ನವೆಂಬರ್ 23 ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದು, ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ಸಿಜೆಐ ಹುದ್ದೆಗೆ ಶಿಫಾರಸು ಮಾಡಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಮೇ 24, 2019 ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಗಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಅವರ ಅಧಿಕಾರಾವಧಿ ಫೆಬ್ರವರಿ 9, 2027ರವರೆಗೆ ಇರುತ್ತದೆ. ಅವರು 14 ತಿಂಗಳುಗಳಿಗೂ ಹೆಚ್ಚು ಕಾಲ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ನ್ಯಾಯಮೂರ್ತಿ ಕಾಂತ್ ಅವರು ಫೆಬ್ರವರಿ 10, 1962 ರಂದು ಹರಿಯಾಣದ ಹಿಸಾರ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು 1981ರಲ್ಲಿ ಹಿಸಾರ್ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಪಡೆದರು. 1984ರಲ್ಲಿ ರೋಹ್ಟಕ್‌ನಲ್ಲಿರುವ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು.
ನ್ಯಾಯಮೂರ್ತಿ ಕಾಂತ್ 1984ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. 1985ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ವಕೀಲಿಕೆ ಮುಂದುವರೆಸಿದರು.
ಮಾರ್ಚ್ 2001ರಲ್ಲಿ ಅವರನ್ನು ಹಿರಿಯ ವಕೀಲರನ್ನಾಗಿ ನಾಮಾಂಕಿತಗೊಳಿಸಲಾಯಿತು. ಜನವರಿ 9, 2004ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಖಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಪಡೆಯುವವರೆಗೂ ಅವರು ಹರಿಯಾಣದ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿದ್ದರು.
ನ್ಯಾ. ಸೂರ್ಯಕಾಂತ್ ಅವರನ್ನು ಅಕ್ಟೋಬರ್ 5, 2018ರಿಂದ ಜಾರಿಗೆ ಬರುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಯಿತು. 2019ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅವರು ಪದೋನ್ನತಿಗೊಂಡರು.