ಸುದ್ದಿಗಳು

ಎನ್‌ಜೆಎಸಿಗಿಂತ ಕೊಲಿಜಿಯಂ ವ್ಯವಸ್ಥೆ ಉತ್ತಮ: ನಿವೃತ್ತ ಸಿಜೆಐ ಯು ಯು ಲಲಿತ್

Bar & Bench

2015ರಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕಿಂತಲೂ (ಎನ್‌ಜೆಎಸಿ) ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ  ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಉತ್ತಮವಾಗಿದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ (ಸಿಜೆಐ) ಇತ್ತೀಚೆಗೆ ಹೇಳಿದ್ದಾರೆ.

ಟೈಮ್ಸ್‌ ನೌ ಸಮಿಟ್- 2022ರಲ್ಲಿ 'ನ್ಯಾಯಾಂಗ ವ್ಯವಸ್ಥೆಯನ್ನು ಮಂದಗತಿಗೆ ದೂಡುತ್ತಿರುವುದು ಏನು?' ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ನ್ಯಾಯಾಂಗದ ಬಗೆಗಿನ ತಿಳಿವಳಿಕೆಗೆ ಸಂಬಂಧಿಸಿದಂತೆ ಎನ್‌ಜೆಎಸಿ ಯಾವತ್ತೂ ಹೊರಗಿನ ಸಂಸ್ಥೆಯಾಗಿರುತ್ತದೆ. ಆದರೆ ಕೊಲಿಜಿಯಂ ಎಂಬುದು ಅಭ್ಯರ್ಥಿಗಳ ಒಳ- ಹೊರಗನ್ನು ತಿಳಿದಿರುವ ನ್ಯಾಯಮೂರ್ತಿಗಳಿಂದ ಕೂಡಿದೆ ಎಂದು ನಿವೃತ್ತ ಸಿಜೆಐ ತಿಳಿಸಿದ್ದಾರೆ.

ನ್ಯಾ. ಲಲಿತ್‌ ಅವರ ಮಾತಿನ ಪ್ರಮುಖಾಂಶಗಳು

  • ನ್ಯಾಯಾಲಯಗಳ ಅಧೀನತೆಯಿಂದಾಗಿ ಹೈಕೋರ್ಟ್‌ ಸದಾ ಜಿಲ್ಲಾ ನ್ಯಾಯಾಂಗದ ಮೇಲೆ ನಿಯಂತ್ರಣ ಹೊಂದಿರುತ್ತದೆ. ಅಲ್ಲಿನ ಪ್ರತಿಭೆಗಳ ಬಗ್ಗೆ ಅದಕ್ಕೆ ತಿಳಿದಿರುತ್ತದೆ. ಮೇಲ್ಮನವಿ ಅಥವಾ ಪರಿಷ್ಕರಣೆ ಪ್ರಕ್ರಿಯೆಗಳ ಮೂಲಕ, ಬರೆದ ತೀರ್ಪುಗಳನ್ನು ಹೈಕೋರ್ಟ್‌ ಕಂಡಿರುತ್ತದೆ. ಹೀಗಾಗಿ ಹೈಕೋರ್ಟ್‌ ಜಿಲ್ಲಾ ನ್ಯಾಯಾಧೀಶರ ಸಾಮರ್ಥ್ಯವನ್ನು ಅನುದಿನವೂ ಪರೀಕ್ಷಿಸುತ್ತದೆ. ಅವರ ಪದೋನ್ನತಿ, ನಿಯುಕ್ತಿ ಎಲ್ಲವನ್ನೂ ಹೈಕೋರ್ಟ್‌ ಮಾಡುತ್ತದೆ.  ಜಿಲ್ಲಾ ನ್ಯಾಯಾಂಗದಲ್ಲಿ ಯಾವ ರೀತಿಯ ಪ್ರತಿಭೆಗಳಿವೆ ಎಂಬುದನ್ನು ಅರಿಯಲು ಹೈಕೋರ್ಟ್‌ ಅತ್ಯುತ್ತಮವಾದುದು.

  • ಅದೇ ರೀತಿ ತಮ್ಮೆದುರು ವಾದ ಮಂಡಿಸುವ ವಕೀಲರ ಸಾಮರ್ಥ್ಯದ ಬಗ್ಗೆಯೂ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ತಿಳಿದಿರುತ್ತದೆ.

  • ಕಾಲ ಕ್ರಮೇಣ ಸ್ವಾಭಾವಿಕವಾಗಿ ನ್ಯಾಯಮೂರ್ತಿಗಳು ತಮ್ಮ ಮುಂದೆ ಪ್ರಾಕ್ಟೀಸ್‌ ಮಾಡುವ ಪ್ರತಿಭೆಯ ಬಗ್ಗೆ ಅಗಾಧ ತಿಳಿವಳಿಕೆ ಬೆಳಿಸಿಕೊಂಡಿರುತ್ತಾರೆ. ತಮ್ಮೆದುರು ವಾದ ಮಂಡಿಸುತ್ತಿರುವ ವಕೀಲರು ಎಲ್ಲಿ ಸಲ್ಲಬಲ್ಲರು ಎಂಬುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ.

  • ಅಂತಿಮವಾಗಿ, ಹೈಕೋರ್ಟ್ ಕೊಲಿಜಿಯಂನ ಮುಖ್ಯಸ್ಥರಾಗಿರುವ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಸಾಮಾನ್ಯವಾಗಿ ರಾಜ್ಯದ ಹೊರಗಿನವರಾಗಿರುವುದರಿಂದ, ವಸ್ತುನಿಷ್ಠತೆಯ ಸಮಸ್ಯೆ ಇರದು.

  • ಕೊಲಿಜಿಯಂನಲ್ಲಿ ಸಮಸ್ಯೆಗಳಿದ್ದರೆ ಸುಕ್ಕುಗಟ್ಟಿರುವ ಬಟ್ಟೆಯನ್ನು ಇಸ್ತ್ರಿ ಮಾಡುವಂತೆ ಸರಿಪಡಿಸಿಕೊಳ್ಳಬೇಕಾಗುತ್ತದೆ.

  • ನ್ಯಾಯಮೂರ್ತಿಗಳೇ ತಮ್ಮ ಉತ್ತರಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ವಿಶಿಷ್ಟ ಕಲ್ಪನೆ ಬಹುಶಃ ಭಾರತದಲ್ಲಿ ಮಾತ್ರ ಇದೆ.

  • ಸಂವಿಧಾನವನ್ನು ಎತ್ತಿಹಿಡಿಯುವ ಮತ್ತು ಕೊಲಿಜಿಯಂ ವ್ಯವಸ್ಥೆಯನ್ನು ಎತ್ತಿಹಿಡಿದ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಆ ವ್ಯವಸ್ಥೆಯ ಅಡಿ ಕೆಲಸ ಮಾಡುವ ಬಾದ್ಯತೆ ನನ್ನದು.

  • (ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಬಿಕ್ಕಟ್ಟು ತಾರಕಕ್ಕೇರಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ) ಮುಖ್ಯ ಚುನಾವಣಾ ಆಯುಕ್ತರ ನೇಮಕವನ್ನು ವಿಷಯಾಧಾರಿತವಾಗಿ ಪ್ರಶ್ನಿಸಿದರೆ, ಆ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುವುದು ನ್ಯಾಯಾಲಯದ ಬಾಧ್ಯತೆ. ಆ ಪ್ರಶ್ನೆ ಕೇಳಿದ್ದರೆ  ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸಂಘರ್ಷ ಇದೆ ಎಂದು ಅರ್ಥವಲ್ಲ. ಇದು ಉತ್ತರಗಳನ್ನು ಪಡೆಯುವ ವಿಶಿಷ್ಟ ವಿಧಾನವಾಗಿದ್ದು ಸುಪ್ರೀಂ ಕೋರ್ಟ್‌ಗೆ ಹಾಗೆ ಮಾಡಲು ಅರ್ಹತೆಯಿದ್ದು ಖಂಡಿತವಾಗಿಯೂ ಅದು ಅದರ ಕರ್ತವ್ಯವಾಗಿದೆ.