Justice Noushad Ali
Justice Noushad Ali YouTube
ಸುದ್ದಿಗಳು

‘ಸುಪ್ರೀಂ’ಗೆ ಪತ್ರ ಬರೆದ ಆಂಧ್ರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ: ಸಿಎಂ ಜಗನ್‌ ವಿರುದ್ಧ ಆರೋಪಗಳ ಸುರಿಮಳೆ

Bar & Bench

ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಆರೋಪ ಹೊರಿಸಿರುವುದು ನ್ಯಾಯಾಂಗ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ಎಂದು ಆಂಧ್ರಪ್ರದೇಶದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೌಶಾದ್ ಅಲಿ ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದಾರೆ.

ಜಗನ್‌ ಬರೆದ ಪತ್ರ ಮತ್ತು ಅವರು ಮಾಡಿರುವ ಆರೋಪಗಳಿಗೆ ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳ ಕುರಿತಂತೆ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವ ಉದ್ದೇಶ ಇದೆ ಎಂದು ನ್ಯಾ. ಅಲಿ ಅಭಿಪ್ರಾಯಪಟ್ಟಿದ್ದಾರೆ. ಜಗನ್‌ ರೆಡ್ಡಿ ವಿರುದ್ಧ 31 ಪ್ರಕರಣಗಳಿದ್ದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅಲ್ಲದೆ ಅವರ 13 ಪ್ರಕರಣಗಳನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜಕಾರಣಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್‌ ಆದೇಶಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೀಗೆ ಆರೋಪ ಮಾಡಿರಬಹುದು ಎಂದು ನ್ಯಾ. ಅಲಿ ಅವರು ಹೇಳಿದ್ದು ಇಂತಹ ಹಸ್ತಕ್ಷೇಪದ ವಿರುದ್ಧ ಸುಪ್ರೀಂಕೋರ್ಟ್‌ ದಿಟ್ಟತನ ತೋರಬೇಕೆಂದು ಸಲಹೆ ನೀಡಿದ್ದಾರೆ.

"ಸುಪ್ರೀಂಕೋರ್ಟ್ ಈ ಹಿಂದೆ ಇಂತಹ ದಾಳಿಗಳನ್ನು ಅದರಲ್ಲಿಯೂ ಮುಖ್ಯವಾಗಿ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ ಎದುರಿಸಿದೆ. ಈ ಬಗೆಯ ಆಕ್ರಮಣಗಳನ್ನು ಎದುರಿಸಲು ನ್ಯಾಯಮೂರ್ತಿಗಳು ಧೈರ್ಯಶಾಲಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ರಾಜಕೀಯ ಮತ್ತು ಕಾರ್ಯಾಂಗಗಳು ಹೇಗೆ ನ್ಯಾಯಾಂಗದ ಹೆಸರಿಗೆ ಮಸಿಬಳಿಯುತ್ತಿವೆ ಎಂಬ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಅನುಗ್ರಹಕ್ಕಾಗಿ ರಾಜಕೀಯ ನಾಯಕರು ಇಂತಹ ದಾಳಿ ನಡೆಸಿದ್ದಾರೆ ಎಂದು ಮೊದಲು ಭಾವಿಸಿದ್ದೆ. ಆದರೆ ಮುಖ್ಯಮಂತ್ರಿ ಅವರ ಅಣತಿಯಂತೆಯೇ ಈ ಕೋಲಾಹಲ ಮೂಡಿದೆ ಎಂಬುದು ನಂತರ ನನಗೆ ತಿಳಿಯಿತು ಎಂದು ಹೇಳಿದ್ದಾರೆ.

"ತಮ್ಮ ನಾಯಕ 175 ಸದಸ್ಯ ಬಲದಲ್ಲಿ 151 ಶಾಸಕರ ಆದೇಶವನ್ನು ಹೊಂದಿರುವ ವಿಶಿಷ್ಟ ವ್ಯಕ್ತಿ ಎಂದು ಅವರು ಬಿಂಬಿಸುತ್ತಿದ್ದಾರೆ. ಹಾಗಾಗಿ ನ್ಯಾಯಾಲಯಗಳು ಅವರನ್ನು ತಮಗಿಂತ ಮೇಲು ಎಂದು ಗೌರವಿಸಬೇಕು ಎಂದು ಭಾವಿಸುತ್ತಾರೆ."
ಸಿಜೆಐ ಬೊಬ್ಡೆ ಅವರಿಗೆ ನ್ಯಾ. ನೌಶಾದ್ ಅಲಿ ಅವರು ಬರೆದ ಪತ್ರ

ʼಸಂವಿಧಾನ ನೀಡಿರುವ ಮಹತ್ವದ ಅಧಿಕಾರವನ್ನು ಸಮತೋಲಿತವಾಗಿರಿಸಲು ಮೂರೂ ಅಂಗಗಳನ್ನು ಪರಸ್ಪರ ತಡೆಯಾಗಿಸಿ ವಿನ್ಯಾಸಗೊಳಿಸಲಾಗಿದೆʼ ಎಂದು ಜಗನ್‌ ತಮ್ಮ ಪತ್ರದಲ್ಲಿ ಹೇಳಿರುವುದಕ್ಕೆ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ನ್ಯಾಯಾಂಗ ಅಥವಾ ಸಂಸತ್ತನ್ನು ಮುಖ್ಯಮಂತ್ರಿ ಪ್ರಶ್ನಿಸಬಹುದು ಎಂದು ಅದು ಸೂಚಿಸುತ್ತದೆ. ಸಂವಿಧಾನದಲ್ಲಿ ಅದಕ್ಕೆ ಆಸ್ಪದವಿದೆಯೇ ಎಂಬ ಬಗ್ಗೆ ನನಗೆ ಕಳವಳವಾಗುತ್ತಿದೆ. ನನ್ನ ಅಭಿಪ್ರಾಯದಲ್ಲಿ ಮುಖ್ಯಮಂತ್ರಿ ನಿಜವಾಗಿಯೂ ಭ್ರಮೆಯಲ್ಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿಗಳಿಗೆ ಮುಖ್ಯಮಂತ್ರಿಯೊಬ್ಬರು ಬರೆದ ಪತ್ರದ ಶಿಷ್ಟಾಚಾರವನ್ನೂ ಅವರು ಪ್ರಶ್ನಿಸಿದ್ದಾರೆ.

"ನನ್ನ ವಿನಮ್ರ ಅಭಿಪ್ರಾಯದ ಪ್ರಕಾರ, ನ್ಯಾಯಾಂಗವು ನ್ಯಾಯಿಕ ವ್ಯಾಪ್ತಿಯ ಬಗ್ಗೆ ಖಚಿತತೆ ಹೊಂದಿರುವಾಗ, ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಹಸ್ತಕ್ಷೇಪಕ್ಕಾಗಿ ಅರ್ಜಿ ಸಲ್ಲಿಸುವುದು ನ್ಯಾಯದಾನದ ಕ್ರಿಯೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿದ್ದಕ್ಕೆ ಸಮನಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.

ಹೀಗಾಗಿ, ತಾವು ಬಯಸಿದ ರೀತಿಯ ತೀರ್ಪನ್ನು ಪಡೆಯಲು ಮತ್ತು ನ್ಯಾಯದಾನದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂಬ ನೆಲೆಯಲ್ಲಿ ಜಗನ್‌ ಪತ್ರವನ್ನು ಪರಿಗಣಿಸಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ನೌಶಾದ್ ಅಲಿ ಅವರ ಪತ್ರವನ್ನು ಇಲ್ಲಿ ಓದಿ:

Justice_Noushad_Ali___letter_to_CJI.pdf
Preview