Chief Justice Dipankar Datta, Bombay High Court
Chief Justice Dipankar Datta, Bombay High Court  
ಸುದ್ದಿಗಳು

ಸಿಜೆಐ ಲಲಿತ್ ಅವರಂತೆ ಯಾವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ನನ್ನನ್ನು ಸರ್ ಎಂದು ಕರೆದಿರಲಿಲ್ಲ: ನ್ಯಾ. ದತ್ತ

Bar & Bench

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಅವರ ನಮ್ರತೆಯನ್ನು ಖುದ್ದು ಕಂಡ ಅನುಭವವನ್ನು ವಿವರಿಸುತ್ತಾ ಅವರೊಬ್ಬ ಸರಳ ಮತ್ತು ಸಹೃದಯ ವ್ಯಕ್ತಿ ಎಂದು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ತಿಳಿಸಿದರು.

ಬಾಂಬೆ ಹೈಕೋರ್ಟ್‌ ನಾಗಪುರ ಪೀಠದ ವಕೀಲರ ಸಂಘ ಶನಿವಾರ ಸಿಜೆಐ ಲಲಿತ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಿಜೆ ದತ್ತ ಮಾತನಾಡಿದರು.

ಗೋವಾದಲ್ಲಿ ಬಾಂಬೆ ಹೈಕೋರ್ಟ್‌ನ ಹೊಸ ಕಟ್ಟಡದ ಉದ್ಘಾಟನೆಗೆ ನ್ಯಾ. ಲಲಿತ್ ಅವರನ್ನು ಆಹ್ವಾನಿಸಲು ನ್ಯಾ. ದತ್ತ ಅವರು ಮಾರ್ಚ್ 2021ರಲ್ಲಿ ದೆಹಲಿಗೆ ತೆರಳಿದ್ದರು. ಆಗ ನಡೆದಿದ್ದ ಘಟನೆಯೊಂದನ್ನು ಅವರು ಮೆಲಕು ಹಾಕಿದರು.

“ನ್ಯಾ. ಲಲಿತ್‌ ಅವರು ಕೋಣೆ ಪ್ರವೇಶಿಸಿದಾಗ ತಮ್ಮ ಕೈಗಳನ್ನು ಚಾಚುತ್ತಾ ʼಸರ್‌ ಹೇಗಿದ್ದೀರಿ?ʼ ಎಂದರು. ನಾನು ಸ್ಪಷ್ಟವಾಗಿ ಹೇಳುವುದಾದರೆ ಸುಪ್ರೀಂ ಕೋರ್ಟ್‌ನ ಯಾವುದೇ ನ್ಯಾಯಮೂರ್ತಿ ಈ ರೀತಿ ನನ್ನನ್ನು ಸರ್‌ ಎಂದು ಕರೆದಿರಲಿಲ್ಲ” ಎಂದು ನ್ಯಾ. ದತ್ತ ವಿವರಿಸಿದರು.

“ಸರಳತೆ, ನಮ್ರತೆ, ಸಹೃದಯ, ಸದಾಚಾರ ಮತ್ತು ಸಹಾನುಭೂತಿಯು ಒಬ್ಬ ಮನುಷ್ಯನಲ್ಲಿ ಕ್ರೋಢೀಕರಣಗೊಂಡಿದ್ದರೆ ಸಿಜೆಐ ಲಲಿತ್ ಅವರಲ್ಲಿ ಮಾತ್ರ” ಎಂದು ಅವರು ಹೇಳಿದರು.

ಸಿಜೆಐ ಲಲಿತ್‌ ಅವರ ಕುರಿತಾದ ಕೆಲವು ವಿರಳ ಸಂಗತಿಗಳನ್ನು ನ್ಯಾ. ದತ್ತ ಬಹಿರಂಗಪಡಿಸಿದರು.

  • ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಹಾಗೂ ಸಿಕ್ಕಿಂ ಹೈಕೋರ್ಟ್ ಹೊರತುಪಡಿಸಿ ಎಲ್ಲಾ ಹೈಕೋರ್ಟ್‌ಗಳಲ್ಲಿ ವಕೀಲರಾಗಿ ನ್ಯಾ. ಲಲಿತ್‌ ವಾದ ಮಂಡಿಸಿದ್ದಾರೆ. ವರ್ಚುವಲ್ ವಿಚಾರಣೆಗಳಿಲ್ಲದ ಕಾಲದಲ್ಲಿ ನ್ಯಾ. ಲಲಿತ್‌ ಅವರು ದಿನವೊಂದಕ್ಕೆ ಬೇರೆ ಬೇರೆ ಸ್ಥಳದ ಮೂರು ನ್ಯಾಯಾಲಯಗಳಿಗೆ ಹಾಜರಾಗುತ್ತಿದ್ದರು.

  • ವಕೀಲರಾಗಿ, ಅವರು ಸುಪ್ರೀಂ ಕೋರ್ಟ್‌ನಲ್ಲಿ ದಿನವೊಂದಕ್ಕೆ 15-20 ಪ್ರಕರಣಗಳಲ್ಲಿ ವಾದ ಮಂಡಿಸುತ್ತಿದ್ದರು. ಅವರು ಎಲ್ಲಾ ಪ್ರಕರಣಗಳ ಬಗ್ಗೆ ಸಿದ್ಧರಾಗಿ ಇರುತ್ತಿದ್ದರು. ಯಾವುದೋ ಕಾರಣಕ್ಕೆ ಪ್ರಕರಣವೊಂದರಲ್ಲಿ ಹಾಜರಾಗಲು ಸಾಧ್ಯವಾಗದಿದ್ದರೆ, ಕಕ್ಷಿದಾರನಿಗೆ ಶುಲ್ಕ ಮರಳಿಸಬೇಕು ಎಂಬ ಖಾಯಂ ಸೂಚನೆ ಅವರದಾಗಿತ್ತು.

  • ಯಾವುದೇ ಸಂದರ್ಭದಲ್ಲಿ ಅವರು ಮೂರು ಫಾಲ್‌ ಬ್ಯಾಕ್‌ ವಾದಗಳನ್ನು ಹೊಂದಿರುತ್ತಿದ್ದರು.

  • ನಾಗಪುರ ನಡೆದ ಕಾರ್ಯಕ್ರಮವೊಂದರಲ್ಲಿ, ಸಿಜೆಐ ಲಲಿತ್ ಅವರು ಯಶಸ್ವಿ ವಕೀಲರಾಗಲು ಮೂರು ಲಕ್ಷಣಗಳು ಮುಖ್ಯ ಎಂದಿದ್ದರು: ವಾಸ್ತವಾಂಶ ಅರಿಯಿರಿ, ಕಾನೂನು ತಿಳಿದುಕೊಳ್ಳಿ ಮತ್ತು ಮೊದಲ ಎರಡಕ್ಕಿಂತಲೂ ಮುಖ್ಯವಾಗಿ ನ್ಯಾಯಾಧೀಶರನ್ನು ಅರಿತುಕೊಳ್ಳಿ.

ಭಾಷಣ ಮುಕ್ತಾಯಕ್ಕೂ ಮೊದಲು ಸಿಜೆ ದತ್ತ ಅವರು ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ ಎದುರಾಗಿರುವುದನ್ನು ಒತ್ತಿ ಹೇಳಿದ ಅವರು ಮುಂಬರುವ ದಿನಗಳಲ್ಲಿ ಸಮಸ್ಯೆ ನೀಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.