ಶಿಕ್ಷಕಿ ಹುದ್ದೆಯ ಆಕಾಂಕ್ಷಿ ನಿರ್ದಿಷ್ಟ ಕಾಲಮಿತಿಯಲ್ಲಿ ಸೂಕ್ತ ಕೆನೆ ಪದರ (ಕ್ರೀಮಿ ಲೇಯರ್) ಸರ್ಟಿಫಿಕೇಟ್ ಅನ್ನು ಸಲ್ಲಿಸದಿದ್ದರೂ ಆಕೆಯ ಅರ್ಜಿಯನ್ನು ಪರಿಗಣಿಸುವಂತೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಗೆ ನಿರ್ದೇಶಿಸಿದ್ದ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಸ್‌ಎಟಿ) ಆದೇಶವನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ವಜಾ ಮಾಡಿದೆ (ನೇಮಕಾತಿ ಪ್ರಾಧಿಕಾರ ಮತ್ತು ಕಾರ್ಯದರ್ಶಿ ವರ್ಸಸ್ ಗೀತಾ ದತ್ತಾತ್ರೇಯ ಗೋಕರ್ಣ್).
ಕೆಎಸ್‌ಎಟಿ ಆದೇಶ ಪ್ರಶ್ನಿಸಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ವಿಭಾಗೀಯ ಪೀಠವು ಮಾನ್ಯ ಮಾಡಿದ್ದು, ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ ಎರಡೂ ಬೇರೆ ಬೇರೆಯಾಗಿವೆ. ಅವರಡನ್ನೂ ಒಂದೇ ಎಂದು ಪರಿಗಣಿಸಲಾಗದು ಎಂದು ಪುನರುಚ್ಚರಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಗ್ರಾಮೀಣ ಪ್ರದೇಶ ಸೇರಿದಂತೆ ವಿವಿಧ ವಿಭಾಗದಲ್ಲಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಸಕ್ಷಮ ಕಂದಾಯ ಪ್ರಾಧಿಕಾರ ನೀಡುವ ಸೂಕ್ತವಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಗ್ರಾಮೀಣ ಪ್ರದೇಶದಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಕೆನೆ ಪದರ ಸರ್ಟಿಫಿಕೇಟ್ ಹೊಂದಿರಬೇಕು. ಪರಿಶೀಲನೆಯ ಸಂದರ್ಭದಲ್ಲಿ ಅಥವಾ ನೇಮಕಾತಿ ಪ್ರಾಧಿಕಾರ ಕೇಳುವ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ತೋರಿಸಬೇಕು ಎಂದು ಅರ್ಜಿ ಆಹ್ವಾನಿಸುವ ಸಂದರ್ಭದಲ್ಲೇ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಪೀಠವು ಹೇಳಿದೆ.
ಜಾತಿ ಪ್ರಮಾಣ ಪತ್ರವು ರದ್ದಾಗುವವರೆಗೂ ಇರುತ್ತದೆ. ಆದರೆ, ಆದಾಯ ಪ್ರಮಾಣ ಪತ್ರವು ಐದು ವರ್ಷಗಳಿಗೆ ಸೀಮಿತವಾಗಿರುತ್ತದೆ. ಸದರಿ ಪ್ರಕರಣದಲ್ಲಿ ಅಭ್ಯರ್ಥಿ ಸಲ್ಲಿಸಿರುವ ಕೆನೆ ಪದರ ಸರ್ಟಿಫಿಕೇಟ್, ಐದು ವರ್ಷಗಳಿಗೂ ಹಳೆಯದಾಗಿದೆ. 1992ರ ನಿಯಮಗಳ ಅನ್ವಯ ಅಲ್ಲಿ ಸೂಚಿಸಲಾಗಿರುವ ಸಮಯದ ಅನ್ವಯ ಅದು ಅಸಿಂಧುವಾಗಿದೆ. ಹೀಗಾಗಿ, ಅದನ್ನು ಪರಿಗಣಿಸಲಾಗದು ಎಂದಿರುವ ಪೀಠವು “ನ್ಯಾಯಾಧಿಕರಣದ ನಿರ್ಧಾರವು ದೋಷಪೂರಿತವಾಗಿದೆ. ಆಕ್ಷೇಪಾರ್ಹ ಆದೇಶ ವಜಾಕ್ಕೆ ಅರ್ಹವಾಗಿದೆ” ಎಂದಿದೆ.
"ವೃತ್ತಿ/ಪ್ರವೃತ್ತಿ ಅಥವಾ ಉದ್ಯೋಗದ ಆಧಾರದ ಮೇಲೆ ಆದಾಯವು ಹೆಚ್ಚಬಹುದು ಅಥವಾ ಕಡಿಮೆಯಾಗಬಹುದು. ಸರ್ಕಾರಿ ನೌಕರರು/ಉದ್ಯೋಗಿಗಳು ಅಥವಾ ವೇತನ ವರ್ಗವು ವರ್ಷದಿಂದ ವರ್ಷಕ್ಕೆ ತಮ್ಮ ಆದಾಯದಲ್ಲಿ ಏರಿಕೆಯನ್ನು ಕಾಣುತ್ತದೆ. ಆದರೆ, ವ್ಯವಹಾರಸ್ಥರು, ಕುಶಲ ಕೆಲಸಗಾರರ ಆದಾಯವು ವರ್ಷದಿಂದ ವರ್ಷಕ್ಕೆ ಹೆಚ್ಚಬಹುದು ಅಥವಾ ಕುಗ್ಗಬಹುದು," ಎಂದು ಹೇಳುವ ಮೂಲಕ ನ್ಯಾಯಾಲಯವು ಆದಾಯ ಪ್ರಮಾಣ ಪತ್ರದ ಅವಧಿಯನ್ನು ಐದು ವರ್ಷಕ್ಕೆ ಸಿಮಿತಗೊಳಿಸಿರುವುದರ ಹಿಂದಿನ ಕಾರಣವನ್ನು ವಿವರಿಸಿತು.
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಎರಡನೇ ಶ್ರೇಣಿಯ ಸಹಾಯಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಮಹಿಳೆ, ಗ್ರಾಮೀಣ ಪ್ರದೇಶ ಮತ್ತು ಕನ್ನಡ ಮಾಧ್ಯಮ ವಿಭಾಗದ ಮೀಸಲಾತಿ ಕೋರಿ ಗೀತಾ ಅರ್ಜಿ ಹಾಕಿದ್ದರು. ಹೆಚ್ಚುವರಿ ಪಟ್ಟಿಯಲ್ಲಿ ಗೀತಾ ಹುದ್ದೆಗೆ ಆಯ್ಕೆಯಾಗಿದ್ದರು. ಹೀಗಾಗಿ, ನಿರ್ದಿಷ್ಟ ದಿನಾಂಕದಂದು ಪಡೆದಿರುವ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲನೆಗೆ ತರುವಂತೆ ನೇಮಕಾತಿ ಪ್ರಾಧಿಕಾರವು ನಿರ್ದೇಶಿಸಿತ್ತು. ಅದರಂತೆ ಗೀತಾ ಅವರು ಕೆನೆ ಪದರ ಸರ್ಟಿಫಿಕೇಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದರು.
ಈಗಾಗಲೇ ಸೂಚಿಸಿರುವಂತೆ ಸೂಕ್ತವಾದ ಐದು ವರ್ಷದ ಒಳಗಿನ ಕೆನೆ ಪದರ ಸರ್ಟಿಫಿಕೇಟ್ ಸಲ್ಲಿಸಿಲ್ಲ ಎಂದು ನೇಮಕಾತಿ ಪ್ರಾಧಿಕಾರವು ಆಕೆ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಗೀತಾ ಅವರು ಕೆಎಸ್‌ಎಟಿಯಲ್ಲಿ ಪ್ರಶ್ನಿಸಿದ್ದರು. ಕೆಎಸ್‌ಎಟಿಯು ಗೀತಾ ಅವರ ಅರ್ಜಿಯನ್ನು ಪರಿಗಣಿಸುವಂತೆ ನಿರ್ದೇಶಿಸಿತ್ತು. ಇದನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಈಗ ಹೈಕೋರ್ಟ್ ಕೆಎಸ್‌ಎಟಿ ಆದೇಶವನ್ನು ವಜಾ ಮಾಡಿದೆ.