ಸುದ್ದಿಗಳು

ಜನೌಷಧಿಗಳ ಮುಚ್ಚುವ ಸರ್ಕಾರದ ಆದೇಶ ರದ್ದು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸಂಬಂಧ 2025ರ ಮೇ 14ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹಲವು ಜನೌಷಧಿ ಕೇಂದ್ರಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

Bar & Bench

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸುತ್ತೋಲೆಯನ್ನು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ಸಂಬಂಧ ಕೇಂದ್ರ ಸರ್ಕಾರಕ್ಕೆ ವಿಭಾಗೀಯ ಪೀಠವು ಗುರುವಾರ ನೋಟಿಸ್‌ ಜಾರಿ ಮಾಡಿದೆ.

ರಾಜ್ಯ ಸರ್ಕಾರದ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಸ್ವಾಮ್ಯದ ಭಾರತೀಯ ಔಷಧ ಮತ್ತು ವೈದ್ಯಕೀಯ ಸಾಧನಗಳ ಬ್ಯೂರೋ (ಪಿಎಂಬಿಐ) ಹಾಗೂ ಜನೌಷಧಿ ಕೇಂದ್ರದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ಸಿಗಬೇಕು ಎಂಬುದು ಸರ್ಕಾರದ ನೀತಿಯಾಗಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಇದೊಂದು ಸರ್ಕಾರದ ನೀತಿ ನಿರ್ಣಯವಾಗಿದೆ" ಎಂದರು. ಮುಂದುವರೆದು ಉಚಿತವಾಗಿ ಕೊಡಬಾರದು ಎಂದು ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ಹೇಳಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

“ರಾಜ್ಯದಲ್ಲಿ ಒಟ್ಟು 1,200ಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಇವೆ. ಈ ಪೈಕಿ 187 ಜನೌಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿದ್ದು, ಅವುಗಳನ್ನು ಮಾತ್ರ ಮುಚ್ಚಲಾಗಿದೆ. ಅದರಲ್ಲೂ ರಾಜ್ಯ ಸರ್ಕಾರವೇ ನಡೆಸುತ್ತಿದ್ದ 61 ಜನೌಷಧಿ ಕೇಂದ್ರಗಳನ್ನೂ ಸಹ ಮುಚ್ಚಲಾಗಿದೆ. ಉಳಿದ 126 ಜನೌಷಧಿ ಕೇಂದ್ರಗಳ ಪರವಾನಗಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, 2018ರಿಂದ 2021ರವರೆಗೆ ಮೂರು ವರ್ಷದ ಅವಧಿಗೆ ಮಾತ್ರ ಪರವಾನಿಗೆ ನೀಡಲಾಗಿತ್ತು” ಎಂದು ಎಜಿ ವಿವರಿಸಿದರು.

ಅದೇ ರೀತಿ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸರ್ಕಾರದ ಮೇಲ್ಮನವಿಯನ್ನು ವಿಚಾರಣೆ ನಡೆಸುವಾಗ ಆ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಒಂದೇ ಪೀಠದ ಮುಂದೆ ವಿಚಾರಣೆಗೆ ಪರಿಗಣಿಸಿದರೆ ಸೂಕ್ತವಾಗಲಿದೆ ಎಂದು ಮನವಿ ಮಾಡಿದರು. ಅದಕ್ಕೆ ಎಲ್ಲಾ ಅರ್ಜಿಗಳನ್ನು ಒಂದೇ ಪೀಠದ ಮುಂದೆ ಪರಿಗಣಿಸುವ ಸಂಬಂಧ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯ ಆಡಳಿತ ವಿಭಾಗಕ್ಕೆ ಪೀಠ ಸೂಚನೆ ನೀಡಿತು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸಂಬಂಧ 2025ರ ಮೇ 14ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹಲವು ಜನೌಷಧಿ ಕೇಂದ್ರಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸರ್ಕಾರದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ 2025ರ ಡಿಸೆಂಬರ್‌ 19ರಂದು ಆದೇಶ ನೀಡಿತ್ತು. ಈಗ ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.