CJI Sanjiv Khanna  
ಸುದ್ದಿಗಳು

ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಫಂಡ್‌ ನೀಡುವ ಬಿಸಿಐ ಪ್ರಸ್ತಾವನೆಗೆ ಸಿಜೆಐ ಖನ್ನಾ ಬೆಂಬಲ

"ಯುವ ಪ್ರತಿಭೆಗಳು ವಕೀಲಿಕೆಯಿಂದ ಹೊರಹೋಗುವುದು ವೈಯಕ್ತಿಕ ಆಯ್ಕೆಯಷ್ಟೇ ಆಗಿರದೆ, ವರಮಾನ ಮತ್ತು ಸಾಮಾಜಿಕ ಭದ್ರತೆಯಂತಹ ರಚನಾತ್ಮಕ ಸಮಸ್ಯೆಗಳ ಲಕ್ಷಣವಾಗಿದೆ" ಎಂದು ಅವರು ತಿಳಿಸಿದರು.

Bar & Bench

ಕಿರಿಯ ವಕೀಲರು ಅಥವಾ ವಕೀಲ ವೃತ್ತಿಗೆ ಹೊಸದಾಗಿ ಪ್ರವೇಶಿಸುವವರಿಗೆ ಕನಿಷ್ಠ ಸ್ಟೈಫಂಡ್‌ ಆದರೂ ನೀಡಬೇಕೆನ್ನುವ ಭಾರತೀಯ ವಕೀಲರ ಪರಿಷತ್ತಿನ ಈಚಿನ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜಯ್‌ ಖನ್ನಾ ಬೆಂಬಲಿಸಿದ್ದಾರೆ.

ನ್ಯಾ. ಖನ್ನಾ ಅವರು ಸಿಜೆಐ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಭಾರತೀಯ ವಕೀಲರ ಪರಿಷತ್‌ ನವದೆಹಲಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   

ಕಿರಿಯ ವಕೀಲರು ಸಾಮಾನ್ಯವಾಗಿ ಕಾರ್ಪೊರೇಟ್ ವ್ಯಾಜ್ಯಗಳು ಅಥವಾ ಆಂತರಿಕ ಕಾರ್ಯ ನಿರ್ವಹಣೆಯನ್ನು ಆಯ್ಜೆ ಮಾಡಿಕೊಳ್ಳುತ್ತಿರುವುದು ವೈಯಕ್ತಿಕ ಆಯ್ಕೆಯಷ್ಟೇ ಆಗಿರದೆ,  ಆರ್ಥಿಕ ಭದ್ರತೆಯ ಕಾರಣಕ್ಕೆ ಎಂದು ಅವರು ಹೇಳಿದರು.

ವ್ಯಾಜ್ಯ ವಕೀಲಿಕೆಯಿಂದ ಯುವ ಪ್ರತಿಭೆಗಳ ನಿರ್ಗಮಿಸುತ್ತಿರುವುದು ಕೇವಲ ವೈಯಕ್ತಿಕ ಆಯ್ಕೆ ಅಲ್ಲ.
ಸಿಜೆಐ ಸಂಜೀವ್ ಖನ್ನಾ

ಅಂತಹ ಸಮಸ್ಯೆ ತಪ್ಪಿಸುವ ಮಾರ್ಗವೆಂದರೆ ಕಾನೂನು ಪ್ರಾಕ್ಟೀಸ್‌ ಮಾಡುವ ಕೆಲ ವರ್ಷಗಳ ಕಾಲ ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಪಂಡ್‌ ನೀಡುವುದು ಎಂದು ಬಿಸಿಐನ ಇತ್ತೀಚಿನ ಪ್ರಸ್ತಾವನೆಯನ್ನು ಉಲ್ಲೇಖಿಸುತ್ತಾ ಅವರು ನುಡಿದರು.

ಇದರಿಂದ ಆರ್ಥಿಕ ಭದ್ರತೆಯೇ ಕಿರಿಯ ವಕೀಲರ ಏಕೈಕ ನಿರ್ಣಾಯಕ ಅಂಶವಾಗದೆ ಸಮರ್ಪಕ ಅರಿವಿನೊಂದಿಗೆ ವೃತ್ತಿಯನ್ನು ಅವರು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಬಹುದು ಎಂದು ಸಿಜೆಐ ಖನ್ನಾ ತಿಳಿಸಿದರು.

ವಕೀಲ ಸಮುದಾಯ ಉತ್ತಮವಾಗಿದ್ದಷ್ಟೂ, ನ್ಯಾಯಾಧೀಶರು ಉತ್ತಮವಾಗಿರುತ್ತಾರೆ.
ಸಿಜೆಐ ಸಂಜೀವ್ ಖನ್ನಾ

ನ್ಯಾಯ ವ್ಯವಸ್ಥೆಯಲ್ಲಿ ವಕೀಲರು ನಿರ್ವಹಿಸಿದ ನಿರ್ಣಾಯಕ ಪಾತ್ರಗಳ ಬಗ್ಗೆಯೂ ಸಿಜೆಐ ಮಾತನಾಡಿದರು. ಸಾಮಾನ್ಯವಾಗಿ ನ್ಯಾಯಾಧೀಶರನ್ನೇ ನ್ಯಾಯಾಂಗದ ಗೋಚರಿಸುವ ಭಾಗವಾಗಿ ನೋಡಲಾಗಿದ್ದರೂ, "ನ್ಯಾಯಾಂಗ" ಎಂಬುದು ವಕೀಲರನ್ನೂ ಸೂಚಿಸುವ ಪದವಾಗಿದೆ. ವಕೀಲ ಸಮುದಾಯ ಉತ್ತಮವಾಗಿದ್ದಷ್ಟೂ, ನ್ಯಾಯಾಧೀಶರು ಉತ್ತಮವಾಗಿರುತ್ತಾರೆ ಎಂದು ಅವರು ಹೇಳಿದರು.

ನಾಗರಿಕರು ಮತ್ತು ನ್ಯಾಯಾಧೀಶರ ನಡುವಿನ ಮೊದಲ ಸಂಪರ್ಕ ಕೊಂಡಿ ವಕೀಲರು ಎಂದ ಅವರು ವಕೀಲರು ಕೇವಲ ನ್ಯಾಯಾಲಯಕ್ಕೆ ಮಾತ್ರವೇ ಸಹಾಯ ಮಾಡುವುದಿಲ್ಲ, ಮೂಲಭೂತವಾಗಿ ಅವರು ಶಾಸನಗಳ ಪದಗಳಿಗೆ ಅರ್ಥವನ್ನು ನೀಡುವ ಮೂಲಕ ನೆಲದ ಕಾನೂನನ್ನು ರೂಪಿಸುತ್ತಿರುತ್ತಾರೆ ಎಂದರು.

ನ್ಯಾಯಾಧೀಶರು ಮತ್ತು ವಕೀಲರು ಒಬ್ಬರು ಮತ್ತೊಬ್ಬರ ಸಮತೋಲನ ಸಾಧಿಸಲು ಪೂರಕವಾದ ಪಾತ್ರ ಹೊಂದಿದ್ದಾರೆ. ಹೀಗಾಗಿ ಉತ್ತರದಾಯಿತ್ವಕ್ಕೆ ಸಂಬಂಧಿಸಿದಂತೆ ಇರುವ ಈ ತಡೆಗಳನ್ನು ಸಂಘರ್ಷವೆಂದು ತಪ್ಪಾಗಿ ಗ್ರಹಿಸಬಾರದು. ಈ ಇಬ್ಬರು ನಾಗರಿಕರೆಡೆಗೆ ಉತ್ತರಾದಾಯಿತ್ವ ಹೊಂದಿದ್ದಾರೆ ಎಂದು ಹೇಳಿದರು.