Minister Byrathi Suresh, ED & Karnataka HC 
ಸುದ್ದಿಗಳು

ಇ ಡಿ ಸಮನ್ಸ್‌, ದೂರು ರದ್ದತಿ ಕೋರಿ ಹೈಕೋರ್ಟ್‌ ಕದತಟ್ಟಿದ ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌

ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಅರ್ಜಿ ಉಲ್ಲೇಖಿಸಿದರು. ದಿನದಾಂತ್ಯಕ್ಕೆ ಅರ್ಜಿಗಳ ವಿಚಾರಣೆ ನಡೆಸಲಾಗುವುದು ಎಂದ ಪೀಠ.

Bar & Bench

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರು ಮತ್ತು ತನಿಖೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್‌ 50ರ ಅಡಿ ಜಾರಿ ಮಾಡಿರುವ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಸೋಮವರ ಅರ್ಜಿ ಉಲ್ಲೇಖಿಸಿದರು.

ಎಲ್ಲಾ ಪ್ರಕರಣಗಳು ಮುಗಿದ ಬಳಿಕ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿದರು.

ಹೈಕೋರ್ಟ್‌ ಮುಂದೆ ದಾಖಲಿಸಿರುವ ಮನವಿಯಲ್ಲಿ, ಪ್ರಕರಣವು ಕೆಸರೆ ಗ್ರಾಮದಲ್ಲಿನ 3.14 ಎಕರೆ ಭೂಮಿಯನ್ನು ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿಸಿ ಅದನ್ನು ತನಗೆ ದಾನವಾಗಿ ನೀಡಿದ್ದರು. ಇದನ್ನು ಆನಂತರ ಡಿನೋಟಿಫೈ ಮಾಡಿಸಲಾಗಿದ್ದು, ಇದನ್ನು ತಮ್ಮ‌ ಗಮನಕ್ಕೂ ತರದೇ ಪರಿಹಾರವನ್ನೂ ವಿತರಿಸದೇ ಮುಡಾವು ಲೇಔಟ್‌ ಅಭಿವೃದ್ಧಿಪಡಿಸಲು ಅಕ್ರಮವಾಗಿ ವಶಪಡಿಸಿಕೊಂಡಿತ್ತು ಎನ್ನಲಾಗಿದೆ.

ಮುಂದುವರೆದು, ಹಲವು ಬಾರಿ ಮನವಿ ಸಲ್ಲಿಸಿದ ಬಳಿಕ ಮುಡಾವು ಪರಿಹಾರವಾಗಿ 14 ನಿವೇಶನ ಹಂಚಿಕೆ ಮಾಡಿತ್ತು. ಆನಂತರ 2024ರ ಅಕ್ಟೋಬರ್‌ನಲ್ಲಿ ಅವುಗಳನ್ನು ಮುಡಾಗೆ ಮರಳಿಸಲಾಗಿದೆ. ಅದಾಗ್ಯೂ, ಸಂಬಂಧವೇ ಇಲ್ಲದ ದೂರನ್ನು ಆಧರಿಸಿ, ಹಣ ವರ್ಗಾವಣೆ ನಡೆಯದೇ ಇದ್ದರೂ ಜಾರಿ ನಿರ್ದೇಶನಾಲಯವು ಸಮನ್ಸ್‌ ಜಾರಿ ಮಾಡಿದೆ. ಇದು ಸ್ವೇಚ್ಛೆ, ಕಾನೂನುಬಾಹಿರ ಮತ್ತು ಆಧಾರರಹಿತವಾಗಿರುವುದರಿಂದ ರದ್ದುಪಡಿಸಬೇಕು ಎಂದು ಕೋರಲಾಗಿದೆ.

ಸಚಿವ ಸುರೇಶ್‌ ಮನವಿ ಏನು?

ಸಚಿವ ಸುರೇಶ್‌ ಅವರು ಶಾಸಕರಾಗಿದ್ದು, ಯಾವುದೇ ಪ್ರೆಡಿಕೇಟ್‌ (ಅಕ್ರಮ ಸಂಪತ್ತಿನ ಸೃಜನೆ ಕಾರಣವಾಗುವ ಅಪರಾಧ) ಅಪರಾಧದಲ್ಲಿ ಭಾಗಿಯಾಗಿಲ್ಲ. ಆದರೆ, ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರಿನ ಭಾಗವಾಗಿ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 50ರ ಅಡಿ ಸ್ವೇಚ್ಛೆಯಿಂದ ಸಮನ್ಸ್‌ ಜಾರಿ ಮಾಡಲಾಗಿದೆ. ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ನಂತರ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಆಧರಿಸಿ ಜಾರಿ ನಿರ್ದೇಶನಾಲಯವು ದೂರು ದಾಖಲಿಸಿದೆ ಎಂದು ಸುರೇಶ್‌ ಅವರ ಮನವಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ಲೋಕಾಯುಕ್ತ ಪ್ರಕರಣದಲ್ಲಿ ಸುರೇಶ್‌ ಅವರು ಯಾವುದೇ ಆರೋಪವನ್ನು ಎದುರಿಸುತ್ತಿಲ್ಲ ಮತ್ತು ಆರೋಪಿಯೂ ಆಗಿಲ್ಲ. ಯಾವುದೇ ದಾಖಲೆ ಅಥವಾ ಆರೋಪ ಇಲ್ಲದೆಯೂ, ಹಣ ವರ್ಗಾವಣೆಯಾಗದೇ ಇದ್ದರೂ ಜಾರಿ ನಿರ್ದೇಶನಾಲಯವು ಸಂಬಂಧವೇ ಇಲ್ಲದ ದೂರನ್ನು ಆಧರಿಸಿ ಪ್ರಕ್ರಿಯೆ ಆರಂಭಿಸಿದೆ. ಹೀಗಾಗಿ, ಸ್ವೇಚ್ಛೆ ಆಧಾರರಹಿತ ದೂರು ಮತ್ತು ಸಮನ್ಸ್‌ ಅನ್ನು ರದ್ದುಪಡಿಸಬೇಕು ಎಂದು ಸುರೇಶ್‌ ಕೋರಿದ್ದಾರೆ.