CJI DY Chandrachud 
ಸುದ್ದಿಗಳು

ಜಿಲ್ಲಾ ನ್ಯಾಯಾಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ನ್ಯಾಯಾಧೀಶರ ನೇಮಕಾತಿ ನಡೆಯಲಿ: ಸಿಜೆಐ ಡಿ ವೈ ಚಂದ್ರಚೂಡ್

ಸುಪ್ರೀಂ ಕೋರ್ಟ್ 75ನೇ ವರ್ಷಾಚರಣೆ ಅಂಗವಾಗಿ ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನದ ಕಡೆಯ ದಿನವಾದ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

Bar & Bench

ಜಿಲ್ಲಾ ನ್ಯಾಯಾಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ನ್ಯಾಯಾಧೀಶರ ನೇಮಕಾತಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ 75ನೇ ವರ್ಷಾಚರಣೆ ಅಂಗವಾಗಿ  ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನದ ಕಡೆಯ ದಿನವಾದ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಪ್ರಾದೇಶಿಕ, ರಾಜ್ಯ ಕೇಂದ್ರಿತ ಆಯ್ಕೆಯಂತಹ ಸ್ಥಳೀಯ ಎಲ್ಲೆಗಳನ್ನು ಮೀರಿ ಒಟ್ಟಾರೆ ರಾಷ್ಟ್ರಮಟ್ಟದಲ್ಲಿ ನ್ಯಾಯಾಂಗ ಸೇವೆಗಳಿಗೆ ನೇಮಕ ಮಾಡುವ ಕುರಿತು ಯೋಚಿಸುವ ಸಮಯ ಈಗ ಬಂದಿದೆ ಎಂದು ನ್ಯಾ. ಚಂದ್ರಚೂಡ್‌ ಹೇಳಿದರು.

ಅಖಿಲ ಭಾರತ ನ್ಯಾಯಾಂಗ ಸೇವೆ ಅಥವಾ ಎಐಜೆಎಸ್‌ ಕುರಿತಾದ ಪರಿಕಲ್ಪನೆ ಹಲವು ವರ್ಷಗಳಿಂದ ಹರಿದಾಡುತ್ತಿದ್ದರೂ ಭಾಗೀದಾರರ ಭಿನ್ನಾಭಿಪ್ರಾಯದಿಂದಾಗಿ ಯಾವುದೇ ಮಹತ್ವದ ಬೆಳವಣಿಗೆಗಳು ಇಲ್ಲಿಯವರೆಗೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಸಿಜೆಐ ಅವರ ಮಾತು ಮಹತ್ವ ಪಡೆದುಕೊಂಡಿದೆ.

“ಜಿಲ್ಲಾ ಮಟ್ಟದಲ್ಲಿ ನ್ಯಾಯಾಂಗ ಸಿಬ್ಬಂದಿ ಹುದ್ದೆಗಳು ಶೇ 28ರಷ್ಟು ಖಾಲಿ ಇದ್ದು ಶೇ 27ರಷ್ಟು ನ್ಯಾಯಾಂಗೇತರ ಸಿಬ್ಬಂದಿ ನೇಮಕವಾಗಿಲ್ಲ. ಪ್ರಕರಣಗಳ ಸೂಕ್ತ ವಿಲೇವಾರಿಗಾಗಿ ನ್ಯಾಯಾಲಯಗಳು 71% ರಿಂದ 100% ಭರ್ತಿಯಾಗಿ ಕೆಲಸ ನಿರ್ವಹಿಸಬೇಕಿದೆ” ಎಂದು ಅವರು ಹೇಳಿದರು.

ಜಿಲ್ಲಾಮಟ್ಟದ ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯಗಳು ಮಹಿಳೆಯರ ಪರವಾಗಿ ಇಲ್ಲ. ಕೇವಲ ಶೇ 6.7ರಷ್ಟು ಮಾತ್ರ ಮಹಿಳಾ ಸ್ನೇಹಿ ಮೂಲ ಸೌಕರ್ಯ ಇದೆ. ನ್ಯಾಯಾಂಗಕ್ಕೆ ಶೇಕಡಾ 60 ರಿಂದ 70ರಷ್ಟು ಮಹಿಳೆಯರೇ ನೇಮಕಗೊಳ್ಳುತ್ತಿರುವ ದೇಶದಲ್ಲಿ ಇದನ್ನು ಒಪ್ಪಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಹಿಂದಿಯಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ಮುರ್ಮು ಯಾವುದೇ ಅಪರಾಧಕ್ಕೆ ಬಲಿಯಾಗುವ ಮಹಿಳೆಯರು ಮತ್ತು ಮಕ್ಕಳ ದುಃಸ್ಥಿತಿಯನ್ನು ಎತ್ತಿ ತೋರಿಸಿದರು. ಅಪರಾಧಕ್ಕೆ ಬಲಿಯಾಗುವ ಮಹಿಳೆಯರು ಮತ್ತು ಮಕ್ಕಳ ಏಳಿಗೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಹಳ್ಳಿ ಜನ ನ್ಯಾಯಾಲಯಕ್ಕೆ ಹೋಗಲು ಹಿಂಜರಿಯುವುದನ್ನು ನಾನು ನೋಡಿದ್ದೇನೆ. ನ್ಯಾಯಕ್ಕಾಗಿ ಹೋರಾಡುವುದು ತಮ್ಮ ಜೀವನವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದು ಭಾವಿಸಿ ಅವರು ಅನ್ಯಾಯವನ್ನು ಶಾಂತವಾಗಿ ಸಹಿಸಿಕೊಳ್ಳುತ್ತಾರೆ. ನ್ಯಾಯಾಲಯಕ್ಕೆ ಹೋಗುವುದು ಅವರಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ. ನ್ಯಾಯ ವ್ಯವಸ್ಥೆ ಬಗೆಗಿನ ಜನರ ಹಿಂಜರಿಕೆಯನ್ನು ಬಹುಶಃ ಕಪ್ಪು ಕೋಟ್ ಸಿಂಡ್ರೋಮ್ ಎಂಬುದಾಗಿ ಕರೆಯಬಹುದು ಎಂದರು. 

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್ 479 ಅನ್ನು ಪೂರ್ವಾನ್ವಯವಾಗುವಂತೆ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು.

ಮೊದಲ ಬಾರಿಗೆ ಅಪರಾಧ ಎಸಗಿದವರಲ್ಲಿ ಗರಿಷ್ಠ ಅವಧಿಯ ಮೂರನೇ ಒಂದು ಭಾಗದಷ್ಟು ಜೈಲು ಶಿಕ್ಷೆ ಅನುಭವಿಸಿದವರಿಗೆ ಜಾಮೀನು ನೀಡಲು ನ್ಯಾಯಾಲಯಗಳಿಗೆ ಸೆಕ್ಷನ್ 479  ಅವಕಾಶ ನೀಡುತ್ತದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.