Supreme Court
Supreme Court 
ಸುದ್ದಿಗಳು

ಬಾಡಿಗೆ ತಾಯ್ತನ ಕಾಯಿದೆಯಡಿ ಬಾಡಿಗೆ ತಾಯಂದಿರು ಸ್ವಂತ ಸಂತಾನೋತ್ಪತ್ತಿ ಕೋಶಗಳನ್ನು ನೀಡುವಂತಿಲ್ಲ: ಸುಪ್ರೀಂಗೆ ಕೇಂದ್ರ

Bar & Bench

ಬಾಡಿಗೆ ತಾಯ್ತನದಿಂದ ಹುಟ್ಟುವ ಮಗುವಿಗೆ ಬಾಡಿಗೆ ತಾಯಂದಿರು ತಮ್ಮ ಸ್ವಂತ ಸಂತಾನೋತ್ಪತ್ತಿ ಕೋಶಗಳನ್ನು (ಅಂಡಾಣುಗಳು ಇಲ್ಲವೇ ಅಂಡಾಣುಕೋಶಗಳು) ಒದಗಿಸಲು ಬಾಡಿಗೆ ತಾಯ್ತನ ಕಾಯಿದೆಯಡಿ ಅನುಮತಿ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಅರುಣ್‌ ಮುಥಿವೇಲ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಈ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿರುವ ಲಿಖಿತ ಅರ್ಜಿಯಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಸ್ತುತಪಡಿಸಲಾಗಿದೆ:

  • ಬಾಡಿಗೆ ತಾಯಂದಿರು ಬಾಡಿಗೆ ತಾಯ್ತನದ ಮೂಲಕ ಜನಿಸುವ ಮಗುವಿಗೆ ಆನುವಂಶಿಕ ಸಂಬಂಧ ಹೊಂದಿರುವಂತಿಲ್ಲ ಎಂದು ಬಾಡಿಗೆ ತಾಯ್ತನ ಕಾಯಿದೆ ಹೇಳುತ್ತದೆ.

  • ಯಾವುದೇ ಮಹಿಳೆ ತನ್ನ ಸ್ವಂತ ಸಂತಾನೋತ್ಪತ್ತಿ ಕೋಶ (gametes) ಒದಗಿಸುವ ಮೂಲಕ ಬಾಡಿಗೆ ತಾಯಿಯಾಗಿ ವರ್ತಿಸಬಾರದು ಎಂದು ಬಾಡಿಗೆ ತಾಯ್ತನ ಕಾಯಿದೆಯ ಸೆಕ್ಷನ್ 4 (iii) (ಬಿ) (III)  ಸೂಚಿಸುತ್ತದೆ.

  • ಬಾಡಿಗೆ ತಾಯ್ತನದ ಮೂಲಕ ಜನಿಸುವ ಮಗುವು ಶಿಶು ಪಡೆಯಲು ಬಯಸಿರುವ ದಂಪತಿ ಅಥವಾ ಮಹಿಳೆಗೆ (ವಿಧವೆ ಅಥವಾ ವಿಚ್ಛೇದಿತ) ವಂಶವಾಹಿಯಾಗಿ ಸಂಬಂಧ ಹೊಂದಿರಬೇಕು. ಇದರರ್ಥ ಶಿಶು ಪಡೆಯಲು ಬಯಸಿರುವ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಜನಿಸುವ ಮಗುವು ಅಂತಹ ದಂಪತಿಗಳ ಸಂತಾನೋತ್ಪತ್ತಿ ಕೋಶಗಳಿಂದ ರೂಪುಗೊಳ್ಳಬೇಕು, ಅಂದರೆ ಮಗು ಪಡೆಯಲು ಬಯಸುವ ತಂದೆಯ ವೀರ್ಯ ಮತ್ತು ತಾಯಿಯ ಅಂಡಾಣುಕೋಶಗಳಿಂದ ಜನಿಸಿರಬೇಕು. ಅದೇ ರೀತಿ ಬಾಡಿಗೆ ತಾಯ್ತನದ ಮೂಲಕ ಏಕ ಪೋಷಕಿಗೆ (ವಿಧವೆ ಅಥವಾ ವಿಚ್ಛೇದಿತ ತಾಯಿ) ಜನಿಸುವ ಮಗುವನ್ನು ; ಶಿಶು ಪಡೆಯಲು ಬಯಸಿರುವ ಮಹಿಳೆಯ ಅಂಡಾಣು ಮತ್ತು ದಾನಿಯ ವೀರ್ಯದಿಂದ ರೂಪಿಸಬೇಕು.

ಬಾಡಿಗೆ ತಾಯ್ತನ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಗೆ ಕೇಂದ್ರ ಈ ಪ್ರತಿಕ್ರಿಯೆ ನೀಡಿದೆ. ಗಮನಾರ್ಹ ಅಂಶವೆಂದರೆ, ಬಾಡಿಗೆ ತಾಯಂದಿರು ತಮ್ಮ ಸ್ವಂತ ಸಂತಾನೋತ್ಪತ್ತಿ ಕೋಶಗಳನ್ನು ಬಾಡಿಗೆ ಮಗುವಿಗೆ ಒದಗಿಸುವುದನ್ನು ಕೂಡ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಅರ್ಜಿದಾರರು ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ- 2021 ಮತ್ತು ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ) ಕಾಯಿದೆ- 2021ನ್ನು (ಎಆರ್‌ಟಿ ಕಾಯಿದೆ) ಹಾಗೂ ಈ ಕಾಯಿದೆಗಳಡಿ ರೂಪಿತವಾಗಿರುವ ನಿಯಮಗಳ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.