ನ್ಯಾ. ವರ್ಮಾ ಮನೆಯಲ್ಲಿ ನಗದು ದೊರೆತ ವಿವಾದ: ಸಿಜೆಐ ಖನ್ನಾ ಅವರಿಗೆ ವರದಿ ಸಲ್ಲಿಸಿದ ಆಂತರಿಕ ಸಮಿತಿ

ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ಸಿಜೆಐ ಸಂಜೀವ್ ಖನ್ನಾ ಅವರು ಮಾರ್ಚ್ 22ರಂದು ತ್ರಿಸದಸ್ಯ ಸಮಿತಿ ರಚಿಸಿದ್ದರು.
Justice Yashwant Varma
Justice Yashwant Varma
Published on

ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಚಿಸಿದ್ದ ಆಂತರಿಕ ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಸಮಿತಿ ಮೇ 4ರಂದು ಸಿಜೆಐ ಖನ್ನಾ ಅವರಿಗೆ ತನ್ನ ವರದಿ ಸಲ್ಲಿಸಿತ್ತು.

Also Read
[ನಗದು ಪತ್ತೆ ಪ್ರಕರಣ] ನ್ಯಾ. ಯಶವಂತ್ ವರ್ಮಾ ವರ್ಗಾವಣೆ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

ಆರೋಪಗಳ ತನಿಖೆ ನಡೆಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್‌ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.

ಮಾರ್ಚ್ 25ರಂದು ತನಿಖೆ ಆರಂಭಿಸಿದ್ದ ಸಮಿತಿ ಮೇ 3 ರಂದು ವರದಿಯನ್ನು ಅಂತಿಮಗೊಳಿಸಿತ್ತು. ಅದನ್ನು ನಿನ್ನೆ ಅಂದರೆ ಮೇ4 ರಂದು ಸಿಜೆಐ ಅವರಿಗೆ ಸಲ್ಲಿಸಲಾಗಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್‌ ಇಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಮಾರ್ಚ್ 14 ರ ಸಂಜೆ ಅಗ್ನಿ ಅವಗಢಕ್ಕೆ ತುತ್ತಾದ ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ ಈ ಆರೋಪಗಳನ್ನು ನಿರಾಕರಿಸಿದ್ದ ನ್ಯಾ. ವರ್ಮಾ, ಇದು ನನ್ನನ್ನು ಸಿಲುಕಿಸಲು ನಡೆದಿರುವ ಪಿತೂರಿ ಎಂದು ಪ್ರತಿಕ್ರಿಯಿಸಿದ್ದರು.

Also Read
ನ್ಯಾ. ವರ್ಮಾ ಮನೆಯಲ್ಲಿ ಹಣ ದೊರೆತ ಪ್ರಕರಣ: ನ್ಯಾಯಾಲಯದ ಕೆಲಸಗಳಿಗೆ ಮರಳಿದ ಆಂತರಿಕ ತನಿಖಾ ಸಮಿತಿ ಸದಸ್ಯರು

ಘಟನೆಯ ಬೆನ್ನಿಗೇ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಯಾದರೂ ಅವರಿಗೆ ಯಾವುದೇ ಕೆಲಸ ವಹಿಸದಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. ಆದರೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಅದು ನಿರಾಕರಿಸಿತ್ತು. ಮತ್ತೊಂದೆಡೆ ತನಿಖೆಗೆ ಸುಪ್ರೀಂ ಕೋರ್ಟ್‌ ಆಂತರಿಕ ಸಮಿತಿ ರಚಿಸಿದ ಸಂದರ್ಭದಲ್ಲಿಯೇ ನ್ಯಾಯಮೂರ್ತಿ ವರ್ಮಾ ಅವರು ನುರಿತ ವಕೀಲರಿಂದ ಕಾನೂನು ಸಲಹೆ ಪಡೆದಿದ್ದರು.

ಅತ್ತ ವರ್ಗಾವಣೆಗೆ ಕಾನೂನು ಕ್ಷೇತ್ರದ ವಿವಿಧ ವಲಯಗಳಿಂದ ಅಪಸ್ವರಗಳು ಕೇಳಿಬಂದಿದ್ದವು. ರಹಸ್ಯವಾಗಿ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ ಖಂಡಿಸಿತ್ತು ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡದಂತೆ ಹಾಗೂ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ಕೋರಿದ್ದ ಅರ್ಜಿಯನ್ನು ನಂತರ ಅಲಾಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿತ್ತು.  

Kannada Bar & Bench
kannada.barandbench.com