ಈಚೆಗೆ ನಡೆದ 2024ರ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್ಎಟಿ) ಫಲಿತಾಂಶಗಳನ್ನು ಡಿಸೆಂಬರ್ 10ರಂದು ಪ್ರಕಟಿಸುವುದಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್ಎಲ್‌ಯು ಕನ್ಸೋರ್ಟಿಯಂ) ಘೋಷಿಸಿದೆ.
ಸೋಮವಾರ ಸಂಜೆ ಪರಿಷ್ಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಅಪ್ಲೋಡ್ ಮಾಡಿದ ಸ್ವಲ್ಪ ಸಮಯದ ನಂತರ ಒಕ್ಕೂಟ ಈ ವಿಚಾರ ತಿಳಿಸಿದೆ.
ಕೆಲವು ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಪ್ರಕಟಿಸಲಾಗಿದ್ದ ತಾತ್ಕಾಲಿಕ ಕೀ ಉತ್ತರದ ಮೊದಲ ಆವೃತ್ತಿಯನ್ನು ತೆಗೆದುಹಾಕಲಾಗಿದೆ.
ಬಾರ್ ಅಂಡ್ ಬೆಂಚ್ ಜೊತೆ ಮಾತನಾಡಿದ ಲಾ ಪ್ರಿಪ್ ಟ್ಯುಟೋರಿಯಲ್ ನಿರ್ದೇಶಕಿ ಅನುಪಮಾ ಜೋಶಿ, ಈ ಹಿಂದಿನ ತಾತ್ಕಾಲಿಕ ಉತ್ತರ ಕೀಯಲ್ಲಿ ನೀಡಲಾದ ಕೀ ಉತ್ತರಗಳು ಹೊಂದಾಣಿಕೆಯಾಗಿಲ್ಲ ಎಂದರು.
ಉದಾಹರಣೆಗೆ, ಸೆಟ್ ಎ ಪತ್ರಿಕೆಗಳ ಉತ್ತರಗಳನ್ನು ಹಿಂದಿನ ಉತ್ತರ ಕೀಲಿಯ ಸೆಟ್ ಬಿ ವಿಭಾಗದಲ್ಲಿ ಅಜಾಗರೂಕತೆಯಿಂದ ನೀಡಲಾಗಿದೆ. ಈ ಕಾರಣದಿಂದಾಗಿ, ತಾತ್ಕಾಲಿಕ ಉತ್ತರ ಕೀಗೆ ವಿದ್ಯಾರ್ಥಿಗಳು ಹೇಗೆ ಆಕ್ಷೇಪಣೆಗಳನ್ನು ಎತ್ತುತ್ತಾರೆ ಎಂಬ ಆತಂಕವಿತ್ತು, ಏಕೆಂದರೆ ಪ್ರತಿ ಆಕ್ಷೇಪಣೆಗೂ ವಿದ್ಯಾರ್ಥಿಗಳು ₹ 1,000 ಶುಲ್ಕ ಪಾವತಿಸಬೇಕಾಗುತ್ತದೆ.
ಪರಿಷ್ಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಆಕ್ಷೇಪಣೆಗಳನ್ನು ದಾಖಲಿಸುವ ಸಮಯವನ್ನು ಸುಮಾರು 10 ಗಂಟೆಗಳ ಅವಧಿಯವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ವಿದ್ಯಾರ್ಥಿಗಳು ಡಿಸೆಂಬರ್ 5 ರಂದು ಬೆಳಿಗ್ಗೆ 9 ಗಂಟೆಯೊಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕಾಗಿತ್ತು. ಇತ್ತೀಚಿನ ಪ್ರಕಟಣೆಯ ಪ್ರಕಾರ, ಡಿಸೆಂಬರ್ 5 ರಂದು ಸಂಜೆ 7 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಡಿಸೆಂಬರ್ 9 ರಂದು ಅಂದರೆ ಫಲಿತಾಂಶ ಪ್ರಕಟವಾಗುವ ಡಿ. 10ಕ್ಕೂ ಒಂದು ದಿನ ಮೊದಲು ಅಂತಿಮ ಕೀ ಉತ್ತರಗಳನ್ನು ಒಕ್ಕೂಟ ಪ್ರಕಟಿಸಲಿದೆ.
ಡಿ. 3ರ ಭಾನುವಾರ ಪರೀಕ್ಷೆ ನಡೆದಿತ್ತು. ಈ ಸಾಲಿನ ಪರೀಕ್ಷೆಯಲ್ಲಿ ನೋಂದಣಿ ಮತ್ತು ಅರ್ಜಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತ್ತು.
ಒಕ್ಕೂಟ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದರು.
ಯುಜಿ ಪರೀಕ್ಷೆಯ ಅರ್ಜಿಗಳಲ್ಲಿ 34.7% ಹೆಚ್ಚಳ ಮತ್ತು ಪಿಜಿ ಪರೀಕ್ಷೆ ಅರ್ಜಿಗಳಲ್ಲಿ 25.8% ಹೆಚ್ಚಳವಾಗಿರುವುದನ್ನು ಇದು ಬಿಂಬಿಸುತ್ತದೆ ಎಂದು ಒಕ್ಕೂಟ ಹೇಳಿತ್ತು.
[ಅಧಿಸೂಚನೆಯನ್ನು ಇಲ್ಲಿ ಓದಿ]