ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಬೇಲಾ ತ್ರಿವೇದಿ 
ಸುದ್ದಿಗಳು

ಸತ್ಯೇಂದರ್ ಜೈನ್ ಜಾಮೀನು ವಿಸ್ತರಣೆ: ಮಧ್ಯಪ್ರವೇಶಿಸಲು ಸಿಜೆಐ ನಕಾರ, ಪೀಠ ಬದಲಾವಣೆ ಕುರಿತು ವಿವರಣೆ

ಬೇರೆ ಪೀಠಗಳು ವಿಚಾರಣೆ ನಡೆಸುತ್ತಿದ್ದ ಕೆಲ ಪ್ರಕರಣಗಳನ್ನು ನ್ಯಾ. ಬೇಲಾ ಅವರಿರುವ ಪೀಠಕ್ಕೆ ವಹಿಸಿದ್ದ ಸಂಬಂಧ ಕೆಲ ದಿನಗಳಿಂದ ಸುಪ್ರೀಂ ಕೋರ್ಟ್‌ ವಿವಾದಕ್ಕೆ ಸಾಕ್ಷಿಯಾಗಿತ್ತು.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬೇಲಾ ಎಂ ತ್ರಿವೇದಿ ನೇತೃತ್ವದ ಪೀಠಕ್ಕೆ ವಹಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಗುರುವಾರ ನಿರಾಕರಿಸಿದ್ದಾರೆ.

ಜೈನ್ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣ ಪ್ರಸ್ತಾಪಿಸಿದರು. ನ್ಯಾ. ಎ ಎಸ್‌ ಬೋಪಣ್ಣ ಅವರು ರಜೆಯಿಂದ ಮರಳುವವರೆಗೆ ನ್ಯಾ. ತ್ರಿವೇದಿ ನೇತೃತ್ವದ ಪೀಠದೆದುರು ಪಟ್ಟಿ ಮಾಡಲಾದ ಜೈನ್‌ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಕೋರಿದರು.

"ಈ ಪ್ರಕರಣವನ್ನು ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರಿದ್ದ ಪೀಠದೆದುರು ಪಟ್ಟಿ ಮಾಡಲಾಗಿತ್ತು. ಅವರು ಅದನ್ನು 2.5 ಗಂಟೆಗಳ ಕಾಲ ಆಲಿಸಿದ್ದರು. ಈಗ ಪ್ರಕರಣವನ್ನು ನ್ಯಾ. ಬೇಲಾ ತ್ರಿವೇದಿ ಅವರ ಮುಂದೆ ಪಟ್ಟಿ ಮಾಡಲಾಗಿದೆ" ಎಂದು ಸಿಂಘ್ವಿ ಹೇಳಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್, "ನ್ಯಾಯಮೂರ್ತಿಗಳು ತಮ್ಮೆದುರು ಪಟ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ಮಾಡುತ್ತಿದ್ದಾರೆ ಎಂಬುದನ್ನು ನಾನು ನಿಯಂತ್ರಿಸುವುದಿಲ್ಲ. ಪ್ರಕರಣದ ವಿಚಾರಣೆ ನಡೆಸಲಿರುವ ನ್ಯಾಯಮೂರ್ತಿಗಳು ನಿರ್ಧರಿಸುತ್ತಾರೆ. ನನ್ನಿಂದ ಸಾಧ್ಯವಿಲ್ಲ. ನಾನು ನಿರ್ಧರಿಸಲು ಆಗದು..." ಎಂದರು.

ಪ್ರಕರಣದ ದಾಖಲೆಗಳನ್ನು ಒಮ್ಮೆ ಪರಿಶೀಲಿಸುವಂತೆ ಸಿಜೆಐ ಅವರನ್ನು ಕೋರಿದ ಸಿಂಘ್ವಿ, "ನಾವು ಪ್ರಕರಣವನ್ನು ಮುಂದೂಡಲಷ್ಟೇ ಕೇಳುತ್ತಿದ್ದೇವೆ " ಎಂದರು.

ಆದರೆ, "ನಾನು ಮಾಡುವುದಿಲ್ಲ" ಪ್ರಕರಣದ ವಿಚಾರಣೆ ನಡೆಸಬೇಕಿರುವ ನ್ಯಾಯಮೂರ್ತಿಗಳು ಮಾತ್ರ ನಿರ್ಧಾರ ತೆಗೆದುಕೊಳ್ಳಬಲ್ಲರು ಎಂದು ಸಿಜೆಐ ಪ್ರತಿಕ್ರಿಯಿಸಿದರು.   

ನ್ಯಾ. ಬೋಪಣ್ಣ ಅವರು ಕರ್ತವ್ಯಕ್ಕೆ ಹಾಜರಾಗಲಿರುವ ಜನವರಿ ತಿಂಗಳಿಗೆ ಪ್ರಕರಣ ಮುಂದೂಡುವಂತೆ ಈ ಹಿಂದಿನ ವಿಚಾರಣೆ ವೇಳೆ ನ್ಯಾ. ಬೇಲಾ ಅವರನ್ನು ಕೋರಲಾಗಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು.

ಜೈನ್ ಪ್ರಸ್ತುತ ಮಧ್ಯಂತರ ವೈದ್ಯಕೀಯ ಜಾಮೀನು ಪಡೆದಿರುವುದರಿಂದ, ನ್ಯಾಯಮೂರ್ತಿ ತ್ರಿವೇದಿ ಈ ಮನವಿ ಪುರಸ್ಕರಿಸಲಿಲ್ಲ. ಆದರೆ, ಸಿಜೆಐ ಅವರೆದುರು ಪ್ರಕರಣ ಉಲ್ಲೇಖಿಸುವಂತೆ ಜೈನ್‌ ಪರ ವಕೀಲರಿಗೆ ಅವರು ಆಗ ಸ್ವಾತಂತ್ರ್ಯ ನೀಡಿದ್ದರು.

ಬೇರೆ ಪೀಠಗಳು ವಿಚಾರಣೆ ನಡೆಸುತ್ತಿದ್ದ ಕೆಲ ಪ್ರಕರಣಗಳನ್ನು ನ್ಯಾ. ಬೇಲಾ ಅವರಿರುವ ಪೀಠಕ್ಕೆ ವಹಿಸುತ್ತಿರುವ ಸಂಬಂಧ ಸುಪ್ರೀಂ ಕೋರ್ಟ್‌ ಕೆಲ ದಿನಗಳಿಂದ ವಿವಾದಕ್ಕೆ ಸಾಕ್ಷಿಯಾಗಿದೆ.

ಈ ಸಂಬಂಧ ಹಿರಿಯ ವಕೀಲ ದುಶ್ಯಂತ್ ದವೆ ಮತ್ತು ವಕೀಲ ಪ್ರಶಾಂತ್ ಭೂಷಣ್ ಪ್ರತ್ಯೇಕವಾಗಿ ಸಿಜೆಐಗೆ ಅವರಿಗೆ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯ ಉನ್ನತ ಮೂಲವೊಂದು "ಪೀಠ ಮತ್ತು ನ್ಯಾಯಮೂರ್ತಿಗಳನ್ನು ಆಯ್ದುಕೊಳ್ಳುವ (Bench Hunting) ಯಾವುದೇ ಯತ್ನವನ್ನು ವಿಫಲಗೊಳಿಸಲಾಗುವುದು" ಮತ್ತು "ಸುಪ್ರೀಂ ಕೋರ್ಟ್ ಎಂದಿಗೂ ವಕೀಲರು ನಡೆಸುವ ನ್ಯಾಯಾಲಯವಾಗಲು ಬಿಡುವುದಿಲ್ಲ" ಎಂದು ಸ್ಪಷ್ಟಪಡಿಸಿತ್ತು

ಸಿಜೆಐ ವಿವರಣೆ

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ಸುಪ್ರೀಂ ಕೋರ್ಟ್

ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ವಿಚಾರಣೆ ನಡೆಸಬೇಕಿದ್ದ ಪ್ರಕರಣಗಳನ್ನು ನ್ಯಾ. ಬೇಲಾ ತ್ರಿವೇದಿ ನೇತೃತ್ವದ ನ್ಯಾಯಪೀಠಕ್ಕೆ ಮರು ನಿಯೋಜಿಸಿದ್ದರ ಹಿಂದಿನ ಕಾರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಬಹಿರಂಗಪಡಿಸಿದ್ದಾರೆ.

ವೈದ್ಯಕೀಯ ಕಾರಣಗಳಿಗಾಗಿ ದೀಪಾವಳಿ ನಂತರ ಪ್ರಕರಣ ಆಲಿಸುವುದಿಲ್ಲ ಮತ್ತು ಭಾಗಶಃ ವಿಚಾರಣೆ ನಡೆಸಿದ ಪ್ರಕರಣಗಳನ್ನು ತಾನು ವಿಚಾರಣೆ ನಡೆಸುತ್ತಿದ್ದ ಪೀಠದಿಂದ ಬಿಡುಗಡೆ ಮಾಡಬಹುದು ಎಂದು ನ್ಯಾ. ಬೋಪಣ್ಣ ರಿಜಿಸ್ಟ್ರಿಗೆ ಪತ್ರ ಬರೆದಿದ್ದರು. ಹೀಗಾಗಿ ನ್ಯಾ. ಬೇಲಾ ಅವರಿದ್ದ ಪೀಠಕ್ಕೆ ಅವುಗಳನ್ನು ವಹಿಸಲಾಯಿತು ಎಂದು ಸಿಜೆಐ ತಿಳಿಸಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಸತ್ಯೇಂದರ್ ಜೈನ್ ಅವರ ಜಾಮೀನು ಅರ್ಜಿ ಸೇರಿದಂತೆ ವಿವಿಧ ಪ್ರಕರಣಗಳನ್ನು ನ್ಯಾ. ತ್ರಿವೇದಿ ಅವರೆದುರು ಪಟ್ಟಿ ಮಾಡಲಾಗಿತ್ತು. ನ್ಯಾ. ಬೇಲಾ ಅವರು ಪೀಠದ ನೇತೃತ್ವ ವಹಿಸಿಕೊಳ್ಳುವ ಮೊದಲು ನ್ಯಾ. ಬೋಪಣ್ಣ ಅವರೊಂದಿಗೆ ಪೀಠ ಹಂಚಿಕೊಂಡಿದ್ದರು.

"...ರಿಜಿಸ್ಟ್ರಿಗೆ ಬಹಳಷ್ಟು ಪತ್ರಗಳು ಬಂದು ಬೀಳುತ್ತವೆ, ಅದಕ್ಕಾಗಿಯೇ ನಾನು ಇದೆಲ್ಲವನ್ನೂ ಹೇಳುತ್ತಿದ್ದೇನೆ. ಜೈನ್ ಅವರ ಜಾಮೀನು ವಿಸ್ತರಣೆ ಪ್ರಕರಣವನ್ನು ನ್ಯಾ. ಬೇಲಾ ಆಲಿಸಬೇಕಾಗಿದೆ. ಇಲ್ಲದಿದ್ದರೆ ಜೈನ್‌ ಶರಣಾಗಬೇಕಾಗುತ್ತದೆ" ಎಂದು ಸಿಜೆಐ ಹೇಳಿದರು.

ಜೈನ್ ಜಾಮೀನು ಅವಧಿ ವಿಸ್ತರಣೆ

ಸತ್ಯೇಂದರ್ ಜೈನ್, ಜಾರಿ ನಿರ್ದೇಶನಾಲಯ ಹಾಗೂ ಸುಪ್ರೀಂ ಕೋರ್ಟ್

ಈ ಮಧ್ಯೆ ಸತ್ಯೇಂದರ್ ಜೈನ್ ಅವರಿಗೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು 2024ರ ಜನವರಿ 8ರವರೆಗೆ ವಿಸ್ತರಿಸುವಂತೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಗುರುವಾರ ಆದೇಶಿಸಿದೆ.

"ಮಂಡಿಸಿದ ವಾದ ಮತ್ತು ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಪರಿಗಣಿಸಿ ಮತ್ತು ಅರ್ಹತೆಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಮೇ 2023ರಲ್ಲಿ ನೀಡಲಾದ ಮಧ್ಯಂತರ ಜಾಮೀನನ್ನು ಈ ದಿನಾಂಕದವರೆಗೆ ವಿಸ್ತರಿಸಲು ಒಲವು ತೋರುತ್ತೇವೆ. ಪ್ರಕರಣವನ್ನು ಜನವರಿ 8, 2024ರಂದು ಪಟ್ಟಿ ಮಾಡಿ. ಮಧ್ಯಂತರ ರಕ್ಷಣೆಯನ್ನು ಜನವರಿ 8, 2024 ರವರೆಗೆ ವಿಸ್ತರಿಸಲಾಗಿದೆ" ಎಂದು ಪೀಠ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈನ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಪಡೆಯುವ ಮೊದಲು ಅವರು ಒಂದು ವರ್ಷ ಜೈಲಿನಲ್ಲಿದ್ದರು. ಸಿಬಿಐ ಕೂಡ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.