ಹವಾಮಾನ ಬದಲಾವಣೆ ಕೇವಲ ಪರಿಸರ ಸಮಸ್ಯೆಯಲ್ಲ, ಮಾನವ ಹಕ್ಕುಗಳು ಮತ್ತು ನ್ಯಾಯ ಕ್ಷೇತ್ರಕ್ಕೂ ಅದು ಸವಾಲು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಹೇಳಿದರು.
ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎಂಎನ್‌ಎಲ್‌ಯು) ನಾಗಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆ, ಡಿಜಿಟಲ್ ಯುಗದಲ್ಲಿ ಗೌಪ್ಯತೆಯ ಆತಂಕ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾವಣೆಗಳು ಕಾನೂನು ಮಧ್ಯಪ್ರವೇಶಿಸಬೇಕಾದ ತುರ್ತು ಸಮಸ್ಯೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಸಿಜೆಐ ಅವರ ಭಾಷಣದ ಪ್ರಮುಖಾಂಶಗಳು
ಹವಾಮಾನ ಬದಲಾವಣೆ ನಮ್ಮ ಪರಿಸರಕ್ಕೆ ಮಾತ್ರವಲ್ಲದೆ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ವ್ಯವಸ್ಥೆಗೂ ಅಪಾಯವನ್ನುಂಟುಮಾಡುತ್ತದೆ.
ಗೌಪ್ಯತೆ, ಭದ್ರತೆ ಮತ್ತು ಮಾನವ ಸಂವಹನದ ಸ್ವರೂಪದ ಬಗ್ಗೆ ಡಿಜಿಟಲ್ ಕ್ರಾಂತಿ ಈ ಹಿಂದೆ ಇರದಿದ್ದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೊಸ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಸಾಮಾಜಿಕ ಚಲನಶೀಲತೆಯಿಂದ ಪ್ರಜಾಪ್ರಭುತ್ವ ಮರುರೂಪಿತವಾಗುತ್ತಿದೆ. ಇವು ಅಮೂರ್ತ ಸಮಸ್ಯೆಗಳಾಗಿರದೆ ಹೊಸ ಪರಿಹಾರ ಬಯಸುವ ಮಾನವೀಯತೆ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮೂಲಭೂತ ಸವಾಲುಗಳಾಗಿವೆ.
ಸಾಂವಿಧಾನಿಕ ವಕೀಲರು ವೈಜ್ಞಾನಿಕ ಪುರಾವೆಗಳೊಂದಿಗೆ ತೊಡಗಿಸಿಕೊಳ್ಳುವುದರಿಂದ ಹಿಡಿದು ಕ್ರಿಮಿನಲ್ ವಕೀಲರು ಡಿಜಿಟಲ್ ವಿಧಿವಿಜ್ಞಾನ ಕ್ಷೇತ್ರದಲ್ಲಿ ಹೋರಾಡುವಷ್ಟರ ಮಟ್ಟಿಗೆ ಇಂದು ಕಾನೂನಿಗೆ ಅಂತರಶಿಸ್ತೀಯ ವೈಧಾನಿಕತೆ ಅಗತ್ಯವಿದೆ.
ವಕೀಲ ವೃತ್ತಿಯಲ್ಲಿ ಅನಿಶ್ಚಿತತೆ ಸಹಜವಾದರೂ ನಾನಿ ಪಾಲ್ಖಿವಾಲಾ ಸೇರಿದಂತೆ ಕೆಲವು ಶ್ರೇಷ್ಠ ಕಾನೂನು ತಜ್ಞರು ಕಾನೂನು ವೃತ್ತಿಗೆ ಬರುವ ಬಗ್ಗೆ ಚಿಂತಿಸಿರಲಿಲ್ಲ. ಆದರೆ ದೊರೆತ ಅವಕಾಶಗಳನ್ನು ಅಪ್ಪಿ ಉತ್ತಮ ಸಾಧನೆ ಮಾಡಿದ್ದಾರೆ.
ಕಾನೂನು ನೆರವು ಮತ್ತು ಮಧ್ಯಸ್ಥಿಕೆ ಮಹತ್ವದ ಅಂಶಗಳಾಗಿದ್ದು ಯುವ ವಕೀಲರು ತಮ್ಮ ವೃತ್ತಿಪರ ಆಕಾಂಕ್ಷೆಗಳನ್ನು ಸಾರ್ವಜನಿಕ ಸೇವೆಯೊಂದಿಗೆ ಸಮತೋಲನಗೊಳಿಸಬೇಕಿದೆ.
ಪದವಿ ಪಡೆಯುವ ವಿದ್ಯಾರ್ಥಿಗಳು ಪ್ರಾಮಾಣಿಕರಾಗಿರಬೇಕು. ಕಾನೂನು ವೃತ್ತಿಯಲ್ಲಿ ಯಶಸ್ಸು ಎಂದರೆ ಏಕತಾನಯಿಂದ ಇರುವುದಲ್ಲ. ಬದಲಿಗೆ ತಮ್ಮದೇ ಆದ ವಿಶಿಷ್ಟ ಸಾಮರ್ಥ್ಯಗಳನ್ನು ಪ್ರದರ್ಶಿಸಬೇಕು.