ನೆರೆಯ ಹರಿಯಾಣದೊಂದಿಗಿನ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವುದಕ್ಕಾಗಿ ಸಟ್ಲೆಜ್-ಯಮುನಾ ಲಿಂಕ್ (ಎಸ್‌ವೈಎಲ್) ಕಾಲುವೆ ನಿರ್ಮಾಣ ಮಾಡುವಂತೆ ತಾನು ನೀಡಿದ್ದ ಆದೇಶ ಪಾಲಿಸದೆ ಪಂಜಾಬ್ ಸರ್ಕಾರ ಉದ್ಧಟತನದಿಂದ ವರ್ತಿಸಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
ನೀರು ಹಂಚಿಕೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಸಹಕರಿಸಬೇಕು ಇಲ್ಲದಿದ್ದರೆ ಆಗಸ್ಟ್ 13 ರಂದು ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ಎಚ್ಚರಿಕೆ ನೀಡಿತು.
“ಕಾಲುವೆ ನಿರ್ಮಿಸುವಂತೆ ತೀರ್ಪು ನೀಡಿದ್ದರೂ ಅದಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡಿದ್ದು ಉದ್ಧಟತನದ ಕೆಲಸವಲ್ಲವೇ? ಇದು ನ್ಯಾಯಾಲಯದ ತೀರ್ಪನ್ನು ಮಣಿಸಲು ಯತ್ನಿಸುತ್ತದೆ. ಇದು ಉದ್ಧಟತನದ ಸ್ಪಷ್ಟ ಉದಾಹರಣೆ. ಇದರಿಂದ ಮೂರು ರಾಜ್ಯಗಳಿಗೆ ಅನುಕೂಲವಾಗಬೇಕಿತ್ತು. ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡಿದ್ದೀರಿ” ಎಂದು ನ್ಯಾಯಾಲಯ ಕಿಡಿಕಾರಿತು.
ಪಂಜಾಬ್ ರಾಜ್ಯದ ಪರವಾಗಿ ಹಿರಿಯ ವಕೀಲ ಗುರುಮಿಂದರ್ ಸಿಂಗ್, ಹರಿಯಾಣದ ಪರವಾಗಿ ಶ್ಯಾಮ್ ದಿವಾನ್, ಕೇಂದ್ರ ಸರ್ಕಾರದ ಪರವಾಗಿ ಐಶ್ವರ್ಯ ಭಾಟಿ, ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಭೂಮಾಲೀಕರ ಪರವಾಗಿ ಹಿರಿಯ ನ್ಯಾಯವಾದಿ ಪಿಎಸ್ ಪಟ್ವಾಲಿಯಾ ವಾದ ಮಂಡಿಸಿದರು.
ಹಿನ್ನೆಲೆ
ಎಸ್‌ವೈಎಲ್ ಕಾಲುವೆ ವಿವಾದಕ್ಕೆ ಸಂಬಂಧಿಸಿದಂತೆ ಪಂಜಾಬ್ ವಿರುದ್ಧ ಹರಿಯಾಣ 1996 ರಲ್ಲಿ ಸಲ್ಲಿಸಿದ್ದ ಮೂಲ ಮೊಕದ್ದಮೆಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪ್ರಕರಣ 1981ರಷ್ಟು ಹಿಂದಿನದು. ಆಗ ಪಂಜಾಬ್, ರಾಜಸ್ಥಾನ ಹಾಗೂ ಹರಿಯಾಣ ರಾಜ್ಯಗಳು ನೀರು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದ ಪ್ರಕಾರ ಕಾಲುವೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, ಕಾಲುವೆ ನಿರ್ಮಾಣದ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಪ್ರತಿರೋಧ ವ್ಯಕ್ತವಾಗಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಪಂಜಾಬ್ ಕಾಮಗಾರಿ ಸ್ಥಗಿತಗೊಳಿಸಿತ್ತು. ಕಡೆಗೆ 2002 ರಲ್ಲಿ ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಹರಿಯಾಣದೊಂದಿಗೆ ನದಿ ನೀರು ಹಂಚಿಕೆಗಾಗಿ ಕಾಲುವೆ ನಿರ್ಮಿಸುವಂತೆ ನಿರ್ದೇಶನ ನೀಡಿತ್ತು.
ಈ ನಡುವೆ ಒಪ್ಪಂದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ತನ್ನನ್ನು ಕಾಲುವೆ ನಿರ್ಮಾಣದ ಹೊಣೆಗಾರಿಕೆಯಿಂದ ಮುಕ್ತಗೊಳಿಸಿಕೊಳ್ಳಲು ಪಂಜಾಬ್ ಸರ್ಕಾರವು 'ಪಂಜಾಬ್ ಒಪ್ಪಂದಗಳ ಮುಕ್ತಾಯ ಕಾಯಿದೆ- 2004' ಅನ್ನು ಜಾರಿಗೆ ತಂದಿತು. ಆ ಬಳಿಕ ಭಾರತದ ರಾಷ್ಟ್ರಪತಿಗಳು ಕಾಯಿದೆ ಬಗ್ಗೆ ಸುಪ್ರೀಂ ಕೋರ್ಟ್‌ನ ಸಲಹಾ ಅಭಿಪ್ರಾಯಕ್ಕಾಗಿ ಉಲ್ಲೇಖಿಸಿದರು.
ನವೆಂಬರ್ 2016 ರಲ್ಲಿ, ಸುಪ್ರೀಂ ಕೋರ್ಟ್ ಪಂಜಾಬ್ ನದಿ ನೀರು ಹಂಚಿಕೆ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ತನ್ನ ಅಭಿಪ್ರಾಯ ನೀಡಿತು. 'ಪಂಜಾಬ್ ಒಪ್ಪಂದಗಳ ಮುಕ್ತಾಯ ಕಾಯಿದೆ- 2004' ಕೂಡ ಸಂವಿಧಾನಬಾಹಿರ ಎಂದು ಅದು ಅಭಿಪ್ರಾಯಪಟ್ಟಿತು.
ಆದರೂ, ಪಂಜಾಬ್ ಸರ್ಕಾರ 2002ರ ಸುಗ್ರೀವಾಜ್ಞೆಯನ್ನು ಇನ್ನೂ ಪಾಲಿಸಿಲ್ಲ. ಜೊತೆಗೆ ಪ್ರಕರಣ ವಿವಿಧ ನ್ಯಾಯಾಲಯಗಳ ಎದುರು ಬಾಕಿ ಉಳಿದಿದೆ.