Justice Alok Aradhe and Justice Vipul Pancholi 
ಸುದ್ದಿಗಳು

ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ, ವಿಪುಲ್ ಪಂಚೋಲಿ ಸುಪ್ರೀಂ ಕೋರ್ಟ್‌ ಪದೋನ್ನತಿಗೆ ಕೊಲಿಜಿಯಂ ಶಿಫಾರಸ್ಸು

34 ನ್ಯಾಯಮೂರ್ತಿಗಳ ಅನುಮೋದಿತ ಸಂಖ್ಯಾಬಲದ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ 32 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, 2 ಹುದ್ದೆಗಳು ಖಾಲಿ ಇವೆ.

Bar & Bench

ಬಾಂಬೆ ಹೈಕೋರ್ಟ್ ಮತ್ತು ಪಾಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಹಾಗೂ ವಿಪುಲ್ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿಗೊಳಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ,  ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಜೆ ಕೆ ಮಹೇಶ್ವರಿ ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡ ಕೊಲಿಜಿಯಂ ಈ ಶಿಫಾರಸ್ಸು ಮಾಡಿದೆ.

ಆರಾಧೆ ಅವರನ್ನು 2009ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಯಿತು. 2011ರಲ್ಲಿ ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಯಿತು. 2016ರಲ್ಲಿ ಜಮ್ಮು ಕಾಶ್ಮೀರ ಹೈಕೋರ್ಟ್‌ಗೆ ವರ್ಗಾವಣೆಗೊಂಡ ಅವರು 2018ರಲ್ಲಿ 3 ತಿಂಗಳ ಕಾಲ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದರು. ನವೆಂಬರ್ 17, 2018ರಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿ 2022ರಲ್ಲಿ ಕೆಲವು ತಿಂಗಳುಗಳ ಕಾಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದರು.

ಜುಲೈ 2023ರಲ್ಲಿ, ಅವರನ್ನು ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ನಂತರ ಜನವರಿ 2025ರಲ್ಲಿ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಗೊಂಡ ಅವರು ಈವರೆಗೆ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯಾಯಮೂರ್ತಿ ಪಂಚೋಲಿ ಅವರ ಮಾತೃ ಹೈಕೋರ್ಟ್ ಗುಜರಾತ್. ಅವರನ್ನು ಜುಲೈ 2023 ರಲ್ಲಿ ಪಾಟ್ನಾಗೆ ವರ್ಗಾವಣೆ ಮಾಡಲಾಯಿತು. ಅಕ್ಟೋಬರ್ 1, 2014 ರಂದು ಗುಜರಾತ್ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಅವರಿಗೆ ಪದೋನ್ನತಿ ನೀಡಲಾಯಿತು ಮತ್ತು ಜೂನ್ 10, 2016ರಂದು ಹುದ್ದೆ ಖಾಯಂಗೊಂಡಿತು. ಗುಜರಾತ್ ಹೈಕೋರ್ಟ್ ವಕೀಲರ ಸಂಘ ವಿರೋಧ ನಡುವೆಯೇ ಅವರನ್ನು ಗುಜರಾತ್‌ನಿಂದ ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.

34 ನ್ಯಾಯಮೂರ್ತಿಗಳ ಅನುಮೋದಿತ ಸಂಖ್ಯಾಬಲದ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ  32 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, 2 ಹುದ್ದೆಗಳು ಖಾಲಿ ಇವೆ.