ಡಾ. ಅಂಬೇಡ್ಕರ್ ಪೂರ್ವಜರ ಊರಿಗೆ ನ್ಯಾಯಾಲಯ: ಕನಸು ನನಸಾಯಿತು ಎಂದು ಸಿಜೆಐ ಗವಾಯಿ ಹರ್ಷ

ಅಂಬೇಡ್ಕರ್ ಅವರ ಸಾಂವಿಧಾನಿಕ ದೃಷ್ಟಿಕೋನವನ್ನು ಎತ್ತಿಹಿಡಿಯಲು ನ್ಯಾಯ ವಿಕೇಂದ್ರೀಕರಣವಾಗುವುದು ಮತ್ತು ಬಲವಾದ ತಳಮಟ್ಟದ ಮೂಲಸೌಕರ್ಯ ದೊರೆಯುವುದು ಅತ್ಯಗತ್ಯ ಎಂದು ಸಿಜೆಐ ಹೇಳಿದರು.
Inauguration Ceremony
Inauguration Ceremony
Published on

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಂದನ್‌ಗಡ್‌ನಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಹೊಸ ನ್ಯಾಯಾಲಯದ ಕಟ್ಟಡ ಉದ್ಘಾಟಿಸಿದ್ದು ಇದು ರಾಜ್ಯದ ಕೊಂಕಣ ಪ್ರದೇಶದಲ್ಲಿ ನ್ಯಾಯದಾನ ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಪೂರ್ವಜರ ಗ್ರಾಮ ಅಂಬಾಡ್ವೆ (ಅಂಬೇಡ್ಕರ್‌ ಅವರಿಗೆ ಆ ಹೆಸರು ಬರಲು ಈ ಊರು ಕಾರಣ) ಮಂದನ್‌ಗಡ ತಾಲೂಕಿನಲ್ಲಿಯೇ ಇರುವುದರಿಂದ ನ್ಯಾಯಾಲಯ ಉದ್ಘಾಟನೆ ಮಹತ್ವ ಪಡೆದುಕೊಂಡಿತ್ತು. ಹೊಸ ನ್ಯಾಯಾಲಯ ಕಟ್ಟಡದ ಜೊತೆಗೆ ಡಾ.ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಅವರ ಜೀವನದ ಪ್ರಮುಖ ಘಟನೆಗಳನ್ನು ಸಾರುವ ಭಿತ್ತಿಚಿತ್ರಗಳನ್ನು ಇದೇ ವೇಳೆ ನ್ಯಾ. ಗವಾಯಿ ಅವರು ಅನಾವರಣಗೊಳಿಸಿದರು.

Also Read
ಲಂಡನ್‌ನಲ್ಲಿ ಅಂಬೇಡ್ಕರ್ ಕಾನೂನು ಶಿಕ್ಷಣ ಪಡೆದ ಸ್ಥಳಕ್ಕೆ ಸಿಜೆಐ ಗವಾಯಿ ಭೇಟಿ

ಅಂಬೇಡ್ಕರ್ ಅವರ ಸಾಂವಿಧಾನಿಕ ದೃಷ್ಟಿಕೋನವನ್ನು ಎತ್ತಿಹಿಡಿಯಲು ನ್ಯಾಯ ವಿಕೇಂದ್ರೀಕರಣವಾಗುವುದು ಮತ್ತು ಬಲವಾದ ತಳಮಟ್ಟದ ಮೂಲಸೌಕರ್ಯ ದೊರೆಯುವುದು ಅತ್ಯಗತ್ಯ ಎಂದು ಸಿಜೆಐ ಇದೇ ವೇಳೆ ಹೇಳಿದರು.

“ದೇಶವು ಯುದ್ಧದ ವೇಳೆಯೂ ಶಾಂತಿ ಸಮಯದಲ್ಲಿಯೂ  ಏಕತೆಯಿಂದ ಇದ್ದು, ಅಭಿವೃದ್ಧಿಯ ಮಾರ್ಗದಲ್ಲಿ ಮುಂದುವರಿದಿದೆ. ನಾವು ಆಂತರಿಕ ತುರ್ತು ಸ್ಥಿತಿಯನ್ನೂ ಕಂಡಿದ್ದರೂ  ಬಲಿಷ್ಠವಾಗಿಯೇ, ಏಕತೆಯಿಂದ ಮುಂದುವರಿದಿದ್ದೇವೆ. ಇದಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ತಮ್ಮ ನ್ಯಾಯಾಂಗ ವೃತ್ತಿಜೀವನವನ್ನು ನೆನಪಿಸಿಕೊಳ್ಳುತ್ತಾ, ನ್ಯಾಯದ ವಿಕೇಂದ್ರೀಕರಣ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದರ ಮೇಲೆ ತಮ್ಮ ಗಮನ ಸದಾ ಇತ್ತು ಎಂದು ಅವರು ಹೇಳಿದರು.

"ನ್ಯಾಯಾಧೀಶನಾಗಿ ಕಳೆದ 22 ವರ್ಷಗಳಲ್ಲಿ, ನಾನು ನ್ಯಾಯದ ವಿಕೇಂದ್ರೀಕರಣಕ್ಕಾಗಿ ಹೋರಾಡಿದ್ದೇನೆ ಮತ್ತು ಹಲವಾರು ನ್ಯಾಯಾಂಗ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವಂತೆ ನೋಡಿಕೊಂಡಿದ್ದೇನೆ. ಬಾಂಬೆ ಹೈಕೋರ್ಟ್‌ನ ಕೊಲ್ಹಾಪುರ ಸರ್ಕ್ಯೂಟ್ ಪೀಠ ಮತ್ತು ಎರಡು ವರ್ಷಗಳಲ್ಲಿ ಪೂರ್ಣಗೊಂಡಿರುವ  ಮಂದನ್‌ಗಡ ನ್ಯಾಯಾಲಯದ ಕಟ್ಟಡ  ನನಗೆ ಅಪಾರ ತೃಪ್ತಿ ತಂದಿದೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದರು.

Also Read
ಇಂದು ನಾವು ಏನಾಗಿದ್ದೇವೋ ಅದಕ್ಕೆ ಅಂಬೇಡ್ಕರ್‌ ಅವರ ದೂರದೃಷ್ಟಿ ಕಾರಣ: ಸಂವಿಧಾನ ಶಿಲ್ಪಿಗೆ ಸಿಜೆಐ ನಮನ

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್, ನ್ಯಾಯಮೂರ್ತಿಗಳಾದ ಮಕರಂದ್ ಕಾರ್ಣಿಕ್ ಹಾಗೂ ಮಾಧವ್ ಜಾಮ್ದಾರ್, ಜಿಲ್ಲಾ ಉಸ್ತುವಾರಿ ಸಚಿವ ಉದಯ್ ಸಮಂತ್ ಜೊತೆಗೆ ನ್ಯಾಯಾಂಗದ ವಿವಿಧ ಹಿರಿಯ ಸದಸ್ಯರು ಭಾಗವಹಿಸಿದ್ದರು.

ಉದ್ಘಾಟನೆಯಾದ ಕಟ್ಟಡ ಆಧುನಿಕ ತಂತ್ರಜ್ಞಾನ ಸೌಲಭ್ಯ, ಡಿಜಿಟಲ್ ವ್ಯವಸ್ಥೆ, ಮತ್ತು ಹೆಚ್ಚು ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

Kannada Bar & Bench
kannada.barandbench.com