ಅಂತಿಮ ಗುರಿ ದೇಶದಲ್ಲಿ ನೈಜ ಸಮಾನತೆ ಸಾಧಿಸುವುದಾಗಿದ್ದು ಎಸ್‌ಸಿ ಎಸ್‌ಟಿ ಸಮುದಾಯದ ಕೆನೆಪದರ ವರ್ಗವನ್ನು ಗುರುತಿಸಿ ಅವರನ್ನು ಮೀಸಲಾತಿ ಸವಲತ್ತುಗಳಿಂದ ಹೊರಗಿಡಬೇಕು ಎಂದಿದ್ದರು.
ಶುಕ್ರವಾರ ಮಾಡಿದ ಭಾಷಣದಲ್ಲಿ ಸಿಜೆಐ ಗವಾಯಿ ಅವರು ನ್ಯಾಯಾಂಗ ತೀರ್ಪುಗಳು ಮರುಪರಿಶೀಲನೆಗೆ ಮುಕ್ತವಾಗಿರಬೇಕು ಎಂದು ಒತ್ತಿಹೇಳಿದರು.
ತೀರ್ಪುಗಳು ವಿರೋಧಾಭಾಸದಿಂದ ಕೂಡಿರುವುದನ್ನು ನೋಡಿದ್ದೇನೆ. ನ್ಯಾಯಾಧೀಶರು ಕೂಡ ಮನುಷ್ಯರು. ಅವರೂ ತಪ್ಪು ಮಾಡಬಹುದು ಎಂದು ನನ್ನ ಭಾವನೆ ಎಂದರು. ಅಲ್ಲದೆ ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ಗಿಂತ ಯಾವುದೇ ರೀತಿಯಲ್ಲಿ ಕೆಳಮಟ್ಟದಲ್ಲಿಲ್ಲ ಮತ್ತು ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ಸ್ವತಂತ್ರವಾಗಿರುತ್ತವೆ ಎಂದು ಅವರು ಹೇಳಿದರು.