ಇ ಡಿ ವಿರುದ್ಧ ಪ್ರಕರಣ: ಮುಡಾ ಮಾಜಿ ಆಯುಕ್ತ ನಟೇಶ್‌ ಅರ್ಜಿ ಕುರಿತಾದ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪ್ರಕರಣದಲ್ಲಿ ಯಾವುದೇ ಜಫ್ತಿ ಪ್ರಕ್ರಿಯೆ ನಡೆಯದಿದ್ದರೂ ಸಮನ್ಸ್‌ ಜಾರಿ ಮಾಡಲಾಗಿದೆ. ಇದರಿಂದ ಪ್ರಮಾಣಿತ ಹೇಳಿಕೆಯು ಕಾನೂನುಬಾಹಿರವಾಗುತ್ತದೆ. ಈಗ ಇ ಡಿ ನಡೆಸುತ್ತಿರುವುದು ಅವಸರದ ತನಿಖೆಯಾಗಿದೆ ಎಂದು ಆಕ್ಷೇಪಿಸಲಾಗಿದೆ.
ED & Karnataka HC
ED & Karnataka HC
Published on

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತನ್ನ ಮನೆಯಲ್ಲಿ ನಡೆಸಿರುವ ಶೋಧ ಕಾರ್ಯ ಹಾಗೂ ಇದಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿಕೊಂಡಿರುವ ತನ್ನ ಪ್ರಮಾಣಿತ ಹೇಳಿಕೆ ಕಾನೂನು ಬಾಹಿರ ಎಂದು ಆದೇಶಿಸಬೇಕು ಎಂದು ಕೋರಿ ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶ ಕಾಯ್ದಿರಿಸಿದೆ.

ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಹಂಚಿಕೆ ಮಾಡಲಾಗಿದ್ದ‌ 14 ನಿವೇಶನಗಳನ್ನು ಒಳಗೊಂಡ ಪ್ರೆಡಿಕೇಟ್‌ ಅಪರಾಧವನ್ನು (ಅಕ್ರಮ ಹಣ ವರ್ಗಾವಣೆಗೆ ಮೂಲವಾದ ಅಕ್ರಮ ಗಳಿಕೆಗೆ ಕಾರಣವಾದ ಅಪರಾಧ) ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಯತ್ನಿಸುತ್ತಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಎರಡನೆಯದಾಗಿ ಜಾರಿ ನಿರ್ದೇಶನಾಲಯ ನಿರ್ದೇಶಕರು ಅಥವಾ ಅವರು ಸೂಚಿಸುವ ಅಧಿಕಾರಿಗಳು ಇದು ಶೋಧ ಮತ್ತು ಜಫ್ತಿ ನಡೆಸಲು ಸೂಕ್ತ ಪ್ರಕರಣ ಎಂದು ಹೇಳಬೇಕು. ಹಾಲಿ ಪ್ರಕರಣದಲ್ಲಿ ಜಂಟಿ ನಿರ್ದೇಶಕರು ಸಹಾಯಕ ನಿರ್ದೇಶಕರಿಗೆ ತನಿಖೆಗೆ ಅನುಮತಿಸಿದ್ದಾರೆ. ಇದಕ್ಕೆ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 17(1)ರಲ್ಲಿ ಅವಕಾಶವಿಲ್ಲ. ಈ ನೆಲೆಯಲ್ಲಿ ಇಡೀ ಶೋಧ ಮತ್ತು ಜಫ್ತಿ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ” ಎಂದರು.

“ಜಫ್ತಿ ಆದಾಗ ಮಾತ್ರ ಸಮನ್ಸ್‌ ಜಾರಿ ಮಾಡಬೇಕು. ಆದರೆ, ಇಲ್ಲಿ ಯಾವುದೇ ಜಫ್ತಿ ಪ್ರಕ್ರಿಯೆ ನಡೆಯದಿದ್ದರೂ ಸಮನ್ಸ್‌ ಜಾರಿ ಮಾಡಲಾಗಿದೆ. ಇದರಿಂದ ಪ್ರಮಾಣಿತ ಹೇಳಿಕೆಯು ಕಾನೂನುಬಾಹಿರವಾಗುತ್ತದೆ. ಈಗ ಇ ಡಿ ನಡೆಸುತ್ತಿರುವುದು ಅವಸರದ ತನಿಖೆಯಾಗಿದೆ” ಎಂದರು.

Also Read
ಪಿಎಂಎಲ್‌ಎ ಅಡಿ ಮುಡಾ ನಿವೇಶನ ಹಂಚಿಕೆ ತನಿಖೆಯನ್ನು ಇ ಡಿ ನಡೆಸಲು ಸಾಧ್ಯವೇ ಇಲ್ಲ: ಹೈಕೋರ್ಟ್‌ನಲ್ಲಿ ಚೌಟ ವಾದ

ಜಾರಿ ನಿರ್ದೇಶನಾಲಯದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ನಟೇಶ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಇದರ ಅರ್ಥ ಅವರಿಗೆ ಅಕ್ರಮದ ಮಾಹಿತಿ ಇತ್ತು ಎಂಬುದಾಗಿದೆ. ಈ ನೆಲೆಯಲ್ಲಿ ಸಾಕ್ಷಿ ದಾಖಲಿಸಿಕೊಳ್ಳಲು ಅವರಿಗೆ ಸಮನ್ಸ್‌ ನೀಡಲಾಗಿದೆ. ಸದ್ಯ ನಟೇಶ್‌ ಅವರನ್ನು ಆರೋಪಿ ಎಂದು ಘೋಷಿಸಲಾಗಿಲ್ಲ. ನಟೇಶ್‌ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪಿಎಂಎಲ್‌ ಕಾಯಿದೆ ಸೆಕ್ಷನ್‌ 50ರ ಅಡಿ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್‌ ನೀಡುವುದು ಅಥವಾ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲು ಇ ಡಿಗೆ ಅಧಿಕಾರವಿದೆ. ಒಟ್ಟಾರೆಯಾಗಿ ಪಿಎಂಎಲ್‌ ಕಾಯಿದೆ ಸೆಕ್ಷನ್‌ 17(1) ಅನುಗುಣವಾಗಿ ನಟೇಶ್‌ ಅವರ ಹೇಳಿಕೆ ದಾಖಲು ಪ್ರಕ್ರಿಯೆ ನಡೆಸಲಾಗಿದೆ” ಎಂದು ಸಮರ್ಥಿಸಿದರು.

Kannada Bar & Bench
kannada.barandbench.com