Justice BR Gavai 
ಸುದ್ದಿಗಳು

ನ್ಯಾ. ಬಿ ಆರ್ ಗವಾಯಿ ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ: ಕಾನೂನು ಸಚಿವಾಲಯಕ್ಕೆ ಸಿಜೆಐ ಖನ್ನಾ ಶಿಫಾರಸು

ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸುಪ್ರೀಂ ಕೋರ್ಟ್‌ನ 52 ನೇ ಮುಖ್ಯ ನ್ಯಾಯಮೂರ್ತಿ ಮತ್ತು ದಲಿತ ಸಮುದಾಯದಿಂದ ಬಂದ ಎರಡನೇ ಸಿಜೆಐ ಎನಿಸಿಕೊಳ್ಳಲಿದ್ದಾರೆ.

Bar & Bench

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾ. ಬಿ ಆರ್ ಗವಾಯಿ ಅವರ ಹೆಸರು ಶಿಫಾರಸು ಮಾಡಿ ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ನ್ಯಾ. ಬಿ ಆರ್ ಗವಾಯಿ ಅವರು ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿ ಮತ್ತು ದಲಿತ ಸಮುದಾಯದಿಂದ ಬಂದ ಎರಡನೇ ಸಿಜೆಐ ಎನಿಸಿಕೊಳ್ಳಲಿದ್ದಾರೆ. ದಲಿತ ಸಮುದಾಯದ ಮೊದಲ ಸಿಜೆಐ ಕೆ ಜಿ ಬಾಲಕೃಷ್ಣನ್‌ 2010ರಲ್ಲಿ ನಿವೃತ್ತರಾಗಿದ್ದರು.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನಿವೃತ್ತಿಯ ನಂತರ ನವೆಂಬರ್ 2024ರಲ್ಲಿ ನ್ಯಾಯಮೂರ್ತಿ ಖನ್ನಾ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡರು.

ಸಿಜೆಐ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದಾರೆ. ಸಿಜೆಐ ಡಿ ವೈ ಚಂದ್ರಚೂಡ್‌ ಅವರ ಬಳಿಕ ಅಧಿಕಾರ ವಹಿಸಿಕೊಂಡ ಅವರ ಅಧಿಕಾರಾವಧಿ ಕೇವಲ ಆರು ತಿಂಗಳು ಇತ್ತು. ಅವರ ಉತ್ತರಾಧಿಕಾರಿ ನ್ಯಾಯಮೂರ್ತಿ ಗವಾಯಿ ಕೂಡ ಇದೇ ರೀತಿಯ ಅಧಿಕಾರಾವಧಿ ಹೊಂದಿದ್ದು ಅವರು ನವೆಂಬರ್ 23, 2025ರಂದು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

ನ್ಯಾಯಮೂರ್ತಿ ಗವಾಯಿ ಅವರನ್ನು ನವೆಂಬರ್ 14, 2003ರಂದು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿತ್ತು. 2005ರಲ್ಲಿ ಅವರ ಹುದ್ದೆ ಖಾಯಂ ಆಗಿತ್ತು.

ಅವರು ಮುಂಬೈನ ಹೈಕೋರ್ಟ್‌ನ ಪ್ರಧಾನ ಪೀಠ ಮಾತ್ರವಲ್ಲದೆ ಅದೇ ಹೈಕೋರ್ಟ್‌ನ ನಾಗಪುರ, ಔರಂಗಾಬಾದ್ ಹಾಗೂ ಪಣಜಿಯಲ್ಲಿ ಪೀಠಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಮೇ 24, 2019ರಲ್ಲಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಗಿತ್ತು.