ಸುದ್ದಿಗಳು

ಕೊಲಿಜಿಯಂ ವ್ಯವಸ್ಥೆ ದೋಷರಹಿತ, ಅದು ಉಳಿಯಲಿದೆ; ಕಾನೂನು ಸಚಿವರ ಅಭಿಪ್ರಾಯ ವೈಯಕ್ತಿಕ: ನಿಕಟಪೂರ್ವ ಸಿಜೆಐ ಲಲಿತ್

ಕೊಲಿಜಿಯಂ ಎಂಬುದು ಸ್ಥಾಪಿತ ನಡವಳಿಯಾಗಿದ್ದು ಕಾನೂನು ಸಚಿವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಕೊಲಿಜಿಯಂ ವ್ಯವಸ್ಥೆ ಸುಪ್ರೀಂ ಕೋರ್ಟ್‌ನ ಐದು ನ್ಯಾಯಮೂರ್ತಿಗಳ ಪೀಠದ ಅನುಮೋದನೆ ಪಡೆದಿದೆ.

Bar & Bench

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ದೋಷರಹಿತವಾಗಿದ್ದು ಅದು ಉಳಿಯಲಿದೆ ಎಂದು ಸುಪ್ರೀಂ ಕೋರ್ಟ್‌ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ತಿಳಿಸಿದರು.

ಈ ಸಂಬಂಧ ಬಾರ್‌ ಅಂಡ್‌ ಬೆಂಚ್‌ಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು  ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಕೇಂದ್ರ ಕಾನೂನು ಸಚಿವರು ಇತ್ತೀಚೆಗೆ ನೀಡಿದ ಹೇಳಿಕೆಗಳು  ಕೇವಲ ಅವರ ವೈಯಕ್ತಿಕ ಅಭಿಪ್ರಾಯ ಎಂದು ಇತ್ತೀಚೆಗಷ್ಟೇ ನಿವೃತ್ತರಾದ ಸಿಜೆಐ ಲಲಿತ್‌ ತಿಳಿಸಿದರು.

ಪ್ರಮುಖಾಂಶಗಳು

  • ಕೊಲಿಜಿಯಂ ಎಂಬುದು ಸ್ಥಾಪಿತ ನಡವಳಿಯಾಗಿದ್ದು ಕಾನೂನು ಸಚಿವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಕೊಲಿಜಿಯಂ ವ್ಯವಸ್ಥೆ ಸುಪ್ರೀಂ ಕೋರ್ಟ್‌ನ ಐದು ನ್ಯಾಯಮೂರ್ತಿಗಳ ಪೀಠದ ಅನುಮೋದನೆ ಪಡೆದಿದೆ.

  • ಕೊಲಿಜಿಯಂ ವ್ಯವಸ್ಥೆ ಉಳಿಯಬೇಕಿದೆ. ನ್ಯಾಯಮೂರ್ತಿಗಳು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಮೂಲಭೂತ ಭಾಗವು ಸ್ಥಾಪಿತವಾದ ನಡವಳಿಯಾಗಿದೆ. ಆದ್ದರಿಂದ ಆ ಅಧಿಕಾರ ವ್ಯಾಪ್ತಿಯ ಅಂತಿಮ ಎಲ್ಲೆಗಳ ಬಗ್ಗೆ ಕೇಂದ್ರ ಸರ್ಕಾರ  ಕಾಲಮಿತಿಯಂತೆ ಕೆಲಸ ಮಾಡಬಹುದು. ಆದರೆ ನಾವು ಸ್ಥಾಪಿತ ಮಾನದಂಡ  ಮೀರಿ ಹೋಗಲಾರೆವು.

  • ಕೊಲಿಜಿಯಂ ನ್ಯಾಯಮೂರ್ತಿಗಳು ಸಾಮಾನ್ಯವಾಗಿ ಇತರ ರಾಜ್ಯಗಳಿಂದ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುತ್ತಾರೆ. ಆ ಕುರಿತು ಪರಿಶೀಲನೆ ನಡೆದಿರುತ್ತದೆ. ಅಲ್ಲದೆ ಗುಪ್ತಚರ ದಳದ ವರದಿಗಳು ಇರುತ್ತವೆ. ಬಳಿಕ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅದನ್ನು ಪರಿಶೀಲಿಸುತ್ತದೆ. ಸಾಕಷ್ಟು ಪರಿಶೀಲನೆ ನಡೆದಿರುತ್ತದೆ.  

  • ಎಲ್ಲಾ ಕೊಲಿಜಿಯಂ ಸದಸ್ಯರಿಗೂ ತಮ್ಮ ಅಭಿಪ್ರಾಯ ಮಂಡಿಸುವ ಅವಕಾಶ ಇರುತ್ತದೆ. ಈ ಕಾರಣದಿಂದಾಗಿ ನಾವು ಸಿಜೆಐ ರಮಣ ನೇತೃತ್ವದ ಕೊಲಿಜಿಯಂನಲ್ಲಿ ಸುಮಾರು 250 ನ್ಯಾಯಮೂರ್ತಿಗಳ ನೇಮಕ ಮಾಡಿದ್ದೇವೆ. ಅಂಕಿ ಅಂಶಗಳೇ ಸ್ವತಃ ಮಾತನಾಡುತ್ತವೆ.  

  • (ನ್ಯಾಯಮೂರ್ತಿಗಳನ್ನು ನೇಮಿಸದೇ ಇರಲು ಕಾರಣ ನೀಡದಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ) ಕೆಲವೊಮ್ಮೆ ಹಾಗೆ ಕಾರಣ ನೀಡದಿರುವುದಕ್ಕೆ ಆದಾಯದ ಮಾನದಂಡ ಇತ್ಯಾದಿ ಅಂಶಗಳು ಕಾರಣವಾಗಿರಬಹುದು. ಜೊತೆಗೆ ಒಂದು ವೇಳೆ ಕೊಲಿಜಿಯಂ ಹೆಸರನ್ನು ತಿರಸ್ಕರಿಸಿದರೆ ಆಗ ಅಭ್ಯರ್ಥಿಗೆ ನಕಾರಾತ್ಮಕ ಹಣೆಪಟ್ಟಿ ಹಚ್ಚುವ ಹಿನ್ನೆಲೆಯಲ್ಲಿ ಕಾರಣಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವುದಿಲ್ಲ. 

  • (ಕೊಲಿಜಿಯಂ ಪಾರದರ್ಶಕತೆ ಕುರಿತು ಪ್ರತಿಕ್ರಿಯಿಸುತ್ತಾ) ಸ್ವಭಾವತಃ ಖಾಲಿ ಹುದ್ದೆಗಳಿಗೆ ಮಾಹಿತಿ ಸಂಗ್ರಹಿಸುವುದು ಮತ್ತು ಹಲವಾರು ಅಭ್ಯರ್ಥಿಗಳನ್ನು ಒಳಗೊಂಡಿರುವುದರಿಂದ ಪಾರದರ್ಶಕವಾಗಿರಲು ಸಾಧ್ಯವಿಲ್ಲ. ಆದರೆ ನೇಮಕಾತಿ ನಿರ್ಧಾರಗಳು ಪಾರದರ್ಶಕವಾಗಿರುತ್ತವೆ.

  • (ನ್ಯಾಯಮೂರ್ತಿಗಳ ಮೌಖಿಕ ಅವಲೋಕನಗಳ ವರದಿಗಾರಿಕೆ ಕುರಿತಂತೆ ವಿವರಿಸುತ್ತಾ) ನ್ಯಾಯಮೂರ್ತಿಗಳಿಗೆ ಸ್ಪಷ್ಟವಲ್ಲದ ವಿಷಯಗಳು ಎದುರಾದಾಗ ಉತ್ತರ ಪಡೆಯಲು ಅವರು ವಕೀಲರನ್ನು ಪ್ರಶ್ನಿಸಬಹುದು. ಇವು ನ್ಯಾಯಾಲಯದೊಳಗಿನ ಮಾತುಕತೆಗಳು. ಆದರೆ ಸಾಮಾಜಿಕ ಮಾಧ್ಯಮ ಅಂತಹ ಹೇಳಿಕೆಗಳನ್ನೇ ಆಯ್ದುಕೊಂಡುಬಿಡುತ್ತದೆ. ಹೀಗಾಗಿ ಸಾಮಾಜಿಕ ಮಾಧ್ಯಮ ಮತ್ತು ವರದಿಗಾರಿಕೆ ಜವಾಬ್ದಾರಿಯುತವಾಗಿರಬೇಕು.

  • (ಕರ್ನಾಟಕದ ಹಿರಿಯ ನ್ಯಾಯವಾದಿಯೊಬ್ಬರು ನ್ಯಾಯಮೂರ್ತಿಯಾಗುವುದಕ್ಕೆ ಒಪ್ಪಿಗೆ ನೀಡದಿರುವುದಕ್ಕೆ ಪ್ರತಿಕ್ರಿಯಿಸುತ್ತಾ)  ಕರ್ನಾಟಕ ಮೂಲದ ಒಬ್ಬ ಉತ್ತಮ ಹಿರಿಯರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಆದರೆ ಅವರನ್ನು ನೇಮಕ ಮಾಡಲಾಗಲಿಲ್ಲ. ಒಂದು ವರ್ಷದ ನಂತರ ಅವರ ತಾಳ್ಮೆಯ ಕಟ್ಟೆ ಒಡೆಯಿತು. ಅವರು ಕೊಲಿಜಿಯಂಗೆ ಪತ್ರ ಬರೆದು ಹೈಕೋರ್ಟ್ ನ್ಯಾಯಮೂರ್ತಿಯಾಗಲು ತಮ್ಮ ಒಪ್ಪಿಗೆ ಇಲ್ಲ ಎಂದರು. ನ್ಯಾಯಾಂಗ ಒಂದು ಪ್ರತಿಭೆಯನ್ನು ಕಳೆದುಕೊಂಡಿತು.

  • ಪ್ರಕರಣಗಳ ಬಾಕಿ ಹೆಚ್ಚುತ್ತಲೇ ಇರುತ್ತದೆ. ಅದನ್ನು ಕಡಿಮೆ ಮಾಡುತ್ತಿರಬೇಕು… ನಿಯಮಿತ ಶಾಸನಾತ್ಮಕ ಮೇಲ್ಮನವಿಗಳನ್ನು ಆಲಿಸದಂತೆ ಸಾಕಷ್ಟು ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ವಿದ್ಯುಚ್ಛಕ್ತಿ ನ್ಯಾಯಮಂಡಳಿ, ಸಶಸ್ತ್ರ ಪಡೆ ನ್ಯಾಯಮಂಡಳಿಯಿಂದ ಮೇಲ್ಮನವಿಗಳು ಸುಪ್ರೀಂ ಕೋರ್ಟ್‌ಗೆ ಬರುತ್ತಿದ್ದು ಮೇಲ್ಮನವಿ ನ್ಯಾಯವ್ಯಾಪ್ತಿಗೆ ಒತ್ತಡ ಹೇರುತ್ತಿವೆ. ಸಂವಿಧಾನದ 136ನೇ ವಿಧಿಯ ಅಡಿಯಲ್ಲಿ ಅದನ್ನು ಜಾರಿಗೆ ತರುವುದು ಬದಲಾವಣೆಯ ಮಾರ್ಗವಾಗಿದೆ ಎಂದು ನನ್ನ ನಂಬಿಕೆ.

  • ನ್ಯಾಯಾಂಗದೆಲ್ಲೆಡೆ ಮಹಿಳಾ ನ್ಯಾಯಮೂರ್ತಿಗಳ ನೇಮಕಾತಿಗೆ ಆದ್ಯತೆ ನೀಡಬೇಕು. ಅದನ್ನು ಹೇಗೆ ಸಾಧಿಸುತ್ತೀರಿ? ಕಡಿಮೆ ಸಂಖ್ಯೆಯ ಮಹಿಳಾ ವಕೀಲರಿದ್ದು ಆ ಕಡಿಮೆ ಸಂಖ್ಯೆಗೇ ಪ್ರೋತ್ಸಾಹ ನೀಡಬೇಕಿದೆ. ರಾಜಸ್ಥಾನ ಪ್ರವೇಶಾತಿ ತರಬೇತಿ ವೇಳೆ 126 ಅಭ್ಯರ್ಥಿಗಳಲ್ಲಿ, 118 ಮಂದಿ ಮಹಿಳೆಯರೇ ಇದ್ದರು. ಹಾಗಾಗಿ ಇಲ್ಲಿನ ಪ್ರತಿಭೆಗಳನ್ನೇ ಸುಪ್ರೀಂ ಕೋರ್ಟ್‌ಗೆ ತರಬಹುದು.