ಹವಾಮಾನ ಬದಲಾವಣೆ ವಿಚಾರವಾಗಿ ತನ್ನ ಅಂತಾರಾಷ್ಟ್ರೀಯ ಕರ್ತವ್ಯ ಮತ್ತು ಬದ್ಧತೆ ಪೂರೈಸಲು ಭಾರತವು ತೆಗೆದುಕೊಂಡಿರುವ ಕ್ರಮಗಳ ಕುರಿತು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದಿಂದ ಸ್ಥಿತಿಗತಿ ವರದಿ ಕೇಳಿದೆ [ರೋಹಿತ್ ಮದನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ವಿಭಾಗೀಯ ಪೀಠ ಕೇಂದ್ರಕ್ಕೆ ಸೂಚಿಸಿ ಪ್ರಕರಣವನ್ನು ಜುಲೈ 27ಕ್ಕೆ ವಿಚಾರಣೆಗೆ ನಿಗದಿಪಡಿಸಿತು.
ಪರಿಸರಕ್ಕೆ ಸಂಬಂಧಿಸಿದಂತೆ ಈಗಿನ ಎಲ್ಲಾ ನೀತಿಗಳು ಮತ್ತು ಕಾನೂನುಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು (ಪಿಐಎಲ್) ನ್ಯಾಯಾಲಯವು ಆಲಿಸುತ್ತಿದೆ.
ಸಿಒಪಿ ಎಂದು ಸಾಮಾನ್ಯವಾಗಿ ಕರೆಯಲಾಗುವ ಇಂಗ್ಲೆಂಡ್‌ನ ಗ್ಲಾಸ್ಗೋದಲ್ಲಿ 2021ರಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ವಿಶ್ವ ಸಂಸ್ಥೆಯ ಚೌಕಟ್ಟು ಸಮಾವೇಶದಲ್ಲಿ (UNFCCC) ಪ್ಯಾರಿಸ್ ಒಪ್ಪಂದದ ಅನುಸಾರ ಭಾರತ ಮಾಡಿದ ಪ್ರತಿಜ್ಞೆಗಳ ಪಾಲನೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿ ಸಿದ್ಧಪಡಿಸುವಂತೆ ಅರ್ಜಿಯು ಕೋರಿದೆ