Sidharth Luthra 
ಸುದ್ದಿಗಳು

ಕೊಲಿಜಿಯಂ ವ್ಯವಸ್ಥೆ ತನ್ನ ಉದ್ದೇಶ ಮೀರಿದ್ದು ಎನ್‌ಜೆಎಸಿ ಅಗತ್ಯವಿದೆ: ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅಭಿಮತ

ನಿವೃತ್ತಿ ನಂತರವೂ ಹುದ್ದೆ ದೊರೆಯಲಿದೆ ಎಂಬ ಆಮಿಷದಿಂದಾಗಿ ಕೊಲಿಜಿಯಂನಲ್ಲಿರುವವರು ನ್ಯಾಯಾಂಗ ಸ್ವಾತಂತ್ರ್ಯ ಬಲಪಡಿಸುವ ಬದಲು ಹತ್ತಿಕ್ಕುತ್ತಿದ್ದಾರೆ ಎಂದು ಹಿರಿಯ ವಕೀಲ ಲೂಥ್ರಾ ತಿಳಿಸಿದರು.

Bar & Bench

ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ತನ್ನ ಉದ್ದೇಶ ಮೀರಿದ್ದು ಹಿರಿಯ ನ್ಯಾಯಮೂರ್ತಿಗಳು ತಮ್ಮ ಸೀಮಿತ ಅವಧಿಯ ಕಾರಣದಿಂದಾಗಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯುವ ಅನಾರೋಗ್ಯಕರ ಪೈಪೋಟಿಯಲ್ಲಿರುತ್ತಾರೆ. ಇದರಿಂದ ನ್ಯಾಯಾಲಯಗಳು ನೀಡುವ ತೀರ್ಪುಗಳ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ್‌ ಲೂತ್ರಾ ಬೇಸರ ವ್ಯಕ್ತಪಡಿಸಿದರು.

ಹರಿಯಾಣದ ಒ ಪಿ ಜಿಂದಾಲ್ ಜಾಗತಿಕ ಕಾನೂನು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ "ಕಾನೂನು ಮತ್ತು ನೀತಿ ನಿರೂಪಣೆಯ ಸಾಂವಿಧಾನಿಕ ಅಡಿಪಾಯಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗದ ಪಾತ್ರ" ಎಂಬ ವಿಷಯದ ಕುರಿತು ಮಾತನಾಡಿದರು.

ನಮ್ಮ ಸಾಂವಿಧಾನಿಕ ಇತಿಹಾಸದ ಒಂದು ಹಂತದಲ್ಲಿ ಕೊಲಿಜಿಯಂ ವ್ಯವಸ್ಥೆಯು ಅಗತ್ಯವಾಗಿತ್ತು. ಆದರೆ ಅದು ತನ್ನ ಉದ್ದೇಶ ಮೀರಿದ್ದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಿರ್ಬಂಧಿತ ಅಧಿಕಾರಾವಧಿಗೆ ಎಡೆಮಾಡಿಕೊಟ್ಟಿತು. ಇದರಿಂದ ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ಸ್ಥಾನ ದೊರೆಯಬೇಕು ಎಂಬ ಪೈಪೋಟಿ ಹಿರಿಯ ನ್ಯಾಯಮೂರ್ತಿಗಳ ಸುಪ್ತಮನಸ್ಸಿನಲ್ಲಿ ಬೆಳೆದ ಪರಿಣಾಮ ತೀರ್ಪು ನೀಡುವುದರ ಮೇಲೆ ಪರಿಣಾಮ ಉಂಟಾಗಿದೆ ಎಂದು ಅವರು ವಿವರಿಸಿದರು.

ಲೂಥ್ರಾ ಅವರ ಉಪನ್ಯಾಸದ ಪ್ರಮುಖಾಂಶಗಳು

  • ಕೇಂದ್ರ ಸರ್ಕಾರ ಉನ್ನತ ನ್ಯಾಯಾಂಗಕ್ಕೆ ನ್ಯಾಯಮೂರ್ತಿಗಳ ನೇಮಕಾತಿಗಾಗಿ ರೂಪಿಸಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ಸುಪ್ರೀಂ ಕೋರ್ಟ್ 2015ರಲ್ಲಿ ರದ್ದುಗೊಳಿಸಿದ್ದು ಜೇಟ್ಲಿ ಅವರ ಪಾಲಿನ ಏಕೈಕ ವಿಷಾದವಾಗಿತ್ತು.  

  • ನಿವೃತ್ತಿ ನಂತರವೂ ಹುದ್ದೆ ದೊರೆಯಲಿದೆ ಎಂಬ ಆಮಿಷದಿಂದಾಗಿ ಕೊಲಿಜಿಯಂನಲ್ಲಿರುವವರು ನ್ಯಾಯಾಂಗ ಸ್ವಾತಂತ್ರ್ಯ ಬಲಪಡಿಸುವ ಬದಲು ಹತ್ತಿಕ್ಕುತ್ತಿದ್ದಾರೆ.

  • ನೀತಿ ನಿರೂಪಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತೀರ್ಪು ನೀಡಲು ನ್ಯಾಯಾಲಯಗಳು ಅಸಮರ್ಥವಾಗಿವೆ.

  • ಸಂವಿಧಾನ ಅಥವಾ ಕಾನೂನಿಗೆ ವಿರುದ್ಧವಾಗಿರದಿದ್ದರೆ ಇಲ್ಲವೇ ದುರುದ್ದೇಶದಿಂದ ಕೂಡಿರದಿದ್ದರೆ ನೀತಿ ನಿರೂಪಣೆಯಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಾರದು.

  • ಹಣಕಾಸಿನ ಅಥವಾ ಇನ್ನಾವುದೇ ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರಗಳನ್ನು ಕಾರ್ಯಾಂಗದ ನಿರ್ಧಾರಕ್ಕೆ ಬಿಡುವುದು ಉತ್ತಮ. 

  • ನ್ಯಾಯಾಂಗ ಹೆಚ್ಚು ಸಕ್ರಿಯಾತ್ಮಕವಾಗಿರಬೇಕು. ಆದಾಗ್ಯೂ, ನ್ಯಾಯಾಧೀಶರು ಸಂಯಮ ಮತ್ತು ಕ್ರಿಯಾಶೀಲತೆ ನಡುವೆ ಸಮತೋಲನದ ಹಾದಿ ಕಂಡುಕೊಳ್ಳಬೇಕು.

  • ತಮ್ಮ ಪಾಲಿನ ಮನವಿಯ ಕೊನೆಯ ನೆಲೆಯಾಗಿರುವ ನ್ಯಾಯಾಂಗ ಹೆಚ್ಚು ಕ್ರಿಯಾಶೀಲವಾಗಿರಬೇಕೆಂದು ಅವಕಾಶ ವಂಚಿತರು ಮತ್ತು ಸಮಾಜದಂಚಿನಲ್ಲಿರುವವರು ಬಯಸುತ್ತಾರೆ.

  • ತುಂಬಾ ಕಡಿಮೆ ಸಕ್ರಿಯತೆಯು ಉತ್ತಮ ಆಡಳಿತ, ಹಕ್ಕುಗಳು ಮತ್ತು ನ್ಯಾಯದ ಸಾಂವಿಧಾನಿಕ ಪರಿಕಲ್ಪನೆಗಳ ಜಾರಿಯಲ್ಲಿನ ಇಳಿಮುಖತೆಯನ್ನು ತೋರುತ್ತವೆ. ಅತಿಯಾದ ಸಕ್ರಿಯತೆಯು ಈ ಆದರ್ಶಗಳನ್ನು ಅತಿಯಾಗಿ ಜಾರಿಗೊಳಿಸುತ್ತದೆ.

  • ನ್ಯಾಯಾಂಗ ಸಕ್ರಿಯತೆ ಮತ್ತು ನ್ಯಾಯಾಂಗ ಸಂಯಮ ಒಂದೇ ನಾಣ್ಯದ ಎರಡು ಮುಖಗಳು.