ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ಸಿಎಲ್‌ಎಟಿ- 2022 ಅನ್ನು ಜೂನ್ 19ಕ್ಕೆ ಮುಂದೂಡಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಅಂದು ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.
ಈ ಹಿಂದೆ ಮೇ 8ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಸೋಮವಾರ ನಡೆದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಿಎಲ್ಎಟಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪರೀಕ್ಷೆಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 9ರವರೆಗೆ ವಿಸ್ತರಿಸಲಾಗಿದೆ. ಮೇ 8, 2022 ರಂದು ಪರೀಕ್ಷೆ ನಡೆಸಲು ಒಕ್ಕೂಟ ಕಳೆದ ನವೆಂಬರ್‌ನಲ್ಲಿ ನಿರ್ಧರಿಸಿತ್ತು.
ಇದೇ ವೇಳೆ ಡಿಸೆಂಬರ್ 18, 2022ರಂದು ನಡೆಯಲಿರುವ ಸಿಎಲ್ಎಟಿ 2023ರ ದಿನಾಂಕವನ್ನು ಸಹ ಒಕ್ಕೂಟ ಪ್ರಕಟಿಸಿದೆ. ಕೌನ್ಸೆಲಿಂಗ್ ಶುಲ್ಕವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹ 50,000 ರಿಂದ ₹ 30,000ಕ್ಕೆ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ₹ 20,000 ಕ್ಕೆ ಇಳಿಸಲು ಒಕ್ಕೂಟ ನಿರ್ಧರಿಸಿದೆ. ಕೋವಿಡ್ ಕಾರಣದಿಂದಾಗಿ 2021ನೇ ಸಾಲಿನ ಸಿಎಲ್‌ಎಟಿಯನ್ನು ಹಲವು ಬಾರಿ ಮುಂದೂಡಲಾಗಿತ್ತು.