Karnataka State Contractors’ Association president D Kempanna and Minister Muniratna 
ಸುದ್ದಿಗಳು

ಕಮಿಷನ್‌ ಪ್ರಕರಣ: ಗುತ್ತಿಗೆ ಸಂಘದ ಪದಾಧಿಕಾರಿಗಳು, ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದ ನ್ಯಾಯಾಲಯ

ಸಚಿವ ಮುನಿರತ್ನ ಅವರು ಸಲ್ಲಿಸಿದ್ದ ಮೂಲ ದಾವೆ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಎನ್‌ ಕೃಷ್ಣಯ್ಯ ಅವರು ಆದೇಶ ಮಾಡಿದ್ದಾರೆ.

Siddesh M S

ಕಮಿಷನ್‌ ಅಥವಾ ಪರ್ಸೆಂಟೇಜ್‌ ವಿಚಾರಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಸೇರಿದಂತೆ 19 ಪ್ರತಿವಾದಿಗಳು ನೀಡುವ ಯಾವುದೇ ತೆರನಾದ ಮಾನಹಾನಿಕಾರ ವಿಚಾರಗಳನ್ನು ಪ್ರಕಟ ಅಥವಾ ಪ್ರಸಾರ ಮಾಡದಂತೆ, ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡದಂತೆ ಪತ್ರಿಕೆ, ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ವಿರುದ್ಧ ಈಚೆಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಸಚಿವ ಮುನಿರತ್ನ ಅವರು ಸಲ್ಲಿಸಿದ್ದ ಅಸಲು ದಾವೆ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಎನ್‌ ಕೃಷ್ಣಯ್ಯ ಅವರು ಆದೇಶ ಮಾಡಿದ್ದಾರೆ.

ಅರ್ಜಿದಾರ ಮುನಿರತ್ನ ಅವರ ವಿರುದ್ಧ ಕಮಿಷನ್‌ ಅಥವಾ ಪರ್ಸೆಂಟೇಜ್‌ ಕುರಿತಾಗಿ 1ರಿಂದ 19ನೇ ಪ್ರತಿವಾದಿಗಳು ನೀಡುವ ಯಾವುದೇ ಮಾನಹಾನಿಕರ ಹೇಳಿಕೆಯನ್ನು 20ರಿಂದ 42ನೇ ಪ್ರತಿವಾದಿಗಳು ಪ್ರಕಟಿಸದಂತೆ, 43ರಿಂದ 79ನೇ ತಪ್ಪು ಸುದ್ದಿ ಪ್ರಸಾರ ಮಾಡದಂತೆ, 80ರಿಂದ 84ನೇ ಪ್ರತಿವಾದಿಗಳು ಕ್ರಮವಾಗಿ ಯಾವುದೇ ತೆರನಾದ ತಪ್ಪು ಮಾಹಿತಿ ಅಪ್‌ಲೋಡ್‌ ಮತ್ತು ಹಂಚಿಕೆ ಮಾಡದಂತೆ ಮುಂದಿನ ವಿಚಾರಣೆಯವರೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದ ಸತ್ಯ ಪ್ರಕಟಿಸಲು ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡುವುದಕ್ಕೆ ಈ ಆದೇಶವು ಅಡ್ಡಿಯಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಈ ಆದೇಶವನ್ನು ನವೆಂಬರ್‌ 10ರವರೆಗೆ ವಿಸ್ತರಣೆ ಮಾಡಲಾಗಿದೆ.

1ರಿಂದ 5 ಹಾಗೂ 7ರಿಂದ 19, 25, 38, 40, 43, 53, 81, 82ನೇ ಪ್ರತಿವಾದಿಗಳ ಪರವಾಗಿ ವಕಾಲತ್ತು ಹಾಕಲಾಗಿದೆ. ಲಿಖಿತ ಹೇಳಿಕೆ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದ ಪ್ರತಿವಾದಿಗಳಿಗೆ ಮತ್ತೆ ಸಮನ್ಸ್‌ ಜಾರಿ ಮಾಡಲಾಗಿದೆ.

ಪರ್ಸಂಟೇಜ್‌ ಅಥವಾ ಕಮಿಷನ್‌ ಅಥವಾ ಸಂಬಂಧಿತ ವಿಚಾರದ ಕುರಿತು ಮಾಧ್ಯಮ ಮತ್ತು ಪತ್ರಕರ್ತರ ಮುಂದೆ ಮುನಿರತ್ನ ಅವರ ವಿರುದ್ಧ 1ರಿಂದ 19ನೇ ಪ್ರತಿವಾದಿಗಳು, ಗುತ್ತಿಗೆದಾರರ ಸಂಘದ ಸದಸ್ಯರು ಯಾವುದೇ ತೆರನಾದ ಮಾನಹಾನಿಕಾರ ಹೇಳಿಕೆ ನೀಡದಂತೆ ಅವರ ವಿರುದ್ಧ ಶಾಶ್ವತ ಪ್ರತಿಬಂಧಕಾದೇಶ ಮಾಡುವಂತೆ ಸಚಿವ ಮುನಿರತ್ನ ಅರ್ಜಿಯಲ್ಲಿ ಕೋರಿದ್ದಾರೆ.

ಪರ್ಸಂಟೇಜ್‌ ಮತ್ತು ಕಮಿಷನ್‌ಗೆ ಸಂಬಂಧಿಸಿದಂತೆ 1ರಿಂದ 19ನೇ ಪ್ರತಿವಾದಿಗಳು ನೀಡುವ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸದಂತೆ 20ರಿಂದ 42ನೇ ಪ್ರತಿವಾದಿಗಳ ವಿರುದ್ಧ ಹಾಗೂ 43ರಿಂದ 79ನೇ ಪ್ರತಿವಾದಿಗಳು ಯಾವುದೇ ಮಾನಹಾನಿಕಾರಕ ಹೇಳಿಕೆ ಪ್ರಸಾರ ಮಾಡದಂತೆ ಹಾಗೂ 80ರಿಂದ 84ನೇ ಪ್ರತಿವಾದಿಗಳು ಅರ್ಜಿದಾರರ ವಿರುದ್ಧದ ಮಾನಹಾನಿಕಾರ ವಿಡಿಯೊ, ಚಿತ್ರ, ಹೇಳಿಕೆ, ಸಂದರ್ಶನ, ಚರ್ಚೆಗಳನ್ನು ಪ್ರಸಾರ ಅಥವಾ ಪ್ರಕಟ ಮಾಡದಂತೆ ಪ್ರತಿಬಂಧಕಾದೇಶ ಮಾಡಬೇಕು. ಅಲ್ಲದೇ, ಆಕ್ಷೇಪಾರ್ಹ ಹೇಳಿಕೆ, ಮೀಮ್‌, ಹಾಸ್ಯ, ವಿಡಿಯೊ, ಹೇಳಿಕೆಗಳು, ಲೇಖನ, ಚಿತ್ರಗಳನ್ನು ತೆಗೆಯುವಂತೆ 80ರಿಂದ 84ನೇ ಪ್ರತಿವಾದಿಗಳ ವಿರುದ್ಧ ಕಡ್ಡಾಯ ಪ್ರತಿಬಂಧಕಾದೇಶ ಮಾಡಬೇಕು ಎಂಬುದು ಅರ್ಜಿದಾರ ಮುನಿರತ್ನ ಅವರ ಮನವಿ.

ಪ್ರತಿವಾದಿಗಳು ಯಾರ್ಯಾರು?: ಡಿ ಕೆಂಪಣ್ಣ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಸ್ಥೆ, ಕೃಷ್ಣ ರೆಡ್ಡಿ ವಿ, ಶಂಕ ಗೌಡಶನಿ ಎಂ ಎಸ್, ಶಾಂತೇ ಗೌಡ ಕೆ ಎಸ್‌. ರಾಧಕೃಷ್ಣ ನಾಯಕ್‌ ಕೆ, ಮಂಜುನಾಥ್‌ ಆರ್‌, ಅಂಬಿಕಾಪತಿ ಆರ್‌, ದಿನೇಶ್‌ ಬಿ ಸಿ, ಕೃಷ್ಣ ಸಿ ಡಿ, ರವೀಂದ್ರ ಜಿ ಎಂ, ನಟರಾಜ್‌ ಎಚ್‌ ಎಸ್‌, ರಮೇಶ್‌ ಎಂ, ಮಂಜುನಾಥ್‌ ಎನ್‌, ಜಗನ್ನಾಥ್‌ ಶೆಗಜಿ ಬಿ, ಸುರೇಶ್‌ ಭೂಮ ರೆಡ್ಡಿ ಎಸ್‌, ರವಿಚಂಗಪ್ಪ ಕೆ ಎ, ಗುರುಸಿದ್ದಪ್ಪ ಬಿ ಎಸ್‌, ಕರ್ಲೆ ಇಂದ್ರೇಶ್‌, ವಿಜಯವಾಣಿ, ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸಂಜೆವಾಣಿ, ಈ-ಸಂಜೆ, ಈನಾಡು, ದಿನತಂತಿ, ಆಂಧ್ರ ಜ್ಯೋತಿ, ವಿಶ್ವವಾಣಿ, ಅಗ್ನಿ ಆನ್‌ಲೈನ್‌, ಹಾಯ್‌ ಬೆಂಗಳೂರು, ಲಂಕೇಶ್‌ ಪತ್ರಿಕೆ, ಗೌರಿ ಲಂಕೇಶ್‌, ಸಿಟಿ ಟುಡೇ, ಡೈಲಿ ಪಸ್ಬಾನ್‌ ಉರ್ದು ಪತ್ರಿಕೆ, ಡೆಕ್ಕನ್‌ ಹೆರಾಲ್ಡ್‌, ದಿ ಟೈಮ್ಸ್‌ ಆಫ್‌ ಇಂಡಿಯಾ, ದಿ ಹಿಂದೂ, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ಬೆಂಗಳೂರು ಮಿರರ್‌, ನ್ಯೂಸ್‌ 9, ಸಮಯ 24/7, ಜನಶ್ರೀ ನ್ಯೂಸ್‌, ರಾಜ್‌ ಟಿವಿ, ದಿಗ್ವಿಜಯ ಚಾನೆಲ್‌, ಟಿವಿ 5, ಸುದ್ದಿ ಟಿವಿ, ಪೋಕಸ್‌ ಟಿವಿ, ನ್ಯೂಸ್‌ 18 ಕನ್ನಡ, ಪಬ್ಲಿಕ್‌ ಟಿವಿ, ಟಿವಿ 9 ಕನ್ನಡ, ಪ್ರಜಾ ಟಿವಿ, ಕಸ್ತೂರಿ ನ್ಯೂಸ್‌, ಉದಯ್‌ ಟಿ ವಿ, ಪವರ್‌ ಟಿವಿ, ಫೋಕಸ್‌ ಟಿವಿ, ಬಿ ಟಿವಿ, ಸ್ವರಾಜ್‌ ನ್ಯೂಸ್‌, ನ್ಯೂಸ್‌ ಎಕ್ಸ್‌, ಫಸ್ಟ್‌ ನ್ಯೂಸ್‌, ರಿಪಬ್ಲಿಕ್‌ ಟಿವಿ, ಎನ್‌ಡಿಟಿವಿ, ಟೈಮ್ಸ್‌ ನೌ, ಸಿಎನ್‌ಎನ್‌ ನ್ಯೂಸ್‌ 18, ಇಂಡಿಯಾ ಟುಡೆ, ಮಿರರ್‌ ನೌ, ಫೇಸ್‌ಬುಕ್‌, ಗೂಗಲ್‌, ಯೂಟ್ಯೂಬ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.