Clat 2024 
ಸುದ್ದಿಗಳು

ಸಿಎಲ್ಎಟಿ 2024 ಫಲಿತಾಂಶ ಪ್ರಕಟ; ಯುಜಿ ಪರೀಕ್ಷೆಯಲ್ಲಿ ರಾಜಸ್ಥಾನದ ವಿದ್ಯಾರ್ಥಿಗೆ ಅಗ್ರಸ್ಥಾನ

ಒಟ್ಟು 45 ಅಭ್ಯರ್ಥಿಗಳು (30 ಪುರುಷರು ಮತ್ತು 15 ಮಹಿಳೆಯರು) 99.90 ಪರ್ಸಂಟೈಲ್ ನಲ್ಲಿ ಅಂಕಗಳನ್ನು ಗಳಿಸಿದ್ದಾರೆ.

Bar & Bench

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 2024 (ಸಿಎಲ್ಎಟಿ 2024) ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

ರಾಜಸ್ಥಾನದ ಜೋಧಪುರದ ವಿದ್ಯಾರ್ಥಿ ಜೈ ಕುಮಾರ್ ಬೊಹರಾ ಪದವಿ (ಯುಜಿ) ಪರೀಕ್ಷೆಯಲ್ಲಿ ಒಟ್ಟು 118 ಅಂಕಗಳಿಗೆ 108 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ.

ಒಟ್ಟು 45 ಅಭ್ಯರ್ಥಿಗಳು (30 ಪುರುಷರು ಮತ್ತು 15 ಮಹಿಳೆಯರು) 99.90 ಪರ್ಸಂಟೈಲ್ ನಲ್ಲಿ ಅಂಕಗಳನ್ನು ಗಳಿಸಿದ್ದಾರೆ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್ಎಲ್‌ಯು) ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಪ್ರವೇಶಕ್ಕಾಗಿ ಡಿಸೆಂಬರ್ 3ರಂದು ದೇಶದ 139 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಎನ್ಎಲ್‌ಯು ಒಕ್ಕೂಟ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ಯುಜಿ ಮತ್ತು ಪಿಜಿ ಪರೀಕ್ಷೆಗಳಿಗೆ 1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಯುಜಿ ಪರೀಕ್ಷೆಯ ಅರ್ಜಿಗಳಲ್ಲಿ 34.7% ಹೆಚ್ಚಳ ಮತ್ತು ಪಿಜಿ ಪರೀಕ್ಷೆ ಅರ್ಜಿಗಳಲ್ಲಿ 25.8% ಹೆಚ್ಚಳವಾಗಿರುವುದನ್ನು ಇದು ಬಿಂಬಿಸುತ್ತದೆ ಎಂದು ಒಕ್ಕೂಟ ಹೇಳಿದೆ.

ಆರಂಭಿಕ ಉತ್ತರ ಕೀಯಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಪರಿಷ್ಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಡಿಸೆಂಬರ್ 4 ರಂದು ಬಿಡುಗಡೆ ಮಾಡಲಾಗಿತ್ತು.

ಎನ್ಎಲ್‌ಯು ಒಕ್ಕೂಟದ ಇತ್ತೀಚಿನ ಪ್ರಕಟಣೆಯ ಪ್ರಕಾರ, ಅಂತಿಮ ಉತ್ತರ ಕೀಯಲ್ಲಿ ಎರಡು ಪ್ರಶ್ನೆಗಳನ್ನು ಹಿಂತೆಗೆದುಕೊಳ್ಳಲಾಗಿದ್ದು ಒಂದು ಪ್ರಶ್ನೆಗೆ ಉತ್ತರ ಕೀಲಿ ಬದಲಾಯಿಸಲಾಗಿದೆ. ಆದ್ದರಿಂದ, ಪತ್ರಿಕೆಯು ಆರಂಭಿಕ 120 ಪ್ರಶ್ನೆಗಳ ಬದಲು 118 ಪ್ರಶ್ನೆಗಳನ್ನು ಹೊಂದಿತ್ತು.

ಅಭ್ಯರ್ಥಿಗಳು ಡಿಸೆಂಬರ್ 11, ಮಧ್ಯಾಹ್ನ 12ರಿಂದ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅಂತಿಮ ಕೀ ಉತ್ತರಕ್ಕೆ ಸಂಬಂಧಿಸಿದಂತೆ ತಮ್ಮ ಕುಂದುಕೊರತೆಗಳನ್ನು ಸಲ್ಲಿಸಬಹುದು ಎಂದು ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಂದುಕೊರತೆ ಪರಿಹಾರ ಸಮಿತಿ ಎದುರು ಆಕ್ಷೇಪಣೆ ಸಲ್ಲಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆೆ:

a. ನಿಮ್ಮ CLAT ಖಾತೆಗೆ ಲಾಗಿನ್ ಆಗಿ;

b. 'ಕುಂದುಕೊರತೆ ಸಲ್ಲಿಸಿ' ಬಟನ್ ಕ್ಲಿಕ್ ಮಾಡಿ;

c. ನಿಮ್ಮ ಕುಂದುಕೊರತೆಯ ಸ್ವರೂಪ ತಿಳಿಸಿ;

d. ಕುಂದುಕೊರತೆಗಳನ್ನು ವಿವರಿಸಿ (ಗರಿಷ್ಠ 1,000 ಅಕ್ಷರಗಳು);

e. ಪೂರಕ ದಾಖಲೆಗಳನ್ನು ಸಲ್ಲಿಸಿ;

f. ಘೋಷಣೆ ನಮೂನೆಯನ್ನು ಸಲ್ಲಿಸಿ;

g. ʼಸಲ್ಲಿಸುʼ ಬಟನ್ ಕ್ಲಿಕ್ ಮಾಡಿ