ಪ್ರಸಕ್ತ ವರ್ಷದ ಬಹುನಿರೀಕ್ಷಿತ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ-2020) ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಕನಿಷ್ಠ ಇಬ್ಬರು ಐಡಿಐಎ ವಿದ್ಯಾರ್ಥಿಗಳು ಅಗ್ರ ರ‌್ಯಾಂಕ್ ಗಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.
ಒಟ್ಟಾರೆ 53, 226 ಪದವಿ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದು, ಇಬ್ಬರು ಐಡಿಐಎ ವಿದ್ಯಾರ್ಥಿಗಳು 3 ಮತ್ತು 48ನೇ ರ‌್ಯಾಂಕ್ ಗಳಿಸಿದ್ದಾರೆ. ಅಖಿಲ ಭಾರತ ರ‌್ಯಾಂಕ್ ಪಟ್ಟಿಯಲ್ಲಿ ಜೈಸಿಂಗ್ ರಾಥೋಡ್ ಅವರು 3ನೇ ರ‌್ಯಾಂಕ್ ಗಳಿಸಿದ್ದು, ಅಖಿಲ ಭಾರತ ಇಡಬ್ಲ್ಯುಎಸ್ ರ‌್ಯಾಂಕ್ ಪಟ್ಟಿಯಲ್ಲಿ 120.5 ಅಂಕಗಳೊಂದಿಗೆ ಅಗ್ರ ಶ್ರೇಯಾಂಕಿತರಾಗಿದ್ದಾರೆ. ಯಶವಂತ್ ಕುಮಾರ್ ಅವರು ಅಖಿಲ ಭಾರತ ರ‌್ಯಾಂಕ್ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿದ್ದು, ಅಖಿಲ ಭಾರತ ಹಿಂದುಳಿದ ವರ್ಗಗಳ ರ‌್ಯಾಂಕ್ ಪಟ್ಟಿಯಲ್ಲಿ 90.5 ಅಂಕಗಳೊಂದಿಗೆ 3ನೇ ರ‌್ಯಾಂಕ್ ಪಡೆದಿದ್ದಾರೆ.
ಸಿಎಲ್‌ಎಟಿ ಮಾರ್ಗದರ್ಶಕ ರಜನೀಶ್ ಸಿಂಗ್ ಅವರು ಉಭಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಅಖಿಲ ಭಾರತ ಮಟ್ಟದಲ್ಲಿ ಸಿಂಗ್ ಅವರ ಶಿಷ್ಯೆ ಶೈಲಜಾ ಅವರು 110.5 ಅಂಕಗಳೊಂದಿಗೆ 6ನೇ ರ‌್ಯಾಂಕ್ ಪಡೆದಿದ್ದಾರೆ. ಈಚೆಗೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಎನ್‌ಎಲ್‌ಎಸ್‌ಐಯು) ಅಗ್ರಶ್ರೇಯಾಂಕ ಪಡೆದ ಐಡಿಐಎ ವಿದ್ಯಾರ್ಥಿನಿ ಯಮುನಾ ಮೆನನ್ ಅವರು ಅತಿಹೆಚ್ಚು ಸ್ವರ್ಣ ಪದಕ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.
ದೇಶದ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಕಲ್ಪಿಸುವ ಉದ್ದೇಶದಿಂದ ಪ್ರತಿವರ್ಷ ಸಿಎಲ್‌ಎಟಿ ನಡೆಸಲಾಗುತ್ತದೆ. ಪ್ರಸಕ್ತ ವರ್ಷ ಸೆಪ್ಟೆಂಬರ್ 28ರಂದು ಸಿಎಲ್‌ಎಟಿ ನಡೆಸಲಾಗಿತ್ತು.