Kunal Kamra 
ಸುದ್ದಿಗಳು

ಕುನಾಲ್ ಕಮ್ರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಡಿ ವೈ ಚಂದ್ರಚೂಡ್

ಸುಪ್ರೀಂ ಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಕಮ್ರಾ ಅವರು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಾಲ್ಕು ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಬಾಕಿ ಇದೆ.

Bar & Bench

ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರ ವಿರುದ್ಧ ಹೂಡಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಗುರುವಾರ ಹಿಂದೆ ಸರಿದಿದ್ದಾರೆ.

ಸುಪ್ರೀಂ ಕೋರ್ಟ್‌ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧ ಕಮ್ರಾ ಅವರು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಾಲ್ಕು ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಬಾಕಿ ಇದೆ.

ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ಅವರಿಗೆ ಜಾಮೀನು ನೀಡಿದ ಪೀಠದ ನೇತೃತ್ವವಹಿಸಿದ್ದರು ನ್ಯಾ. ಚಂದ್ರಚೂಡ್‌. ಈ ಜಾಮೀನು ತೀರ್ಪನ್ನು ಕುನಾಲ್‌ ಕಮ್ರಾ ಟ್ವೀಟ್‌ ಮೂಲಕ ಟೀಕಿಸಿದ್ದರು. ಹಾಗಾಗಿ ನ್ಯಾ. ಚಂದ್ರಚೂಡ್‌ ವಿಚಾರಣೆಯಿಂದ ಹೊರಗುಳಿದಿದ್ದಾರೆ.

ಅರ್ನಾಬ್‌ ಅವರಿಗೆ ಕೇವಲ ಒಂದೇ ವಾರದಲ್ಲಿ ಜಾಮೀನು ನೀಡಿದ್ದೇಕೆ? ದೇಶದಲ್ಲಿ ನೂರಾರು ಹೋರಾಟಗಾರರು ಹಲವು ವರ್ಷಗಳಿಂದ ರಾಜಕೀಯ ಖೈದಿಗಳಾಗಿದ್ದರೂ ಅವರಿಗೇಕೆ ಇನ್ನೂ ಜಾಮೀನು ನೀಡಿಲ್ಲ ಎಂಬರ್ಥದ ಎರಡು ಟ್ವೀಟ್‌ಗಳನ್ನು ಕುನಾಲ್‌ ಮಾಡಿದ್ದರು.

ಈ ಸಂಬಂಧ ಕುನಾಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡುವಂತೆ ಹಲವು ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ಅಂದಿನ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರನ್ನು ಕೋರಿದ್ದರು, ವಿವಿಧ ಸಂದರ್ಭಗಳಲ್ಲಿ ಕುನಾಲ್‌ ಸುಪ್ರೀಂ ಕೋರ್ಟ್‌ ವಿರುದ್ಧ ಮಾಡಿದ ಟೀಕೆಗಳನ್ನಾಧರಿಸಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ್ದ ಒಟ್ಟು 10 ಪತ್ರಗಳನ್ನು ವೇಣುಗೋಪಾಲ್‌ ಸ್ವೀಕರಿಸಿದ್ದರು. ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ವೇಣುಗೋಪಾಲ್‌ ಅವರು ನವೆಂಬರ್ 12, 2020ರಂದು ಅನುಮತಿ ನೀಡಿದ್ದರು.

ನ್ಯಾಯಾಂಗ ನಿಂದನೆ ಕಾಯಿದೆ- 1971ರ ಪ್ರಕಾರ, ಖಾಸಗಿ ವ್ಯಕ್ತಿಯೊಬ್ಬರು ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆ  ಪಡೆದ ನಂತರವಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಬಹುದು. ಹೈಕೋರ್ಟ್‌ನಲ್ಲಿ ನಿಂದನೆ ಅರ್ಜಿ ಸಲ್ಲಿಸುವಾಗ ಆಯಾ ರಾಜ್ಯದ ಸಂಬಂಧಪಟ್ಟ ಅಡ್ವೊಕೇಟ್ ಜನರಲ್‌ ಅವರಿಂದ ಇದೇ ರೀತಿಯ ಒಪ್ಪಿಗೆ ಪಡೆಯಬೇಕು.

ವಿಮಾನದಲ್ಲಿ ಅರ್ನಾಬ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಹಿಡಿದು ತಾವು ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಕುನಾಲ್‌ ಅವರು ಅನೇಕ ಕಾನೂನು ತೊಡಕುಗಳನ್ನು ಎದುರಿಸುತ್ತಿದ್ದಾರೆ.

ಗಮನಾರ್ಹವಾಗಿ ಪ್ರಸ್ತುತ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ ಅವರು “ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆ ಎಂಬುದು ನ್ಯಾಯಾಲಯಗಳು ಮಾಡುವ ಕಾರ್ಯಗಳ ಮೇಲೆ ನಿಂತಿರುತ್ತದೆಯೇ ವಿನಾ ನಮ್ಮಂತಹ ಹಾಸ್ಯ ಕಲಾವಿದರು ಮಾಡುವ ಟೀಕೆ ಅಥವಾ ವಿಮರ್ಶೆಯಿಂದಲ್ಲ" ಎಂದಿದ್ದರು.