ನ್ಯಾ. ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆಯಾದ ಆರೋಪದ ತನಿಖೆಗಾಗಿ ರಚಿಸಲಾಗಿದ್ದ ಆಂತರಿಕ ಸಮಿತಿ ಸಲ್ಲಿಸಿರುವ ವರದಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಕಳುಹಿಸಿದ್ದಾರೆ.
ವರದಿಗೆ ನ್ಯಾ. ವರ್ಮಾ ಅವರು ನೀಡಿದ್ದ ಪ್ರತಿಕ್ರಿಯೆಯನ್ನು ಕೂಡ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗೆ ಕಳುಹಿಸಿಕೊಡಲಾಗಿದೆ. ಈ ಸಂಬಂಧ ಗುರುವಾರ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ "ಭಾರತದ ನ್ಯಾಯಮೂರ್ತಿ, ಆಂತರಿಕ ತನಿಖೆಗೆ ಸಂಬಂಧಿಸಿದಂತೆ, ಗೌರವಾನ್ವಿತ ಭಾರತದ ರಾಷ್ಟ್ರಪತಿಗಳು ಮತ್ತು ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ದಿನಾಂಕ 03.05.2025ರಂದು ತ್ರಿಸದಸ್ಯ ಸಮಿತಿ ಸಲ್ಲಿಸಿದ್ದ ವರದಿಯ ಪ್ರತಿಯನ್ನು ಮತ್ತು ದಿನಾಂಕ 06.05.2025ರಂದು ಶ್ರೀ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಂದ ಸ್ವೀಕರಿಸಿದ ಪತ್ರ/ಪ್ರತಿಕ್ರಿಯೆಯನ್ನು ಲಗತ್ತಿಸಿದ್ದಾರೆ" ಎಂದು ವಿವರಿಸಿದೆ.
ದೇಶದ ಮೂರು ಹೈಕೋರ್ಟ್‌ಗಳ ಇಬ್ಬರು ಮುಖ್ಯ ನ್ಯಾಯಮೂರ್ತಿಗಳು ಹಾಗೂ ಓರ್ವ ನ್ಯಾಯಮೂರ್ತಿಯನ್ನು ಒಳಗೊಂಡ ಸಮಿತಿ ಸಲ್ಲಿಸಿದ್ದ ವರದಿ ಆರೋಪಗಳು ನಿಜ ಎಂದು ಹೇಳಿದ್ದನ್ನು ʼಬಾರ್ ಅಂಡ್ ಬೆಂಚ್ʼ ನಿನ್ನೆ ವರದಿ ಮಾಡಿತ್ತು.
ನ್ಯಾ. ವರ್ಮಾ ರಾಜೀನಾಮೆ ನೀಡಬೇಕು ಇಲ್ಲದೇ ಹೋದರೆ ವಾಗ್ದಂಡನೆಗೆ ಸಿದ್ಧವಾಗುವಂತೆ ಸಿಜೆಐ ಸೂಚಿಸಿದ್ದರು ಎಂದು ತಿಳಿದುಬಂದಿತ್ತು.
ಆರೋಪಗಳ ತನಿಖೆ ನಡೆಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೊಳಗೊಂಡ ಸಮಿತಿಯನ್ನು ಸಿಜೆಐ ಕೆಲ ದಿನಗಳ ಹಿಂದೆ ರಚಿಸಿದ್ದರು. ಮಾರ್ಚ್ 25ರಂದು ತನಿಖೆ ಆರಂಭಿಸಿದ್ದ ಸಮಿತಿ ಮೇ 3 ರಂದು ವರದಿಯನ್ನು ಅಂತಿಮಗೊಳಿಸಿತ್ತು. ಅದನ್ನು ಮೇ 4ರಂದು ಸಿಜೆಐ ಅವರಿಗೆ ಸಲ್ಲಿಸಲಾಗಿತ್ತು.
ಮಾರ್ಚ್ 14ರ ಸಂಜೆ ಅಗ್ನಿ ಅವಗಢಕ್ಕೆ ತುತ್ತಾದ ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ ಈ ಆರೋಪಗಳನ್ನು ನಿರಾಕರಿಸಿದ್ದ ನ್ಯಾ. ವರ್ಮಾ, ಇದು ತಮ್ಮನ್ನು ಸಿಲುಕಿಸಲು ನಡೆದಿರುವ ಪಿತೂರಿ ಎಂದು ಪ್ರತಿಕ್ರಿಯಿಸಿದ್ದರು.